ಬಿಲ್ಲವ ಸಂಘದ ಮುಖಂಡರ ವಿರೋಧದ ಪರಿಣಾಮ: ರೋಹಿತ್ ಚಕ್ರತೀರ್ಥರನ್ನು ಅತಿಥಿ ಸ್ಥಾನದಿಂದ ಕೈಬಿಡಲು ಅಳದಂಗಡಿ ಅರಸರ ನಿರ್ಧಾರ: ಪುನರ್‌ಪರಿಶೀಲನೆಗೆ ಬಿಲ್ಲವರ ಇನ್ನೊಂದು ತಂಡದಿಂದ ಅರಸರಿಗೆ ಮನವಿ

0

ವೇಣೂರು: ಅಜಿಲ ಸೀಮೆಯ ಪಟ್ಟದ ದೇವರಾದ ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ರೋಹಿತ್ ಚಕ್ರತೀರ್ಥ ರವರನ್ನು ಅತಿಥಿ ಉಪನ್ಯಾಸಕರಾಗಿ ಕರೆದಿರುವ ವಿಚಾರ ಬೆಳ್ತಂಗಡಿ ತಾಲೂಕು ಬಿಲ್ಲವ ಸಮಾಜದಲ್ಲಿ ಸಂಚಲನಕ್ಕೆ ಕಾರಣವಾಗಿದೆ.
ರೋಹಿತ್ ಚಕ್ರತೀರ್ಥರನ್ನು ಅತಿಥಿಯಾಗಿ ಕರೆಯುವುದನ್ನು ವಿರೋಧಿಸಿ ಬಿಲ್ಲವ ಸಂಘದ ಪ್ರಮುಖ ಪದಾಧಿಕಾರಿಗಳು ದೇವಳದ ಬ್ರಹ್ಮಕಲಶೋತ್ಸವ ಸಮಿತಿಗೆ ಆಕ್ಷೇಪಣೆ ಸಲ್ಲಿಸಿದ್ದು, ಬಿಲ್ಲವ ಪ್ರಮುಖರನ್ನು ಕರೆದು ಅಹವಾಲು ಆಲಿಸಿದ ಅಳದಂಗಡಿ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲರು, ಚಕ್ರತೀರ್ಥರನ್ನು ಅತಿಥಿ ಪಟ್ಟಿಯಿಂದ ಕೈಬಿಡಲು ತೀರ್ಮಾನಿಸಿರುವುದಾಗಿ ಬಿಲ್ಲವ ಸಂಘಟನೆಯ ಪ್ರಮುಖರಿಗೆ ತಿಳಿಸಿದ್ದಾರೆ. ಇದನ್ನು ಸ್ವಾಗತಿಸಿದ ಬಿಲ್ಲವ ಸಂಘಟನೆಯವರು ಮಾಜಿ ಶಾಸಕ ವಸಂತ ಬಂಗೇರ ಹಾಗೂ ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ನೇತೃತ್ವದಲ್ಲಿ ಆಯೋಜಿಸಿದ್ದ ಸಭೆ ಮತ್ತು ಪತ್ರಿಕಾಗೋಷ್ಠಿಯನ್ನು ರದ್ದು ಪಡಿಸಿರುವುದಾಗಿ ತಿಳಿಸಿದ್ದಾರೆ.
