ಉಜಿರೆ: ಬೆಳ್ತಂಗಡಿ ತಾಲೂಕಿನ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಸಂಘಟನೆ ‘ಸಮೂಹ ಉಜಿರೆ’ಯ ಆಶ್ರಯದಲ್ಲಿ ಆದಿತ್ಯ ಟ್ರಸ್ಟ್ ಕ್ಯಾದಗಿ ಇವರು ಅರ್ಪಿಸಿದ ಹೆಸರಾಂತ ‘ಯಕ್ಷ ಹಾಸ್ಯ ರತ್ನ’ ಮಹಾಬಲೇಶ್ವರ ಭಟ್ ಕ್ಯಾದಗಿ ಅವರ ಪರಿಕಲ್ಪನೆ ನಿರ್ದೇಶನ, ನಟನೆಯ ಪುರಾಣ ಕಥೆಗಳನ್ನೊಳಗೊಂಡ ಏಕವ್ಯಕ್ತಿ ಯಕ್ಷಗಾನ ಪುಷ್ಪಕಯಾನ ಇದರ ಪ್ರದರ್ಶನವು ಉಜಿರೆಯ ಶ್ರೀ ಸಿದ್ಧವನ ಗುರುಕುಲದಲ್ಲಿ ಜರುಗಿತು.
ಎರಡು ಗಂಟೆಗಳ ಪ್ರದರ್ಶನದುದ್ದಕ್ಕೂ ಮಹಾಬಲೇಶ್ವರ ಭಟ್ ಕ್ಯಾದಗಿಯವರು ‘ಭೂಕೈಲಾಸ’ ಪ್ರಸಂಗದ ಮಾಣಿ, ಗಣಪತಿ, ಈಶ್ವರ, ರಾವಣ, ಕೈಕಸೆ, ಪಾತ್ರೆಗಳ ನಿರ್ವಹಣೆ ಬಹಳ ಸೊಗಸಾಗಿ, ಮನೋಜ್ನವಾಗಿ ಮಾಡಿರುವುದು ನೆರೆದಿದ್ದ ಪ್ರೇಕ್ಷಕರ ಮನಸೂರೆ ಮಾಡಿತು.
ಶ್ರೀ ಪೆರ್ಡೂರು ಮೇಳದ ಪ್ರಧಾನ ಭಾಗವತರಾದ ಪ್ರಸನ್ನ ಭಟ್ ಬಾಳ್ಕಲ್, ಮದ್ದಳೆಯಲ್ಲಿ ರಾಘವೇಂದ್ರ ಹೆಗ್ಡೆ ಯಲ್ಲಾಪುರ, ಚಂಡೆ ವಾದನದಲ್ಲಿ ಮಂಜುನಾಥ ನಾವಡ ಕಟ್ಕೆರೆ ಯವರು ಬಹಳ ಅಚ್ಚುಕಟ್ಟಾಗಿ ಮತ್ತು ಸೊಗಸಾಗಿ ಹಿಮ್ಮೆಳದ ನಿರ್ವಹಣೆ ಮಾಡಿದರು.
ಸಂಪೂರ್ಣ ಕಾರ್ಯಕ್ರಮವನ್ನು ವೀಕ್ಷಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮತ್ತು ಸಮೂಹ ಉಜಿರೆಯ ಗೌರವಾಧ್ಯಕ್ಷೆ ಡಾ.ಹೇಮಾವತಿ.ವಿ ಹೆಗ್ಗಡೆಯವರು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಕಲಾವಿದರನ್ನು ಗೌರವಿಸಿದರು.
ಕಾರ್ಯಕ್ರಮದಲ್ಲಿ ಸೋನಿಯಾ ಬಿ.ಯಶೋವರ್ಮ ಮತ್ತು ಕುಟುಂಬಸ್ಥರು, ಸಮೂಹ ಉಜಿರೆಯ ಪದಾಧಿಕಾರಿಗಳು ಮತ್ತು ಸದಸ್ಯರು, ಬೆಳ್ತಂಗಡಿ lತಾಲೂಕಿನ ಕಲಾಭಿಮಾನಿಗಳು, ಶ್ರೀ ಸಿದ್ದವನ ಗುರುಕುಲದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಮೂಹ ಉಜಿರೆಯ ಕಾರ್ಯದರ್ಶಿ ಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್.ಕಾರ್ಯಕ್ರಮ ನಿರ್ವಹಿಸಿದರು.