ಉಜಿರೆ; ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಕಾಲೇಜಿನ ಬಿವೋಕ್ ಡಿಜಿಟಲ್ ಮೀಡಿಯಾ ಹಾಗೂ ಫಿಲ್ಮ್ ಮೇಕಿಂಗ್ ವಿಭಾಗದ ವತಿಯಿಂದ “ಮನೋರಂಜನೆ ಮಾಧ್ಯಮದ ವ್ಯಾಪ್ತಿ ಮತ್ತು ಉದ್ಯೋಗಾವಕಾಶಗಳು” ವಿಷಯದ ಕುರಿತು ಅತಿಥಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಫ್ರೀಲ್ಯಾನ್ಸ್ ಕಂಟೆಂಟ್ ರೈಟರ್ ಹಾಗೂ ಎಸ್‌ಡಿಎಂಇ ಸೊಸೈಟಿಯ ಸೋಶಿಯಲ್ ಮೀಡಿಯಾ ಹೆಡ್ ಚರಿಷ್ಮಾ ಚೋಂಡಮ್ಮ ಇಂದಿನ ಡಿಜಿಟಲ್ ಯುಗದಲ್ಲಿ ಮಾಧ್ಯಮ ಕ್ಷೇತ್ರ ಬೆಳೆಯುತ್ತಿರುವ ವೇಗ ಹಾಗೂ ಮುಂದಿನ ಹತ್ತು ವರ್ಷಗಳಲ್ಲಿ ಇದು ಎಷ್ಟು ವಿಸ್ತಾರವಾಗಿ ಬೆಳೆಯಲಿದೆ, ಈ ಕ್ಷೇತ್ರದಲ್ಲಿ ಬೆಳೆಯಲು ಇರುವ ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು.
“ಒಬ್ಬ ಸ್ಕ್ರಿಪ್ಟ್ ರೈಟರ್ ಆಗಿ ಚಾನಲ್ ಸೇರಿದವ ಮುಂದೆ ನಟ ಆಗಬಹುದು. ಎಡಿಟರ್ ಆಗಿ ಸೇರಿದವರು ಕಂಟೆಂಟ್ ರೈಟರ್ ಆಗಬಹುದು. ಥ್ರಿಲ್ಲರ್ ಕಥೆ ಬರೆಯವವರು, ರೊಮ್ಯಾಂಟಿಕ್ ಕಥೆಗಳನ್ನು ಬರೆಯಬಹುದು. ಮನೋರಂಜನೆ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿವೆ. ನಾವು ಯಾವುದೋ ಒಂದು ವಿಭಾಗಕ್ಕೆ ಮೀಸಲಾಗದೇ, ನಮ್ಮನ್ನು ನಾವು ಎಲ್ಲಾ ಅವಕಾಶಗಳಿಗೂ ಸಂಪೂರ್ಣವಾಗಿ ತೆರೆದ ಮನಸ್ಸಿನಿಂದ ಒಪ್ಪಿಕೊಳ್ಳಲು ತಯಾರಿರಬೇಕು. ಎಲ್ಲವುದರ ಬಗ್ಗೆ ಕನಿಷ್ಟ ಜ್ಞಾನ ಇದ್ದರೆ ಮನೋರಂಜನಾ ಮಾಧ್ಯಮದಲ್ಲಿ ಯಶಸ್ವಿ ವೃತ್ತಿ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ವಿಭಾಗದ ಮುಖ್ಯಸ್ಥ ಮಾಧವ ಹೊಳ್ಳ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸ್ನೇಹಾ ಸ್ವಾಗತಿಸಿದರು. ಧನುಶ್ರೀ ಸಂಪನ್ಮೂಲ ವ್ಯಕ್ತಿಯ ಪರಿಚಯ ಮಾಡಿಕೊಟ್ಟರು. ವಿದ್ಯಾರ್ಥಿನಿ ಸುಮನಾ ಕಾರ್ಯಕ್ರಮ ನಿರೂಪಿಸಿದರು.