ದ.ಕ. ಜಿಲ್ಲಾ ಜನಜಾಗೃತಿ ವೇದಿಕೆ ಸಭೆ: ನೂತನ ಜಿಲ್ಲಾಧ್ಯಕ್ಷರಾಗಿ ಪದ್ಮನಾಭ ಶೆಟ್ಟಿ

0

ಬೆಳ್ತಂಗಡಿ: ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯು ಕಳೆದ 31 ವರ್ಷಗಳಿಂದ ಮದ್ಯಪಾನ ಮತ್ತು ಮಾದಕ ವಸ್ತುಗಳ ತಡೆಗಟ್ಟುವಿಕೆ ಮತ್ತು ನಿರ್ವಹಣೆಯಲ್ಲಿ ಸಾರ್ಥಕ ಸೇವೆಯನ್ನು ಮಾಡುತ್ತಾ ಬಂದಿದೆ. ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಆರಂಭಗೊಂಡ ಈ ಯೋಜನೆಯು ಇದೀಗ ರಾಜ್ಯಾದ್ಯಂತ ವಿಸ್ತರಿಸಿದೆ. ವೇದಿಕೆಯ ಈ ಕಾರ್ಯಚಟುವಟಿಕೆಯಲ್ಲಿ ರಾಜ್ಯಾದ್ಯಂತ 1061 ನಾಮನಿರ್ದೇಶಿತ ಸದಸ್ಯರು ಮತ್ತು ಪದಾಧಿಕಾರಿಗಳು, 1050ಕ್ಕೂ ಮಿಕ್ಕಿದ ಸ್ವಯಂ ಸೇವಕರು ಯಾವುದೇ ಫಲಾಪೇಕ್ಷೇಯಿಲ್ಲದೆ ಅವಿರತ ಶ್ರಮಿಸುತ್ತಿದ್ದಾರೆ.

