ಬೆಳ್ತಂಗಡಿ: ಹನ್ನೆರಡು ವರ್ಷಗಳ ಹಿಂದೆ ಧರ್ಮಸ್ಥಳ ಗ್ರಾಮದ ಮಣ್ಣಸಂಕದಲ್ಲಿ ಅತ್ಯಾಚಾರಕ್ಕೀಡಾಗಿ ಹತ್ಯೆಯಾಗಿರುವ ಉಜಿರೆ ಎಸ್.ಡಿ.ಎಂ. ಕಾಲೇಜಿನ ವಿದ್ಯಾರ್ಥಿನಿ ಕು.ಸೌಜನ್ಯರವರ 28ನೇ ವರ್ಷದ ಹುಟ್ಟುಹಬ್ಬವನ್ನು ಅಕ್ಟೋಬರ್ 18ರಂದು ಸೌಜನ್ಯರವರ ಪಾಂಗಾಳದ ಮನೆಯಲ್ಲಿ ಆಚರಿಸಲಾಯಿತು.
ಸೌಜನ್ಯ ಜೀವಂತವಾಗಿದ್ದರೆ ಆಕೆ ತನ್ನ 28ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಳು.ಆದರೆ ಆಕೆ ಇಂದು ಕಣ್ಣ ಮುಂದಿಲ್ಲದಿದ್ದರೂ ಸಾವಿರಾರು ಜನರು ಇಂದು ಆಕೆಯ ಸಾವಿಗೆ ನ್ಯಾಯ ಸಿಗಬೇಕು ಎಂಬ ಒತ್ತಾಯದೊಂದಿಗೆ ಬೀದಿಗಿಳಿದಿದ್ದಾರೆ ಎಂದು ಸೌಜನ್ಯಳ ತಾಯಿ ಕುಸುಮಾವತಿ ಈ ವೇಳೆ ಹೇಳಿದರು.
ಸೌಜನ್ಯ ನಿವಾಸದ ಬಳಿ ಇರುವ ಆಕೆಯ ಸಮಾಧಿ ಪಕ್ಕದಲ್ಲಿ ಸೌಜನ್ಯರವರ ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಯಿತು.
ಬಳಿಕ ಭಜನಾ ಸಂಕೀರ್ತನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಂಜೆ 6ಕ್ಕೆ ಭಜನೆ ಕಾರ್ಯಕ್ರಮ ಆರಂಭಗೊಂಡು ರಾತ್ರಿ 2 ಗಂಟೆ ತನಕ ನಡೆಯಿತು.
ಸೌಜನ್ಯ ಪರ ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿ, ಪ್ರಸನ್ನ ರವಿ, ತಮ್ಮಣ್ಣ ಶೆಟ್ಟಿ, ಸೌಜನ್ಯರ ತಂದೆ ಚಂದಪ್ಪ ಗೌಡ, ಮಾವ ವಿಠಲ ಗೌಡ, ಜಯಂತ್ ಟಿ, ಬಾಬು , ದಿನೇಶ್ ಗಾಣಿಗ ಕುಂದಾಪುರ, ಹಾಗೂ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಪದಾಧಿಕಾರಿಗಳು ಸಹಿತ ಹಲವರು ಉಪಸ್ಥಿತರಿದ್ದರು.