ಬೆಳ್ತಂಗಡಿ: ಲಾರಿ ಮತ್ತು ಮೋಟಾರ್ ಬೈಕ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಹಾಗೂ ಸಹ ಸವಾರ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರಿ ಚಾಲಕನಿಗೆ ಬೆಳ್ತಂಗಡಿ ಜೆಎಂಎಫ್‌ಸಿ ನ್ಯಾಯಾಲಯ ಶಿಕ್ಷೆ ವಿಧಿಸಿ ನ.25ರಂದು ಆದೇಶ ಹೊರಡಿಸಿದೆ.
2022ರ ಜ.17ರಂದು ಕುವೆಟ್ಟು ಗ್ರಾಮದ ಮದ್ದಡ್ಕ ಬಳಿ ಈಚರ್ ಲಾರಿ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಮಿಸ್ಬಾವುದ್ದೀನ್ ಮತ್ತು ಸಹಸವಾರ ಅಸ್ಫಾನ್ ಎಂಬವರು ಗಾಯಗೊಂಡು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದರು.ಈಚರ್ ಲಾರಿ ಚಾಲಕ ಮಹಮ್ಮದ್ ಸಿನಾನ್ ವಿರುದ್ಧ ಬೆಳ್ತಂಗಡಿ ಟ್ರಾಫಿಕ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪಿಎಸ್‌ಐ ಓಡಿಯಪ್ಪ ಗೌಡ ಎಫ್‌ಐಆರ್ ದಾಖಲಿಸಿದ್ದರು.ಅಂದಿನ ಸರ್ಕಲ್ ಇನ್ಸ್ಪೆಕ್ಟರ್ ಶಿವಕುಮಾರ್ ಅವರು ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಆರೋಪಿ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಎಎಸ್‌ಐ ರಾಮಚಂದ್ರ ಸಹಕಾರ ನೀಡಿದ್ದರು.
ಇದೀಗ ವಿಚಾರಣೆ ಪೂರ್ಣಗೊಳಿಸಿದ ಬೆಳ್ತಂಗಡಿ ನ್ಯಾಯಾಲಯ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಲಾರಿ ಚಾಲಕ ಮಹಮ್ಮದ್ ಸಿನಾನ್‌ಗೆ ಎರಡು ವರ್ಷ ಕಠಿಣ ಕಾರಾಗೃಹ ವಾಸ, 1 ಸಾವಿರ ರೂ.ದಂಡ, ದಂಡ ಕಟ್ಟಲು ತಪ್ಪಿದ್ದಲ್ಲಿ ಒಂದು ತಿಂಗಳ ಹೆಚ್ಚುವರಿ ಕಾರಾಗೃಹ ವಾಸ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಪ್ರಕರಣದ ತನಿಖಾ ಸಹಾಯಕರಾಗಿ ಹೆಡ್ ಕಾನ್ಸ್ಟೇಬಲ್ ವಿಜಯಕುಮಾರ್ ರೈ ಸಹಕರಿಸಿದ್ದರು. ಪ್ರಾಸಿಕ್ಯೂಶನ್ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ಅಶ್ವಿತಾ ವಾದಿಸಿದ್ದರು.