ಬ್ರಹ್ಮಶ್ರೀ ನಾರಾಯಣ ಗುರುಗಳು, ಭಗವಾನ್ ಮಹಾವೀರ, ಬಿ.ಆರ್. ಅಂಬೇಡ್ಕರ್, ಕುವೆಂಪು, ರಾಣಿ ಅಬ್ಬಕ್ಕ, ಕಿಯ್ಯಾರ ಕಿಂಞಣ್ಣ ರೈ ಮೊದಲಾದ ದಾರ್ಶನಿಕರ ವ್ಯಕ್ತಿತ್ವಕ್ಕೆ ಕುಂದು ಬರುವ ರೀತಿಯಲ್ಲಿ, ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷರಾಗಿರುವಾಗ ರೋಹಿತ್ ಚಕ್ರತೀರ್ಥ ವರ್ತಿಸಿದ್ದು, ಅವರನ್ನು ವೇಣೂರು ಮಹಾಲಿಂಗೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವದ ಕಾರ್ಯಕ್ರಮಕ್ಕೆ ಶಿಕ್ಷಣ ಮತ್ತು ಧರ್ಮ ಎಂಬ ವಿಚಾರವಾಗಿ ಉಪನ್ಯಾಸ ನೀಡಲು ಕರೆಯುವುದು ಸರಿಯಲ್ಲ. ಅಂತಹ ವ್ಯಕ್ತಿಯನ್ನು ಕರೆಯಬಾರದು. ಕರೆದರೆ ನಾವು ಪ್ರತಿಭಟನೆ ನಡೆಸುತ್ತೇವೆ ಎಂದು ಬಿಲ್ಲವ ಸಂಘಟನೆ ಪದಾಧಿಕಾರಿಗಳು ತಿಳಿಸಿದ್ದರು. ಈ ವಿಚಾರ ಅರಿತ ಅಳದಂಗಡಿ ಅರಸರು ಬಿಲ್ಲವ ಮುಂದಾಳುಗಳನ್ನು ಕರೆಸಿ ಮಾತನಾಡಿದ್ದರು. ಬ್ರಹ್ಮಶ್ರೀ ನಾರಾಯಣ ಗುರುಗಳ ಅನುಯಾಯಿಗಳ ವಿರೋಧವನ್ನು ಧಿಕ್ಕರಿಸಿ ವಿವಾದಿತ ವ್ಯಕ್ತಿಗಳನ್ನು ಕರೆಸುವ ಉದ್ದೇಶ ನಮಗಿಲ್ಲ ನಿಮ್ಮ ಭಾವನೆಯನ್ನು ಗೌರವಿಸಿ, ಬ್ರಹ್ಮಕಲಶೋತ್ಸವ ವಿವಿಧ ಸಮಿತಿಯವರೊಂದಿಗೆ ಚರ್ಚಿಸಿ ನಿರ್ಧಾರ ತಿಳಿಸುವುದಾಗಿ ಡಾ. ಪದ್ಮಪ್ರಸಾದ ಅಜಿಲರು ತಿಳಿಸಿದ್ದರು.
ಫೆ.21 ರಂದು ಬಿಲ್ಲವ ಸಂಘದ ನಿಯೋಗದ ಪ್ರಮುಖರನ್ನು ಸಂಪರ್ಕಿಸಿದ ಅರಸರು, ರೋಹಿತ್ ಚಕ್ರತೀರ್ಥರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವ ವಿಚಾರ ಕೈ ಬಿಟ್ಟಿರುವುದಾಗಿ ತಿಳಿಸಿದ್ದರು.
