ಗುರುವಾಯನಕೆರೆ: ವಿದ್ಯಾರ್ಥಿ ಜೀವನದಲ್ಲಿ ಸಾಧನೆ ಮಾಡಿರುವುದು ಅತ್ಯಂತ ಸಂತೋಷ. ಆದರೆ ಆ ಸಾಧನೆ ಇಲ್ಲಿಗೆ ಸೀಮಿತವಾಗದೆ ನಿರಂತರವಾಗಿರಲಿ. ವಿಶೇಷ ಸಾಧಕರಾಗಿ ದೇಶಕ್ಕೆ ಕೊಡುಗೆಯಾಗಿ, ಸಮಾಜಕ್ಕೆ ಆಸ್ತಿಯಾಗಿರಿ’ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.ಗುರುವಾಯನಕೆರೆಯ ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪ್ರಾರಂಭೋತ್ಸವ ‘ ಸ್ವಾಗತಮ್ ‘ ಸಮಾರಂಭದಲ್ಲಿ ಶೈಕ್ಷಣಿಕ ಸಾಧಕರನ್ನು ಗೌರವಿಸಿ ಅವರು ಮಾತನಾಡಿದರು.
ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಮಾತನಾಡಿ ‘ ಎಕ್ಸೆಲ್ ಅಪೂರ್ವ ಸಾಧಕರನ್ನು ಹೊಂದಿದ ಕಾಲೇಜು. ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಲ್ಲಿನ ವಿದ್ಯಾರ್ಥಿಗಳು ಹೆಸರು ಮಾಡುವಂತಾಗಲಿ ‘ ಎಂದು ಹಾರೈಸಿದರು.
ನೀಟ್ ನಲ್ಲಿ 692 ಅಂಕಗಳನ್ನು ಪಡೆದ ಆದಿತ್ ಜೈನ್ ಹಾಗೂ ನೀಟ್, ಸಿ ಇ ಟಿ, ಬೋರ್ಡ್ ಎಕ್ಸಾಂ ಸಹಿತ ಜೆ ಇ ಇ ಅಡ್ವಾನ್ಸ್ ಕ್ಲಿಯರ್ ಮಾಡಿದ ಸಂಜನಾ ಈರನ್ನವರ್ ಅವರಿಗೆ ಒಂದು ಲಕ್ಷ ಮೊತ್ತದೊಂದಿಗೆ ಗೌರವಿಸಲಾಯಿತು.
ಬೋರ್ಡ್ ಎಕ್ಸಾಂ, ಸಿ ಇ ಟಿ, ನೀಟ್, ಜೆ ಇ ಇ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ 254 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಅಭಿರಾಮ್ , ವೇಣೂರು ವಿದ್ಯೋದಯ ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ ಶಿವರಾಮ ಹೆಗ್ಡೆ, ಉದ್ಯಮಿ ಶಮಂತ್ ಕುಮಾರ್ ಬೆಳ್ತಂಗಡಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶೈಕ್ಷಣಿಕ ಸಂಯೋಜಕರಾದ ನಿಶಾ ಪೂಜಾರಿ ಸಾಧಕರ ಪಟ್ಟಿಯನ್ನು ವಾಚಿಸಿದರು.ಪ್ರಾಂಶುಪಾಲರಾದ ಡಾ.ನವೀನ್ ಕುಮಾರ್ ಮರಿಕೆ ಸ್ವಾಗತಿಸಿದರು.ಕನ್ನಡ ವಿಭಾಗದ ಜಯರಾಮ್ ವಂದಿಸಿದರು. ರಸಾಯನ ವಿಜ್ಞಾನ ವಿಭಾಗದ ಈಶ್ವರ್ ಶರ್ಮ ಅವರು ನಿರೂಪಿಸಿದರು.