ಇಂದು ಉಡುಪಿ ಪ್ರಾದೇಶಿಕ ವ್ಯಾಪ್ತಿಯ ದಕ್ಷಿಣ ಕನ್ನಡ 1 ಮತ್ತು ದ.ಕ.2 ಜಿಲ್ಲಾ ವ್ಯಾಪ್ತಿಯ ಜನಜಾಗೃತಿ ವೇದಿಕೆಯ ಜಿಲ್ಲಾ ವೇದಿಕೆ ಸಭೆಯು ಬಂಟ್ವಾಳದ ಜಿಲ್ಲಾ ಯೋಜನಾ ಕಚೇರಿಯಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಸ್ಥಾಪಕ ಅಧ್ಯಕ್ಷ ವಸಂತ ಸಾಲ್ಯಾನ್ ರವರು ದೀಪ ಬೆಳಗಿಸಿ ಚಾಲನೆ ನೀಡಿದರು. ಸಭೆಯಲ್ಲಿ ಪ್ರಸ್ತುತ ವರ್ಷದಲ್ಲಿ ನಡೆಸಲಾದ ಜನಜಾಗೃತಿ ಕಾರ್ಯಕ್ರಮಗಳ ಅನುಷ್ಠಾನದ ಕುರಿತು ಚರ್ಚೆ ನಡೆಯಿತು. ಮತ್ತು ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮಗಳ ವರದಿಗಳನ್ನು ಮಂಡಿಸಲಾಯಿತು. ಸಭೆಯಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ದಕ್ಷಿಣ ಕನ್ನಡ ಜಿಲ್ಲಾ ಜನಜಾಗೃತಿ ವೇದಿಕೆಯ 4ನೇ ಅಧ್ಯಕ್ಷರಾಗಿ ಪುತ್ತೂರಿನ ಪದ್ಮನಾಭ ಶೆಟ್ಟಿಯವರು ಸರ್ವಾನುಮತದಿಂದ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಬೆಳ್ತಂಗಡಿ ತಾಲೂಕು ವೇದಿಕೆ ಅಧ್ಯಕ್ಷರಾದ ಶ್ರೀಮತಿ ಶಾರದಾ ಆರ್. ರೈ ಆಯ್ಕೆಯಾಗಿರುತ್ತಾರೆ. ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಗೆ ಬೆಳ್ತಂಗಡಿ, ಗುರುವಾಯನಕೆರೆ, ಬಂಟ್ವಾಳ, ವಿಟ್ಲ, ಮಂಗಳೂರು, ಬಜ್ಪೆ, ಪುತ್ತೂರು, ಕಡಬ, ಸುಳ್ಯ ತಾಲೂಕು ಮತ್ತು ಕಾಸರಗೋಡು ಕಾರ್ಯನಿರ್ವಹಿಸುತ್ತವೆ. ಸಭೆಯಲ್ಲಿ ದ.ಕ. 1 ಮತ್ತು ದ.ಕ. 2 ಜಿಲ್ಲೆಗಳ ಅಧ್ಯಕ್ಷರು ಮತ್ತು ಮಾಜಿ ಅಧ್ಯಕ್ಷರುಗಳು, ಯೋಜನಾಧಿಕಾರಿಗಳು ಭಾಗವಹಿಸಿ ಸೂಕ್ತ ಸಲಹೆ ಸೂಚನೆ ನೀಡಿರುತ್ತಾರೆ. ಕ್ರಿಯಾಯೋಜನೆ ಪ್ರಕಾರ ನಡೆಸಬೇಕಾದ ಕಾರ್ಯಕ್ರಮಗಳ ಅನುಷ್ಠಾನವನ್ನು ಉತ್ತಮ ರೀತಿಯಲ್ಲಿ ನಡೆಸುವ ಕುರಿತು ತಿಳಿಸಲಾಯಿತು.
ಪದ್ಮನಾಭ ಶೆಟ್ಟಿಯವರು ಪುತ್ತೂರು ತಾಲೂಕು ವೇದಿಕೆಯ ಮಾಜಿ ಅಧ್ಯಕ್ಷರಾಗಿದ್ದು, ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರೂ, ಶಿವರಾಮ ಕಾರಂತ ಬಾಲವನ ಇದರ ಅಧ್ಯಕ್ಷರೂ, 2009ರ ವಿಶ್ವ ತುಳು ಸಮ್ಮೇಳನದ ಕಾರ್ಯದರ್ಶಿ ಹಾಗೂ ಜಿಲ್ಲಾ ಕ್ರೀಡಾ ಸಂಚಾಲಕರಾಗಿ ಕೆಲಸ ನಿರ್ವಹಿಸಿರುತ್ತಾರೆ. ವಿವಿಧ ಸಂಘ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ.
ಇವರಿಗೆ ಅತ್ತುತ್ತಮ ರೋಟರೆಕ್ಟ್ ಸಭಾಪತಿ ಪ್ರಶಸ್ತಿ ದೊರಕಿರುತ್ತದೆ. ಶ್ರೀ ಧರ್ಮಸ್ಥಳ ಕ್ಷೇತ್ರದ ಹಾಗೂ ಗ್ರಾಮಾಭಿವೃದ್ಧಿ ಯೋಜನೆಯ ಎಲ್ಲಾ ಕಾರ್ಯಕ್ರಮಗಳಲ್ಲಿ ಕಳೆದ 30 ವರ್ಷಗಳಿಂದ ತನ್ನನ್ನು ತಾನು ತೊಡಗಿಸಿಕೊಂಡಿರುತ್ತಾರೆ. ಪ್ರಸ್ತುತ ಇವರು ಪುತ್ತೂರಿನ ಪದ್ಮ ಸೋಲಾರ್ ಸಿಸ್ಟಮ್ಸ್‌ನ ಮಾಲಕರಾಗಿದ್ದು, ರೆಡ್‌ಕ್ರಾಸ್ ಸಂಸ್ಥೆಯ ತಾಲೂಕು ಉಪಸಭಾಪತಿಗಳಾಗಿರುತ್ತಾರೆ.
ವೇದಿಕೆಯಲ್ಲಿ ದ.ಕ. ಜಿಲ್ಲಾಧ್ಯಕ್ಷರಾದ ಎನ್.ಎ.ರಾಮಚಂದ್ರ, ನಿಕಟಪೂರ್ವ ಅಧ್ಯಕ್ಷ ಮಹಮ್ಮದ್ ಇಸ್ಮಾಯಿಲ್, ಸಾಜ ರಾಧಾಕೃಷ್ಣ ಆಳ್ವ, ಜನಜಾಗೃತಿ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯ್ಸ್, ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಮತ್ತು ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.

p>

LEAVE A REPLY

Please enter your comment!
Please enter your name here