ಮಲೆಕುಡಿಯರ ಸಂಘದ ವತಿಯಿಂದ ಕೋಲೊಡಿ ಎಲ್ಯಣ್ಣ ಮಲೆಕುಡಿಯರಿಗೆ ನುಡಿ ನಮನ ಕಾರ್ಯಕ್ರಮ

0

ಕೊಯ್ಯೂರು: ಕೋಲೋಡಿಯ ಎಲ್ಯಣ್ಣ ಮಲೆಕುಡಿಯರವರು ಮಲೆಕುಡಿಯ ಸಮುದಾಯಕ್ಕಾದ ಅನ್ಯಾಯಗಳನ್ನು ಮಾತ್ರ ವಿರೋಧಿಸದೆ, ಸಮಾಜದಲ್ಲಿದ್ದ ವಿವಿಧ ಅನ್ಯಾಯಗಳನ್ನು ತಮ್ಮ ನ್ಯಾಯಯುತ ಹೋರಾಟದ ಮೂಲಕವೇ ಪ್ರತಿಭಟಿಸಿ, ನ್ಯಾಯಕ್ಕಾಗಿ ಶ್ರಮಿಸಿದವರು. ಸರಳ ಜೀವನ ನಡೆಸುತ್ತಾ, ನೇರ ನಡೆ-ನುಡಿ ಹೊಂದಿದ್ದ ಅವರು ಪಕ್ಷಾತೀತವಾಗಿ ಗುರುತಿಸಿಕೊಂಡು ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದವರು.ಅವರು ತೋರಿದ ಮಾರ್ಗದಲ್ಲಿ ಮುನ್ನಡೆಯುವುದೇ ನಾವು ಅವರಿಗೆ ಸಲ್ಲಿಸುವ ಬಹುದೊಡ್ಡ ಗೌರವ ನಮನವಾಗಿದೆ ಎಂದು ಮಲೆಕುಡಿಯರ ಸಂಘದ ಅಧ್ಯಕ್ಷ ಹರೀಶ್ ಅವರು ಹೇಳಿದರು.

ಬೆಳ್ತಂಗಡಿ ಕೊಯ್ಯೂರು ಶಿವಗಿರಿಯಲ್ಲಿರುವ ಮಲೆಕುಡಿಯರ ಸಮುದಾಯ ಭವನದಲ್ಲಿ ನ.26ರಂದು ಮಲೆಕುಡಿಯರ ಸಂಘದ ವತಿಯಿಂದ ಕೋಲೋಡಿಯ ಎಲ್ಯಣ್ಣ ಮಲೆಕುಡಿಯರಿಗೆ ನಡೆದ ನುಡಿ ನಮನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಮಲೆಕುಡಿಯ ಸಮುದಾಯದ ಸಂಘಟನೆಯ ಏಳಿಗೆಗೆ ಶ್ರಮಿಸಿರುವುದಲ್ಲದೆ ವಿವಿಧ ಸಂಘಟನೆಗಳ ಜೊತೆ ಕೈ ಜೋಡಿಸಿ ಅನ್ಯಾಯದ ವಿರುದ್ಧ ಧ್ವನಿಯೆತ್ತಿದ ಸಾಮಾಜಿಕ ಹೋರಾಟಗಾರರಾಗಿದ್ದರು. ಅವರ ಅಗಲಿಕೆಯಿಂದ ಅಮೂಲ್ಯ ರತ್ನವನ್ನು ಮಲೆಕುಡಿಯ ಸಮುದಾಯವು ಕಳೆದುಕೊಂಡಂತಾಗಿದೆ ಎಂದು ಸಂತಾಪ ಸೂಚಿಸಿದರು.

ಮಲೆಕುಡಿಯರ ಸಂಘದ ರಾಜ್ಯಾಧ್ಯಕ್ಷ ಶ್ರೀಧರ್ ಈದು ಮಾತನಾಡಿ ಮಾತನಾಡಿ ಎಲ್ಯಣ್ಣ ಬದುಕಿನುದ್ದಕ್ಕೂ ಕಷ್ಟ ಕಾರ್ಪಣ್ಯ ಎದುರಿಸಿದರು. ಕೋಲೋಡಿಗೆ ಮೂಲಭೂತ ಸೌಕರ್ಯಗಳು ಒದಗುವಲ್ಲಿ ಎಲ್ಯಣ್ಣ ಮಹತ್ತರ ಪಾತ್ರ ವಹಿಸಿದ್ದಾರೆ ಎಂದರು.

