





ಬೆಳ್ತಂಗಡಿ: ಬೆಳ್ತಂಗಡಿಯಲ್ಲಿದ್ದ ಹಳೆಯ ಪ್ರವಾಸಿ ಬಂಗಲೆಯನ್ನು ಕೆಡವಿ ಹೊಸ ಪ್ರವಾಸಿ ಬಂಗಲೆ ತಲೆ ಎತ್ತುತ್ತಿದ್ದು ಇದರಲ್ಲಿ ಶಾಸಕ ಹರೀಶ್ ಪೂಂಜಾರವರು 40% ಕಮಿಷನ್ ಹಣ ಕೊಳ್ಳೆ ಹೊಡೆಯುವ ಸಲುವಾಗಿ ಟೆಂಡರ್ ಪ್ರಕ್ರಿಯೆಯನ್ನೇ ಹೈಜಾಕ್ ಮಾಡಿದ್ದಾರೆ ಎಂದು ಮಾಜಿ ಶಾಸಕ ವಸಂತ ಬಂಗೇರ ಆರೋಪಿಸಿದ್ದಾರೆ.
ಮಾ.15ರಂದು ಬೆಳ್ತಂಗಡಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಸಂತ ಬಂಗೇರ ಅವರು 2ನೇ ಹಂತದ ಕಾಮಗಾರಿಯನ್ನು ತನ್ನ ಮಾಲಕತ್ವದ ಬಿಮಲ್ ಕಂಪೆನಿಗೆ ಕೊಡುವ ಸಲುವಾಗಿ ಟೆಂಡರ್ ಕರೆಯುವ ಮೊದಲೇ 2ನೇ ಹಂತದ ಕಾಮಗಾರಿಯನ್ನು ತನ್ನ ಕಂಪೆನಿ ಮೂಲಕ ಮಾಡಿಸಿದ್ದಾರೆ. ಇದೀಗ ಟೆಂಡರ್ ಪ್ರಕ್ರಿಯೆಗೆ ಇಲಾಖೆ ಮುಂದಾಗಿದ್ದು ಬಿಮಲ್ ಕಂಪೆನಿ ಹೊರತು ಪಡಿಸಿ ಬೇರೆ ಯಾವುದೇ ಗುತ್ತಿಗೆದಾರರು ಟೆಂಡರ್ಲ್ಲಿ ಭಾಗವಹಿಸದಂತೆ ಜಿಲ್ಲಾ ಮಟ್ಟದ ಲೋಕೋಪಯೋಗಿ ಇಲಾಖಾಧಿಕಾರಿಗಳಿಂದ ಬೆದರಿಕೆ ಹಾಕಿಸಿದ್ದಾರೆ ಎಂದು ಹೇಳಿದ್ದಾರೆ.
ರೂ.411 ಕೋಟಿಯ ಶಂಕುಸ್ಥಾಪನೆ ವಿಚಾರದಲ್ಲಿ ಜನರ ಕಿವಿಗೆ ಹೂ ಇಟ್ಟಿದ್ದಾರೆ: ಶಾಸಕರು ಇತ್ತೀಚೆಗೆ ತಾಲೂಕಿನಾದ್ಯಂತ ನಡೆಸಿರುವ ಸುಮಾರು 411 ಕೋಟಿ ರೂಪಾಯಿಗಳ ಶಂಕುಸ್ಥಾಪನೆ ರಾಜ್ಯದಲ್ಲಿಯೇ ವಿಚಿತ್ರವಾದ ಬೋಗಸ್ ಶಂಕುಸ್ಥಾಪನೆಯಾಗಿದೆ. ಶಾಸಕರು ಆ ಮೂಲಕ ಬೆಳ್ತಂಗಡಿ ಕ್ಷೇತ್ರದ ಜನರ ಕಿವಿಗೆ ಹೂ ಇಡುವ ಕೆಲಸ ಮಾಡಿದ್ದಾರೆ ಎಂದು ವಸಂತ ಬಂಗೇರ ಹೇಳಿದರು.
