ಗೇರುಕಟ್ಟೆ: ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಳಿಯ ಗ್ರಾಮದ ಎರುಕಡಪ್ಪು ಅಂಗನವಾಡಿ, ಕಲ್ಕುರ್ಣಿ ಕಡೆಗೆ ಹೋಗುವ ಬದಿಯಲ್ಲಿರುವ ಅಂಗನವಾಡಿಗೆ ಸಂಬಂಧಿಸಿದ ಸರ್ವೆ ನಂಬ್ರ 70/1B ರಲ್ಲಿ 0.30 ಸೆಂಟ್ಸ್ ಜಾಗದ ಗಡಿ ಗುರುತು ಮಾಡಲಾಗಿತ್ತು.ಪಕ್ಕದಲ್ಲಿ 0.52 ಸೆಂಟ್ಸ್ ಸರಕಾರಿ ಖಾಲಿ ಜಾಗವನ್ನು ಪೋಷಣಾ ಅಭಿಯಾನಕ್ಕೆ ಮೀಸಲಿರಿಸಲಾಗಿತ್ತು.ಈ ಮೀಸಲಿರಿಸಿದ ಜಾಗವನ್ನು ಜೆ.ಸಿ.ಬಿ.ಯಂತ್ರದ ಮೂಲಕ ಸ್ಥಳೀಯ ನಿವಾಸಿ ರಝಾಕ್ s/o ಬಾವುಂಞಿ ಕಲ್ಕುರ್ಣಿ ಅತಿಕ್ರಮಿಸಿ ಸಮತಟ್ಟು ಮಾಡಿದ್ದಾರೆ.
ಈ ಬಗ್ಗೆ ಸಾರ್ವಜನಿಕರು ಮತ್ತು ಅಂಗನವಾಡಿ ಬಾಲ ವಿಕಾಸ ಸಮಿತಿ ವತಿಯಿಂದ ಆಕ್ಷೇಪ ವ್ಯಕ್ತಪಡಿಸಿ ಈ ಹಿಂದಿನಿಂದಲೂ ದಾಖಲೆ ಇದ್ದ ಈ ಜಾಗವನ್ನು ಅತಿಕ್ರಮಣ ಗೊಳಿಸಿದ ಬಗ್ಗೆ ವಿರೋಧ ವ್ಯಕ್ತಪಡಿಸಿ ತಹಶೀಲ್ದಾರರಿಗೆ ಮತ್ತು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ತಹಶೀಲ್ದಾರರು ದೂರನ್ನು ಪರಿಶೀಲಿಸಿ ಕೂಡಲೇ ತನಿಖೆ ನಡೆಸಿ ವರದಿ ನೀಡುವಂತೆ ಕಂದಾಯ ಅಧಿಕಾರಿಗಳಿಗೆ ನೋಟಿಸು ನೀಡಿದ್ದಾರೆ.
ಈ ಹಿಂದೆ ಕೂಡಾ ಅತಿಕ್ರಮಣ ಮಾಡಿದ್ದ ಕಾರಣ ಗ್ರಾಮ ಪಂಚಾಯತ್ ಮತ್ತು ಕಂದಾಯ ಇಲಾಖೆ ಮೌಖಿಕವಾಗಿ ತಿಳಿಸಿ ಅತಿಕ್ರಮಣವನ್ನು ನಿಲ್ಲಿಸಿತ್ತು.ಆದರೆ ಪುನಃ ಕಛೇರಿ ರಜಾ ದಿನದಲ್ಲಿ ಜೆ ಸಿ ಬಿ ಯಂತ್ರದ ಮೂಲಕ ಅತಿಕ್ರಮಿಸಿದ್ದಾರೆ.
ಈ ಬಗ್ಗೆ ಸ್ಥಳೀಯರು ಅತಿಕ್ರಮಣಕಾರರ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ಪರಿಸ್ಥಿತಿ ಕೈಮೀರುವ ಮೊದಲೇ ಸೂಕ್ತ ಕ್ರಮ ವಹಿಸಬೇಕೆಂದು ಆಗ್ರಹಿಸಿದ್ದಾರೆ.