ಬೆಳ್ತಂಗಡಿ: ಎಲ್ಲಾ ಮಹಿಳೆಯರು ಸ್ವಾವಲಂಬಿಗಳಾಗಬೇಕು, ತಮಗೆ ಇರುವ ಹಕ್ಕುಗಳ ಬಗ್ಗೆ ಅರಿತು ಉದ್ಯೋಗ ಖಾತ್ರಿ ಯೋಜನೆ ಮತ್ತು ಇತರ ಸರಕಾರಿ ಸೌಲಭ್ಯಗಳನ್ನು ಪಡೆಯಲು ಮುಂದಾಗಬೇಕು ಎಂದು ತಾಲೂಕು ಪಂಚಾಯತ್ ಸಂಯೋಜನಾಧಿಕಾರಿ ಜಯಾನಂದ ರವರು ಡಿ.18ರಂದು ಸಾನ್ ತೋಮ್ ಟವರ್ ಬೆಳ್ತಂಗಡಿ ಇಲ್ಲಿ ಆಯೋಜಿಸಿದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷೆ ಮಂಜುಳಾ ಜೋನ್ ರವರು ವಹಿಸಿದ್ದರು.ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾದರ್ ಬಿನೋಯಿ ಎ.ಜೆ ರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಒಕ್ಕೂಟದ ಹಿಂದಿನ ಸಭೆಯ ವರದಿಯನ್ನು ಹಾಗೂ ಒಕ್ಕೂಟದ ವತಿಯಿಂದ ಆಯೋಜಿಸಿದ ಕಾರ್ಯಕ್ರಮಗಳ ವರದಿಯನ್ನು ಕಾರ್ಯದರ್ಶಿ ಲಲಿತರವರು ಮಂಡಿಸಿದರು.ಒಕ್ಕೂಟದ ಲೆಕ್ಕ ಪರಿಶೋಧನಾ ವರದಿಯನ್ನು ಕೋಶಾಧಿಕಾರಿ ಎಲಿಯಮ್ಮ ತೋಮಸ್ ರವರು ಮಂಡಿಸಿದರು.ಮುಂದೆ ಮಾಡಲಾಗುವ ಕಾರ್ಯಕ್ರಮಗಳ ಬಗ್ಗೆ ಕ್ರಿಯಾಯೋಜನೆ ತಯಾರಿಸಲಾಯಿತು.ಗೃಹರಕ್ಷಕ ದಳದ ಮುಖ್ಯಾಧಿಕಾರಿಯಾಗಿ ನಿಷ್ಠೆ ಹಾಗೂ ಪ್ರಾಮಾಣಿಕ ಸೇವೆ ಸಲ್ಲಿಸಿದ ಜಯಾನಂದ ಇವರನ್ನು ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು.
ಒಕ್ಕೂಟದ ಸದಸ್ಯರಾದ ಸಂಧ್ಯಾರವರು ಪ್ರಾರ್ಥನೆ ನಡೆಸಿಕೊಟ್ಟರು.ಕಾರ್ಯದರ್ಶಿ ಲಲಿತರವರು ಎಲ್ಲರನ್ನು ಸ್ವಾಗತಿಸಿದರು.ಜತೆ ಕಾರ್ಯದರ್ಶಿ ಉಷಾರವರು ವಂದಿಸಿದರು.ಉಪಾಧ್ಯಕ್ಷೆ ಜಿನ್ಸಿ ರಾಜೇಶ್ ರವರು ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮದ ಯಶಸ್ವಿಗೆ ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ಸಿಬ್ಬಂದಿ ವರ್ಗದವರು ಸಹಕರಿಸಿದರು.ಕಾರ್ಯಕ್ರಮದಲ್ಲಿ ಒಕ್ಕೂಟದ ಸದಸ್ಯರು ಭಾಗಹಿಸಿದ್ದರು.