ಅಕ್ರಮ ಸಕ್ರಮದಲ್ಲಿ ಜನರ ಕಣ್ಣಿಗೆ ಮಣ್ಣೆರೆಚುತ್ತಿದ್ದಾರೆ: ಜಿಲ್ಲೆಯ ಎಲ್ಲಾ ಕಡೆ ಕಳೆದ 2-3 ವರ್ಷಗಳಿಂದ ಅಕ್ರಮ ಸಕ್ರಮ ಬೈಠಕ್ ನಡೆಸಿ ಬಡ ರೈತರಿಗೆ ನ್ಯಾಯ ಒದಗಿಸುವ ಕೆಲಸಗಳಾಗುತ್ತಿದೆ. ಬೆಳ್ತಂಗಡಿಯಲ್ಲಿ ಕೇವಲ ಒಂದು ಸಿಟ್ಟಿಂಗ್‌ನ್ನು ತಾಲೂಕು ಕಚೇರಿಯಲ್ಲಿ ಬಾಗಿಲು ಬಂದ್ ಮಾಡಿ ನಡೆಸಿದ ಶಾಸಕರು ನಂತರ ಬೈಠಕ್ ಮೊಟಕುಗೊಳಿಸಿ ಇದೀಗ ಗ್ರಾಮಗಳಲ್ಲಿ ಕಾನೂನು ಬಾಹಿರವಾಗಿ ಬೈಠಕ್ ನಡೆಸುತ್ತಿದ್ದಾರೆ ಎಂದು ವಸಂತ ಬಂಗೇರರವರು ಆರೋಪಿಸಿದರು.


ಮರಳು ದಂಧೆಗೆ ಕಡಿವಾಣ ಹಾಕಲು ಅಧಿಕಾರಿಗಳು ವಿಫಲ; ತಾಲೂಕಿನಾದ್ಯಂತ ಶಾಸಕ ಹರೀಶ್ ಪೂಂಜಾರವರ ನೇತೃತ್ವದಲ್ಲಿ ವ್ಯಾಪಕ ಮರಳು ದಂಧೆ ಮತ್ತು ಮರಗಳ್ಳತನ ನಡೆಯುತ್ತಿದ್ದು ಇದಕ್ಕೆ ಕೆಲ ಕಂದಾಯ, ಅರಣ್ಯ ಮತ್ತು ಪೋಲೀಸ್ ಇಲಾಖೆಯ ಅಧಿಕಾರಿಗಳು ಸಾಥ್ ನೀಡುತ್ತಿದ್ದಾರೆ. ಇದನ್ನು ಗಣಿ ಇಲಾಖೆ ಮತ್ತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ಮುಗೇರಡ್ಕದಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ಬಗ್ಗೆ ಸ್ಥಳಕ್ಕೆ ತೆರಳಿ ಪ್ರತಿಭಟನೆ ನಡೆಸಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಸಂತ ಬಂಗೇರ ಹೇಳಿದರು.
ವೇಣೂರು ಬ್ರಹ್ಮಕಲಶೋತ್ಸವದಲ್ಲಿ ವ್ಯಕ್ತಿ ಪೂಜೆಗಾಗಿ ವ್ಯಾಪಕ ದುಂದು ವೆಚ್ಚ: ಅಜಿಲ ಸೀಮೆಯ ಪಟ್ಟದ ದೇವರಾದ ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವವನ್ನು ತನ್ನ ವೈಯುಕ್ತಿಕ ಪ್ರಚಾರಕ್ಕಾಗಿ ಬಳಸಿಕೊಂಡ ಶಾಸಕ ಹರೀಶ್ ಪೂಂಜಾ ಅನಗತ್ಯ ದುಂದುವೆಚ್ಚ ನಡೆಸಿ ಸುಮಾರು 60 ಲಕ್ಷ ಹಣ ಪಾವತಿಗೆ ಬಾಕಿ ಇರಿಸಿದ್ದಾರೆ. ಪೆಂಡಾಲ್ ಹಾಕಿದ ವ್ಯಕ್ತಿಗೆ ಹಣ ನೀಡದೆ ಸತಾಯಿಸುತ್ತಿರುವುದಾಗಿ ನನಗೆ ದೂರು ಬಂದಿದೆ. ಇದು ಅವರಿಗೆ ಶೋಭೆಯಲ್ಲ. ನಾನು ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಆಡಂಬರಕ್ಕೆ ಆದ್ಯತೆ ನೀಡಿ ಶಕ್ತಿಪೂಜೆಯ ಬದಲು ವ್ಯಕ್ತಿ ಪೂಜೆಯ ವೈಭವೀಕರಣದ ಬಗ್ಗೆ ಆತಂಕವನ್ನು ವ್ಯಕ್ತಪಡಿಸಿದ್ದನ್ನು ಈ ಸಂದರ್ಭದಲ್ಲಿ ಪುನಃ ನೆನಪಿಸಿಕೊಳ್ಳುತ್ತೇನೆ ಎಂದು ಬಂಗೇರ ಹೇಳಿದರು.
