




ಪತ್ರಿಕಾಗೋಷ್ಠಿ
ಬೆಳ್ತಂಗಡಿ: ಸಾಮಾಜಿಕ ಜಾಲತಾಣದಲ್ಲಿ ಕೆಲವು ಎಸ್.ಡಿ.ಪಿ.ಐ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಮತ್ತು ನಾಯಕರನ್ನು ಅವಹೇಳಕಾರಿಯಾಗಿ ಚಿತ್ರಿಸಿ, ವಿವಿಧ ಪೋಸ್ಟ್ ಹಾಕಿರುವುದಕ್ಕೆ ಪ್ರತ್ಯುತ್ತರ ನೀಡಿದಕ್ಕಾಗಿ ನನ್ನ ಮೊಬೈಲ್ ನಂಬ್ರಕ್ಕೆ ವಿವಿಧ ಮೊಬೈಲ್ ನಂಬ್ರಗಳಿಂದ ನಿರಂತ ಅವಹೇಳಕಾರಿ ನಿಂದನೆಗಳು, ಜೀವ ಬೆದರಿಕೆಗಳು ಬಂದಿದ್ದು, ಈ ಬಗ್ಗೆ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ಕಳಿಯ ಗ್ರಾ.ಪಂ ಸದಸ್ಯ ಹಾಗೂ ದ.ಕ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಸಂಘಟನಾ ಕಾರ್ಯದರ್ಶಿ ಕೆ.ಎಮ್ ಅಬ್ದುಲ್ ಕರೀಮ್ ಹೇಳಿದರು.

ಅವರು ಜ.25ರಂದು ಬೆಳ್ತಂಗಡಿ ಗುರುನಾರಾಯಣ ಸಭಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಬೆಳ್ತಂಗಡಿಯಲ್ಲಿ `ವರ್ಲ್ಡ್ ಇನ್ಫಾರ್ಮೆಶನ್’ ಎಂಬ ವಾಟ್ಸಾಪ್ ಗ್ರೂಪ್ನಲ್ಲಿ ವಿವಿಧ ರಾಜಕೀಯ, ಪಕ್ಷಗಳ ಸಂಘಟನೆಗಳ ಮುಖಂಡರು, ಗಣ್ಯರಿದ್ದಾರೆ. ಈ ಗ್ರೂಪ್ನ ಕೆಲವು ಸದಸ್ಯರು ಕಾಂಗ್ರೆಸ್ ಪಕ್ಷದ ನಾಯಕರನ್ನು, ಕಾಂಗ್ರೆಸ್ ಪಕ್ಷವನ್ನು, ಕಾರ್ಯಕರ್ತರನ್ನು ಅವಹೇಳನಕಾರಿಯಾಗಿ ಚಿತ್ರಿಸಿ, ವೀಡಿಯೋ ತುಣುಕುಗಳನ್ನು ಎಡಿಟ್ ಮಾಡಿ, ಹೀಯಾಳಿಸುವ ಬರವಣಿಗೆ ಪೊಸ್ಟ್ ಹಾಕುತ್ತಿದ್ದಾರೆ.


ಇದನ್ನು ಪ್ರಶ್ನಿಸಿ ಪ್ರತ್ಯುತ್ತರ ನೀಡಿದ್ದಕ್ಕಾಗಿ ನನಗೆ ಅವಹೇಳನಕಾರಿಯಾಗಿ ಬೈದು, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು.
ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ತಾಲೂಕು ಅಧ್ಯಕ್ಷ ಸಲೀಂ ಗುರುವಾಯನಕೆರೆ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷದ ದಶ ಸಂಕಲ್ಪ ಕಾರ್ಯಕ್ರಮದಲ್ಲಿ ಕರಾವಳಿ ಭಾಗದ ಅಲ್ಪಾಸಂಖ್ಯಾತರಿಗೆ ಅನುದಾನ ನೀಡಿಲ್ಲ ಎಂಬ ಅಪಪ್ರಚಾರ ನಡೆಯುತ್ತಿದೆ. ಆದರೆ ಇದು ಸತ್ಯಕ್ಕೆ ದೂರವಾದ ವಿಚಾರ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅಲ್ಪಸಂಖ್ಯಾತರಿಗೆ ರೂ.3150ಕೋಟಿ ಬಜೆಟ್ನಲ್ಲಿ ಮೀಸಲಿರಿಸಿದ್ದರು, ದಶ ಸಂಕಲ್ಪ ಕಾರ್ಯಕ್ರಮದಲ್ಲಿ ಬಜೆಟ್ ಮರುಸ್ಥಾಪನೆ ಎಂದು ಇದೆ. 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಸರಕಾರ ಬಂದರೆ ಬಜೆಟ್ನಲ್ಲಿ ಮತ್ತೆ ಈ ಅನುದಾನ ಮೀಸಲಿಡಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ವಿನ್ಸೆಂಟ್ ಡಿ’ಸೋಜ, ಪಕ್ಷದ ಪ್ರಮುಖರಾದ ಮೆಹಬೂಬ್, ಕಳಿಯ ಗ್ರಾ.ಪಂ ಸದಸ್ಯ ಲತೀಫ್, ಎ.ಕೆ ಅಹಮ್ಮದ್, ಕೆ.ಹೆಚ್ ಖಾಲಿದ್, ರಫಿ ಬೆಳ್ತಂಗಡಿ, ಖಾಲಿದ್ ಪುಲಾಬೆ ಉಪಸ್ಥಿತರಿದ್ದರು.









