ಪತ್ರಿಕಾ ಗೋಷ್ಠಿ
ಬೆಳ್ತಂಗಡಿ : ತಣ್ಣೀರುಪಂತ ಗ್ರಾಮದ ಶ್ರೀ ದೇವಿ ನಗರ ಶ್ರೀ ಮಹಮ್ಮಾಯಿ ದೇವಸ್ಥಾನದಲ್ಲಿ ಫೆ. 22 ರಿಂದ 24ರ ವರೆಗೆ ಪ್ರತಿಷ್ಠಾ ಮಹೋತ್ಸವ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಶಾಸಕ ಪ್ರತಿಷ್ಠಾ ಮಹೋತ್ಸವ ಸಮಿತಿ ಅಧ್ಯಕ್ಷ ಹರೀಶ್ ಪೂಂಜ, ಕಾರ್ಯಾಧ್ಯಕ್ಷ ಪ್ರಭಾಕರ ಗೌಡ ಪೊಸಂದೋಡಿ ಮತ್ತು ಆಡಳಿತ ಸಮಿತಿ ಅಧ್ಯಕ್ಷ ಚಿದಾನಂದ ಅರ್ಜವಂ ಹೇಳಿದರು. ಅವರು ಫೆ.18 ರಂದು ಬೆಳ್ತಂಗಡಿ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
1970-80ರ ದಶಕದಲ್ಲಿ ಮರಾಠಿ ಪಂಗಡಕ್ಕೆ ಸೇರಿದ ಜನಾಂಗವು ಗುಮ್ಮಟೆ ಪೂಜೆಯ ಮೂಲಕ ಗ್ರಾಮದ ಹಾಗೂ ನೆರೆಗ್ರಾಮದ ಮನೆ ಮನೆಗಳಿಗೆ ಭೇಟಿಕೊಟ್ಟು ಗುಮ್ಮಟೆ ನೃತ್ಯದೊಂದಿಗೆ ಮಹಾಮ್ಮಾಯಿ ಮತ್ತು ಭೈರವ ದೇವರ ಸೇವೆಯನ್ನು ಮಾಡುತ್ತಿದ್ದರು. 9 ದಿನಗಳ ಸೇವೆಯ ನಂತರ ಕೊನೆಯ ದಿನ ತರವಾಡು ಮನೆಯಲ್ಲಿ ಹತ್ತಾರು ತರವಾಡಿನ ಜನರು ಒಟ್ಟು ಸೇರಿ ಮಹಾಮ್ಮಾಯಿ ಭೈರವ ದೇವರ ಆರಾಧನೆ ಮಾಡಿಕೊಂಡು ಬರುತ್ತಿದ್ದರು. ಈ ಕಾರ್ಯಕ್ರಮವನ್ನು ನಡೆಸಲು ತಣ್ಣೀರುಪಂತ ಗ್ರಾಮದ ಶ್ರೀ ದೇವಿ ನಗರ ಎಂಬಲ್ಲಿ 1994 ರಲ್ಲಿ ಮಂದಿರ ನಿರ್ಮಿಸಿ ಪ್ರತಿ ಶುಕ್ರವಾರದಂದು ಭಜನಾ ಸೇವೆಯನ್ನು ನಡೆಸಿಕೊಂಡು ಬರುತ್ತಿದ್ದರು. 