ಬಿಲ್ಲವ ಪ್ರಮುಖರ ಮತ್ತೊಂದು ನಿಯೋಗ: ರೋಹಿತ್ ಚಕ್ರತೀರ್ಥರನ್ನು ಕೈಬಿಟ್ಟಿರುವುದಾಗಿ ಬಿಲ್ಲವ ಸಂಘದವರಿಗೆ ಅಳದಂಗಡಿ ಅರಸರು ತಿಳಿಸಿದ್ದಾರೆಂಬ ವಿಷಯ ತಿಳಿದ ಬಿಲ್ಲವ ಸಮಾಜದ ಇನ್ನೊಂದು ತಂಡದ ಸುಮಾರು 100ಕ್ಕೂ ಹೆಚ್ಚು ಮಂದಿ ತಮ್ಮ ನಿರ್ಧಾರ ಪುನರ್‌ಪರಿಶೀಲಿಸಬೇಕೆಂದು ಒತ್ತಾಯಿಸಲು ಫೆ.22 ರಂದು ಅಪರಾಹ್ನ ಅಳದಂಗಡಿ ಅರಸರಾದ ಡಾ. ಪದ್ಮಪ್ರಸಾದ ಅಜಿಲರಲ್ಲಿಗೆ ನಿಯೋಗ ಹೋದರು. ಆ ವೇಳೆಗೆ ಅಜಿಲರು ಅರಮನೆಯಿಂದ ಹೊರಟು ಬರುತ್ತಿದ್ದರೆನ್ನಲಾಗಿದೆ. ದಾರಿಯಲ್ಲೇ ವಾಹನ ನಿಲ್ಲಿಸಿ ನಿಯೋಗದೊಂದಿಗೆ ಮಾತನಾಡಿದ ಅಜಿಲರು, ಬ್ರಹ್ಮಕಲಶೋತ್ಸವದಲ್ಲಿ ಯಾವುದೋ ಗೊಂದಲ ಆಗಬಾರದು ಅದಕ್ಕಾಗಿ ರೋಹಿತ್ ಚಕ್ರತೀರ್ಥರನ್ನು ಕರೆಯುತ್ತಿಲ್ಲವೆಂದು ಬಿಲ್ಲವ ಸಂಘದವರಿಗೆ ತಿಳಿಸಿದ್ದೇನೆ ಎಂದು ಹೇಳಿದರೆನ್ನಲಾಗಿದೆ. ರೋಹಿತ್ ಚಕ್ರತೀರ್ಥರನ್ನು ಕರೆಯಲೇ ಬೇಕು ಎಂದು ಅಹವಾಲು ಮಂಡಿಸಿದ ನಿಯೋಗದ ಸದಸ್ಯರು ಅತಿಥಿಯಾಗಿ ಅಲ್ಲದಿದ್ದರೂ ಭಕ್ತನ ನೆಲೆಯಲ್ಲಿ ಬರಬಾರದೆಂದು ಯಾರನ್ನೂ ಹೇಳಲಾಗುವುದಿಲ್ಲ ಅವರನ್ನು ಕರೆದು ಪ್ರಸಾದ ಕೊಡಲೇಬೇಕೆಂದು ಹೇಳಿದರೆನ್ನಲಾಗಿದೆ. ಆ ಬಗ್ಗೆ ಮತ್ತೆ ಚರ್ಚಿಸೋಣ ಎಂದು ಡಾ. ಅಜಿಲರು ಹೇಳಿದರೆಂದು ತಿಳಿದುಬಂದಿದೆ. ಈ ಬಗ್ಗೆ ನಿಯೋಗದಲ್ಲಿದ್ದ ರತ್ನಾಕರ ಬುಣ್ಣು ಅವರನ್ನು ಸಂಪರ್ಕಿಸಿ ಸುದ್ದಿಯ ವತಿಯಿಂದ ವಿಚಾರಿಸಿದಾಗ ರೋಹಿತ್ ಚಕ್ರತೀರ್ಥರನ್ನು ಅತಿಥಿಯಾಗಿ ಕರೆಯುವುದಿಲ್ಲವೆಂದು ಬಿಲ್ಲವ ಸಂಘದ ಪದಾಧಿಕಾರಿಗಳಿಗೆ ಹೇಳಿರುವುದಾಗಿ ಅರಸರು ತಿಳಿಸಿದರು. ಆದರೆ ದೇವಸ್ಥಾನಕ್ಕೆ ಬರಬಾರದೆಂದು ಯಾರನ್ನೂ ಹೇಳಲಾಗುವುದಿಲ್ಲ. ಆಬಗ್ಗೆ ಮಾತನಾಡೋಣ ಎಂದು ಅರಸರು ಹೇಳಿದ್ದಾರೆ ನಮ್ಮ ನಿಲುವನ್ನು ಮುಂದಕ್ಕೆ ತಿಳಿಸುತ್ತೇವೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here