ರಾಜ್ಯ ಸಮಿತಿ ಜೊತೆ ಕಾರ್ಯದರ್ಶಿ ಜಯರಾಮ ಆಲಂಗಾರು, ಜಿಲ್ಲಾ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಶ್ರೀನಿವಾಸ ಸಿ ಉಜಿರೆ ಎಲ್ಯಣ್ಣ ಅವರ ಒಡನಾಟದ ದಿನಗಳನ್ನು ಮೆಲುಕು ಹಾಕಿ ಮಲೆಕುಡಿಯ ಸಮುದಾಯವು ಅವರಿಂದ ಪ್ರೇರಣೆ ಪಡೆಯಬೇಕೆಂದರು.

ರಾಜ್ಯ ಸಮಿತಿ ಉಪಾಧ್ಯಕ್ಷೆ ವಸಂತಿ ನೆಲ್ಲಿಕಾರ್, ಜಿಲ್ಲಾ ಸಮಿತಿ ಮಾಜಿ ಅಧ್ಯಕ್ಷ ಜಿ.ಕೆ. ನಾರಾಯಣ್ ಧರ್ಮಸ್ಥಳ, ಬೆಳ್ತಂಗಡಿ ತಾಲೂಕು ಸಮಿತಿ ಅಧ್ಯಕ್ಷ ಶಿವರಾಮ್ ಉಜಿರೆ, ಮಂಜಪ್ಪ ಕೋಲೋಡಿ ಅವರು ನುಡಿನಮನಗಳನ್ನು ಸಲ್ಲಿಸಿ ಅವರು ಹೆಸರಿನಲ್ಲಿ ಎಲ್ಯಣ್ಣ ಇರಬಹುದು ಸಾಧನೆ ಹಾಗೂ ಕೆಲಸ ಕಾರ್ಯಗಳಲ್ಲಿ ಅವರು ಮಲ್ಲಣ್ಣ ಆಗಿದ್ದುಕೊಂಡು ನಮಗೆಲ್ಲ ಆದರ್ಶ ಪ್ರಾಯರಾಗಿದ್ದಾರೆ ಎಂದು ಹೇಳಿದರು
ರಾಜ್ಯ ಸಮಿತಿಯ ನೋಣಯ್ಯ ರೆಂಜಾಳ, ಜಿಲ್ಲಾ ಸಮಿತಿ ಜೊತೆ ಕಾರ್ಯದರ್ಶೀ ಲಕ್ಷ್ಮಣ ನೆರಿಯ, ಸುಂದರ ಆಲಂಗಾಯಿ ಅವರು ಸಂತಾಪದ ನುಡಿಗಳನ್ನಾಡಿದರು.

ಕೃಷ್ಣ ಪೂರ್ಜೆ, ಸೇಸಪ್ಪ, ನಿರಂಜನ ಕೊಯ್ಯೂರು, ಕೇಶವ ಬಳ್ಳಮಂಜ, ಆದರ್ಶ ವೇಣೂರು, ಸುಜಾತ ಉಜಿರೆ, ಪುಷ್ಪ ನೆರಿಯ, ಕೃಷ್ಣ, ಭವ್ಯ ಕಾಶಿಬೆಟ್ಟು ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಂಘದ ದ.ಕ. ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಜಯೇಂದ್ರ ಎಂ. ನಿಡ್ಲೆ, ಕಾರ್ಯಕ್ರಮ ನಿರೂಪಿಸಿ ವಕ್ತಾರ ಉಮಾನಾಥ್ ಧರ್ಮಸ್ಥಳ ಧನ್ಯವಾದ ಸಲ್ಲಿಸಿದರು.

p>

LEAVE A REPLY

Please enter your comment!
Please enter your name here