2002 ರಲ್ಲಿ ಮಹಾಮ್ಮಾಯಿ ಮಂದಿರವನ್ನೇ ದೇವಸ್ಥಾನವಾಗಿ ಪರಿವರ್ತಿಸಿ ನಿತ್ಯ ಪೂಜೆ, ವಾರದ ಭಜನೆ, ಅನ್ನದಾನ ಸಹಿತ ಸಂಕ್ರಾಂತಿ ಪೂಜೆ, ಸಂಕಷ್ಟಹರ ಪೂಜೆ ನವರಾತ್ರಿ ಪೂಜೆ, ಧನು ಪೂಜೆ, ವಾರ್ಷಿಕ ಜಾತ್ರೋತ್ಸವವು ಊರಿನ ಹಾಗೂ ಪರ ಊರಿನ ಭಕ್ತರ ಸಹಕಾರದೊಂದಿಗೆ ಅತ್ಯಂತ ಯಶಸ್ವಿಯಾಗಿ ನಡೆಯುತ್ತಾ ಬಂದಿರುತ್ತದೆ. 2022 ರ ಎಪ್ರಿಲ್ ತಿಂಗಳಲ್ಲಿ ನಡೆದ ಜಾತ್ರೋತ್ಸವದ ಸಂದರ್ಭದ ಮಂಡಳಿಯ ಸಭೆ ಸೇರಿ ಕ್ಷೇತ್ರವನ್ನು ಜೀರ್ಣೋದ್ಧಾರ ಮಾಡುವುದೆಂದು ನಿರ್ಣಯಿಸಿ ಊರಿನ ಪರ ಊರಿನ ಗಣ್ಯರು ಹಾಗೂ ಭಗವದ್ಭಕ್ತರ ಸಮ್ಮುಖದಲ್ಲಿ ಜೀರ್ಣೋದ್ಧಾರ ಸಮಿತಿಯನ್ನು ರಚಿಸಿ ವೇದಮೂರ್ತಿ ಬ್ರಹ್ಮಶ್ರೀ ಗೋಪಾಕೃಷ್ಣ ತಂತ್ರಿಗಳು ಮಡಂತ್ಯಾರು ಹಾಗೂ ದೈವಜ್ಞರು ವಾಸ್ತುಶಿಲ್ಪ ಶಾಸ್ತ್ರಜ್ಞರಾದ ಡಾ. ಬಿ. ಕೆ. ಮೋನಪ್ಪ ಆಚಾರ್ಯ ಬೈದಗುತ್ತು ಮನೆ ಕೊಲ ಪೋಸ್ಟ್ ಬಂಟ್ವಾಳ ತಾಲೂಕು ಅವರ ಮಾರ್ಗದರ್ಶನದಲ್ಲಿ 2022 ಜೂ 17 ರಂದು ಶಿಲಾನ್ಯಾಸಗೊಂಡು ತದನಂತರ ಅಂದಾಜು 35 ಲಕ್ಷ ವೆಚ್ಚದ ಶಿಲಾಮಯ ಗರ್ಭಗುಡಿಯ ನಿರ್ಮಾಣ ಭೈರವ ದೇವರ ಗುಡಿ ನಿರ್ಮಾಣ ಪರಿವಾರ ದೈವಗಳ ಅಶ್ವವೃಕ್ಷದ ಕಟ್ಟೆ ನಾಗದೇವರ ಕಟ್ಟೆ ಹಾಗೂ ಸುತ್ತು ಪೌಳಿ ನಿರ್ಮಾಣದ ಕೆಲಸ ನಡೆದಿದೆ.
ಪ್ರತಿಷ್ಠಾ ಮಹೋತ್ಸವ ಸಮಿತಿ ರಚಿಸಲಾಗಿದ್ದು ವಿವಿಧ 20 ಸಮಿತಿ ರಚಿಸಿ ಸಂಚಾಲಕರು ಉಪಸಂಚಾಲಕರು ಸಮಿತಿ ಸದಸ್ಯರನ್ನು ರಚಿಸಲಾಗಿದೆ. ಮಡಂತ್ಯಾರು ವೇದಮೂರ್ತಿ ಬ್ರಹ್ಮ ಶ್ರೀ ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ.