ಬೆಳ್ತಂಗಡಿ ತಹಶಿಲ್ದಾರ್ ಕಡತಗಳಿಗೆ ಸಹಿ ಹಾಕುತ್ತಿಲ್ಲ: ಬೆಳ್ತಂಗಡಿಗೆ ನೂತನವಾಗಿ ಆಗಮಿಸಿರುವ ತಹಶೀಲ್ದಾರ್‌ರವರು ಅಕ್ರಮ ಸಕ್ರಮ ಸಿಟ್ಟಿಂಗ್‌ಗೆ ಶಾಸಕರೊಂದಿಗೆ ಅಲೆದಾಡುವುದು ಹೊರತುಪಡಿಸಿ ಜನರಿಗೆ ಅಗತ್ಯವಾಗಿ ಬೇಕಾದ ಯಾವುದೇ ಕಡತಗಳಿಗೆ ಸಹಿ ಹಾಕುತ್ತಿಲ್ಲ. ಇದಕ್ಕೆ ಶಾಸಕ ಹರೀಶ್ ಪೂಂಜಾರವರ ಕುಮ್ಮಕ್ಕು ಇದೆಯೇ ಎಂಬ ಸಂಶಯ ಮೂಡುತ್ತಿದೆ. ತಹಶೀಲ್ದಾರರು ಈ ಚಾಳಿಯನ್ನು ಮುಂದುವರಿಸಿದಲ್ಲಿ ಜನರೊಂದಿಗೆ ತಾಲೂಕು ಕಚೇರಿಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಈ ಮೂಲಕ ಎಚ್ಚರಿಸುತ್ತಿದ್ದೇನೆ ಎಂದು ವಸಂತ ಬಂಗೇರ ಹೇಳಿದರು. ತೋಟತ್ತಾಡಿಯ ವೆಂಕಟರಮಣ ಗೌಡರವರು ಮಾತನಾಡಿ, ಅಕ್ರಮ ಸಕ್ರಮಕ್ಕೆ ಸಂಬಂಧಿಸಿ ನನ್ನಿಂದ ಬಿಜೆಪಿಯ ಮೋಹನ, ಉಮೇಶ, ಹರೀಶ್ ಎಂಬವರು 50 ಸಾವಿರ ರೂಪಾಯಿ ಪಡೆದುಕೊಂಡು ಕೆಲಸ ಮಾಡಿಕೊಟ್ಟಿಲ್ಲ. ಈ ಬಗ್ಗೆ ಕೇಳಿದಾಗ ನನಗೆ ಹಲ್ಲೆ ನಡೆಸಿದ್ದಾರೆ. ದೂರು ನೀಡಲು ಹೋದಾಗ ಪೊಲೀಸರು ದೂರು ಸ್ವೀಕರಿಸಿಲ್ಲ ಎಂದು ಹೇಳಿದರು. ಪಕ್ಷದ ವಕ್ತಾರರಾದ ನ್ಯಾಯವಾದಿ ಮನೋಹರ ಕುಮಾರ್ ಇಳಂತಿಲ ಸ್ವಾಗತಿಸಿ, ವಂದಿಸಿದರು.








