ಚಿಕ್ಕಮಗಳೂರು: ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಸ್ಕೂಟಿಯಲ್ಲಿ ಸಾಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಅಪಘಾತವೆಸಗಿ, ಗಾಯಾಳುವನ್ನು ತಂದು ಕೊಟ್ಟಿಗೆಹಾರ ಸಮೀಪದ ಹೆಬ್ರಿಗೆ ಎಂಬಲ್ಲಿ ರಸ್ತೆಬದಿಯಲ್ಲಿ ಬಿಟ್ಟು ಹೋಗಿ ಆ ವ್ಯಕ್ತಿ ಸ್ಥಳದಲ್ಲಿ ಮೃತಪಟ್ಟಿದ್ದ ಘಟನೆಯನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬುಧವಾರ ಸಂಜೆ ಬಣಕಲ್-ಕೊಟ್ಟಿಗೆಹಾರ ಮಧ್ಯದ ರಾಷ್ಟ್ರೀಯ ಹೆದ್ದಾರಿ ರಸ್ತೆ ಬದಿಯಲ್ಲಿ ಅಪರಿಚಿತ ಪುರುಷನ ಮೃತದೇಹವೊಂದು ಪತ್ತೆಯಾಗಿತ್ತು. ನಂತರ ಆ ವ್ಯಕ್ತಿ ಉಜಿರೆಯ ಕಡೆಗೆ ಹೋಗಲು ಹೆಂಡತಿ ಮಗುವಿನೊಂದಿಗೆ ಕೊಟ್ಟಿಗೆಹಾರಕ್ಕೆ ಬಂದಾಗ ಮಳೆ ಬಂದಿದ್ದರಿಂದ ಹೆಂಡತಿ ಮಗುವನ್ನು ಬಸ್ಸಿಗೆ ಹತ್ತಿಸಿ ತಾನು ಸ್ಕೂಟಿಯಲ್ಲಿ ಸಾಗುತ್ತಿದ್ದಾಗ ಚಾರ್ಮಾಡಿ ಘಾಟ್ ನ ಅಣ್ಣಪ್ಪಸ್ವಾಮಿ ದೇವಸ್ಥಾನದ ಬಳಿ ಯಾರೋ ಅಪಘಾತವೆಸಗಿ ಗಾಯಾಳುವನ್ನು ಸುಮಾರು 10 ಕಿ.ಮೀ. ದೂರದ ಕೊಟ್ಟಿಗೆಹಾರದ ಸಮೀಪ ಬಿಟ್ಟುಹೋಗಿ ಆ ವ್ಯಕ್ತಿ ಅಲ್ಲಿ ಒದ್ದಾಟ ನಡೆಸಿ ಮೃತಪಟ್ಟಿರುವುದು ತಿಳಿದು ಬಂದಿತ್ತು.
ಮೃತ ವ್ಯಕ್ತಿ ಚಿಕ್ಕಮಗಳೂರು ಸಮೀಪದ ತೇಗೂರು ಮೂಲದ ದಿಲೀಪ ಎಂದು ತಿಳಿದುಬಂದಿದೆ. ಅವರು ಧರ್ಮಸ್ಥಳದಲ್ಲಿ ಮುಡಿತೆಗೆಯುವ ಕಾಯಕ ಮಾಡುತ್ತಿದ್ದರು. ಧರ್ಮಸ್ಥಳದಲ್ಲಿ ತಾನು ಕಟ್ಟಿಸಿದ ಮನೆಯ ಗೃಹಪ್ರವೇಶಕ್ಕೆ ಸಂಬಂಧಿಕರಿಗೆ ಆಹ್ವಾನ ಪತ್ರಿಕೆ ನೀಡಿ ಉಜಿರೆಗೆ ಮರಳುತ್ತಿದ್ದರೆಂದು ತಿಳಿದುಬಂದಿತ್ತು.
ಇದೀಗ ಅವರಿಗೆ ಅಪಘಾತವೆಸಗಿದ್ದ ವಾಹನವನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ತುಮಕೂರು ಜಿಲ್ಲೆಯ ಸಿರಾ ಮೂಲದ ಬೊಲೆರೋ ಪಿಕಪ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಈ ವಾಹನವು ತರಕಾರಿ ಸಾಗಾಟ ಮಾಡುವುದಾಗಿದ್ದು, ಮಂಗಳೂರಿಗೆ ತರಕಾರಿ ತಲುಪಿಸಿ ವಾಪಾಸ್ಸು ಬರುತ್ತಿತ್ತು ಎನ್ನಲಾಗಿದೆ.ವಾಹನ ಮಾಲೀಕರು ಪೊಲೀಸರಿಗೆ ನೀಡಿರುವ ಮಾಹಿತಿಯಂತೆ ಅಪಘಾತದಿಂದ ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಲೆಂದು ವಾಹನದಲ್ಲಿ ಕರೆತಂದಿದ್ದು, ಅವರು ಹೊಟ್ಟೆನೋವು ಎಂದು ಹೇಳುತ್ತಿದ್ದರು. ಕೊಟ್ಟಿಗೆಹಾರ ಸಮೀಪ ಬಂದಾಗ ಮೂತ್ರವಿಸರ್ಜನೆ ಮಾಡಬೇಕು ಎಂದಾಗ ಅವರನ್ನು ಕೆಳಗೆ ಇಳಿಸಿದೆವು. ಮೂತ್ರ ವಿಸರ್ಜನೆಗೆ ಕುಳಿತವರು ಎಷ್ಟು ಕರೆದರೂ ಮೇಲೆ ಏಳಲಿಲ್ಲ. ಹಾಗಾಗಿ ಎದ್ದು ಸರಿಯಾಗಬಹುದು ಎಂದು ಹಾಗೆಯೇ ಬಿಟ್ಟು ಹೋದೆವು ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಹೊಟ್ಟೆಯ ಭಾಗಕ್ಕೆ ತೀವ್ರ ಹೊಡೆತ ಬಿದ್ದು ಅವರ ಲಿವರ್ ಗೆ ಪೆಟ್ಟಾಗಿತ್ತು ಎನ್ನಲಾಗಿದ್ದು, ನೋವನ್ನು ತಾಳಲಾರದೇ ರಸ್ತೆ ಬದಿಯಲ್ಲಿ ಒದ್ದಾಡಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಮೂಡಿಗೆರೆ ಸರ್ಕಲ್ ಇನ್ಸ್ ಪೆಕ್ಟರ್ ಸೋಮೇಗೌಡ, ಬಣಕಲ್ ಸಬ್ ಇನ್ಸ್ ಪೆಕ್ಟರ್ ಗಳಾದ ಜಂಬೂ ಮಹಾರಾಜನ್, ರನ್ನಗೌಡ ಪಾಟೀಲ್ ಅವರ ನೇತೃತ್ವದಲ್ಲಿ ಪ್ರಕರಣವನ್ನು ಭೇದಿಸಲಾಗಿದೆ.