ಫೆ.22 ರಂದು ಬೆಳಿಗ್ಗೆ 9.30ಕ್ಕೆ ಉಗ್ರಾಣ ಮುಹೂರ್ತ ಉದ್ಯಮಿ ಶಿವಶಂಕರ್ ನಾಯಕ್ ಉದ್ಘಾಟಿಸಲಿದ್ದಾರೆ. ತಾಲೂಕಿನ ವಿವಿಧ ಭಾಗಗಳಿಂದ ಹೊರೆಕಾಣಿಕೆ ಆಗಮಿಸಲಿದ್ದು, ಬl ಕಲ್ಲೇರಿಯಿಂದ 9.30ಕ್ಕೆ ಕಲ್ಲೇರಿ ಮಹಾದ್ವಾರದಿಂದ ದೇಗುಲ ತಲುಪಲಿದೆ. ಬೆಳಗ್ಗೆ ಕಾರ್ಯಾಲಯವನ್ನು ಬಿ. ನಿರಂಜನ್ ಬಾವಂತಬೆಟ್ಟು ಉದ್ಘಾಟಿಸಲಿದ್ದಾರೆ. ಬಳಿಕ ತಂತ್ರಿಗಳ ಸ್ವಾಗತ, ತೋರಣ ಮುಹೂರ್ತ, ಸಾಮೂಹಿಕ ಪ್ರಾರ್ಥನೆ ಪುಣ್ಯಾಹವಾಚನ, ಗಣಪತಿ ಹವನ ಅಶ್ವತ್ಥ ಕಟ್ಟೆಯಲ್ಲಿ ಅಶ್ವತ್ಥ ವೃಕ್ಷಕ್ಕೆ ಉಪನಯನ ಮತ್ತು ವಿವಾಹ ಸಂಸ್ಕಾರ, ಅಶ್ವತ್ಥ ಕಟ್ಟೆಯಲ್ಲಿ ನಾಗದೇವರ ಪ್ರತಿಷ್ಠೆ, ಪ್ರಧಾನ ಹೋಮ, ಪಂಚ ವಿಶಂತಿ ಕಲಶ ಪೂರಣೆ, ಕಲಶ ಪೂಜೆ, ಪಂಚವಿಂಶತಿ ಕಲಶಾಭಿಷೇಕ, ನಾಗತಂಬಿಲ, ಮಹಾಪೂಜೆ, ಪೂರ್ವಾಹ್ನ ಗಂಟೆ 11.30 ಕ್ಕೆ ಧಾರ್ಮಿಕ ಸಭೆ ಎಸ್. ಕೆ. ಡಿ. ಆರ್. ಡಿ. ಪಿ. ಮೈಸೂರು ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಜಯರಾಮ ನೆಲ್ಲಿತ್ತಾಯ ಸಭಾಧ್ಯಕ್ಷತೆಯಲ್ಲಿ ನಡೆಯಲಿದೆ. ಪತ್ರಕರ್ತರಾದ ಕಾಂತ್ ಶೆಟ್ಟಿ ಕಾರ್ಕಳ ಇವರಿಂದ ಧಾರ್ಮಿಕ ಉಪನ್ಯಾಸ, ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರ ಹರೀಶ್ ಕುಮಾರ್, ಮೃತ್ಯುಂಜಯ ದೇವಸ್ಥಾನ ರುದ್ರಗಿರಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಭರತ್ ಶೆಟ್ಟಿ ಕೇರಿ, ಬಳ್ಳಮಂಜ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರಾದ ಹರ್ಷ ಸಂಪಿಗೆತ್ತಾಯ ಮೊದಲಾದವರು ಭಾಗವಹಿಸುವರು.
ರಾತ್ರಿ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ರಾತ್ರಿ 8:30 ರಿಂದ ಸನಾತನ ನಾಟ್ಯಾಲಯ ಪ್ರಸ್ತುತಪಡಿಸುವ ರಾಷ್ಟ್ರ ಧರ್ಮ ಜಾಗೃತಿ ಪುಣ್ಯಭೂಮಿ ಭಾರತ ನೃತ್ಯ ಕಾರ್ಯಕ್ರಮ ನಡೆಯಲಿದೆ.
ಫೆ.23 ರಂದು ಬೆಳಿಗ್ಗೆ 7.00 ರಿಂದ ವೈದಿಕ ಕಾರ್ಯಕ್ರಮಗಳು ಚಂಡಿಕಾಯಾಗ ನಡೆಯಲಿದೆ. ಬೆಳಿಗ್ಗೆ 10.30 ಹಾಗೂ ಮಧ್ಯಾಹ್ನ 2.30ರಿಂದ ಭಜನಾ ಕಾರ್ಯಕ್ರಮ, ನಡೆಯಲಿದೆ .
ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ಧಾಮ ಮಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಶಾಸಕ ಹರೀಶ್ ಪೂಂಜ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಧಾರ್ಮಿಕ ದತ್ತಿ ಇಲಾಖೆ ಸದಸ್ಯ ಸೂರ್ಯನಾರಾಯಣ ಭಟ್ ಕಶೆಕೋಡಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರ ಕೆ. ಪ್ರತಾಪ್ ಸಿಂಹ ನಾಯಕ್, ಉಜಿರೆ ಶ್ರೀ ಜನಾರ್ದನ ದೇಗುಲದ ಶರತ್ ಕೃಷ್ಣ ಪಡ್ವೆಟ್ನಾಯ, ಅಳದಂಗಡಿ ಶ್ರೀ ಸತ್ಯದೇವತೆ ದೇಗುಲದ ಆಡಳಿತ ಮೊಕ್ತೇಸರ ಶಿವಪ್ರಸಾದ್ ಅಜಿಲ ಮೊದಲಾದವರು ಭಾಗವಹಿಸಲಿದ್ದಾರೆ. ಸಂಜೆ ತಾಲೂಕಿನ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8.30ರಿಂದ ಕಾಟಿಪಳ್ಳ, ಬಾಳ ಮಹಿಳಾ ಯಕ್ಷಗಾನ ಸಂಘದಿಂದ ಶ್ರೀ ದೇವಿ ಮಹಿಷಮರ್ದಿನಿ ಯಕ್ಷಗಾನ ನಡೆಯಲಿದೆ.
ಫೆ.24 ರಂದು ಬೆಳಿಗ್ಗೆ ಗಂಟೆ 7ರಿಂದ ಸ್ವಸ್ತಿ ಪುಣ್ಯಾಹವಾಚನ, 108 ತೆಂಗಿನಕಾಯಿಯ ಗಣಪತಿ ಹೋಮ, ಪ್ರತಿಷ್ಠಾಕಲಶ ಪೂಜೆ, 11.24ರ ವೃಷಭ ಲಗ್ನದಲ್ಲಿ ಶ್ರೀ ಮಹಮ್ಮಾಯಿ ದೇವಿ, ಕಾಲಭೈರವ ದೇವರ ಪ್ರತಿಷ್ಠೆ, ಪ್ರತಿಷ್ಠಾ ಕಲಶಾಭಿಷೇಕ, ಪ್ರತಿಷ್ಠಾಪೂಜೆ, ಕಲಶಾಭಿಷೇಕ, ಮಹಾಪೂಜೆ, ರಾಶಿಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
ಸಂಜೆ ಗಂಟೆ 6.00ರಿಂದ ಗೋಂದೊಳು ಆರಂಭವಾಗಲಿದ್ದು, ಶ್ರೀ ದೇವಿಯ ಗದ್ದುಗೆ ಪೂಜೆ, ಕಾಲಭೈರವ ದೇವರ ಗದ್ದುಗೆ ಪೂಜೆ ನಡೆಯಲಿದೆ. ರಾತ್ರಿ ಗಂಟೆ 7ಕ್ಕೆ ಭೈರವ ದೇವರಿಗೆ ಬಿಂದು ಸಮರ್ಪಣೆ, 8ರಿ೦ದ ಭಜನಾ ಕಾರ್ಯಕ್ರಮ,10ರಿಂದ ಗುಮ್ಮಟೆ ನೃತ್ಯ, ಶ್ರೀ ದೇವಿಯ ಪಾತ್ರಿಯಿಂದ ದರ್ಶನ ಸೇವೆ, ನಡೆಯಲಿದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ನಾಯ್ಕ, ಪ್ರತಿಷ್ಠಾ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುರೇಶ್ ಎಚ್. ಎಲ್. ಹಲೇಜಿ, ಹೊರೆಕಾಣಿಕೆ ಸಮಿತಿ ಸಂಚಾಲಕ ವಿಶ್ವನಾಥ ಕಿನ್ನಿ ಕೊಡಂಗೆ ಉಪಸ್ಥಿತರಿದ್ದರು.