ಉಜಿರೆ: ರೋಟರಿ ಕ್ಲಬ್ ಬೆಳ್ತಂಗಡಿ , ಗ್ರಾಮ ಪಂಚಾಯತ್ ಉಜಿರೆ, ಪ್ರೇರಣ ಸಂಜೀವಿನಿ ಮಹಿಳಾ ಒಕ್ಕೂಟ ಉಜಿರೆ ಇವರ ಸಂಯುಕ್ತ ಆಶ್ರಯದಲ್ಲಿ ಬಿ ಹ್ಯೂಮನ್ ಹಾಗೂ ಯೇನಪೋಯ ಆಸ್ಪತ್ರೆ ಯ ಸಹಭಾಗಿತ್ವದಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜ. 21ರಂದು ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟನೆಯನ್ನು ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಆರ್. ರವರು ನೆರವೇರಿಸಿದರು.
ಆರಂಭದ ಹಂತದಲ್ಲೇ ಕಾಯಿಲೆ ಪತ್ತೆಯಾದಲ್ಲಿ ಮುಂದಕ್ಕೆ ಆಗಬಹುದಾದ ತೊಂದರೆಗಳನ್ನು ಸುಲಭವಾಗಿ ತಡೆಗಟ್ಟಬಹುದು. ಈ ನಿಟ್ಟಿನಲ್ಲಿ ಸಾರ್ವಜನಿಕರು ಇಂತಹ ಆರೋಗ್ಯ ಶಿಬಿರಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು. ವೇದಿಕೆಯಲ್ಲಿ ಬಿ ಹ್ಯೂಮನ್ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಆಸಿಫ್ ಡೀಲ್, ಯೇನಪೋಯ ಆಸ್ಪತ್ರೆಯ ಆಡಳಿತಾಧಿಕಾರಿ ರಜಾಕ್, ಉಜಿರೆಯ ಪ್ರೇರಣ ಸಂಜೀವಿನಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಶೀಲಾವತಿ , ರೋಟರಿ ಕ್ಲಬ್ ಅಧ್ಯಕ್ಷೆ ರೊ. ಮನೋರಮಾ ಭಟ್, ಕಾರ್ಯದರ್ಶಿ ರೊ. ರಕ್ಷಾ ರಾಗ್ನೀಶ್ ಇದ್ದರು.
ರೋಟರಿ ಕ್ಲಬ್ ಅಧ್ಯಕ್ಷೆ ರೊ. ಮನೋರಮಾ ಭಟ್ ಸ್ವಾಗತಿಸಿ, ರೊ. ಬಿ.ಕೆ. ಧನಂಜಯ ರಾವ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಯೇನಪೋಯ ಸ್ಪೆಷಾಲಿಟಿ ಆಸ್ಪತ್ರೆಯ ಕಣ್ಣು ಮೂಗು ಗಂಟಲು ವಿಭಾಗ, ನೇತ್ರ ಚಿಕಿತ್ಸಾ ವಿಭಾಗ, ಕ್ಯಾನ್ಸರ್ ವಿಭಾಗ, ಸ್ತ್ರೀರೋಗ, ಮೂತ್ರಕೋಶ ವಿಭಾಗ, ಸಾಮಾನ್ಯ ಚಿಕಿತ್ಸಾ ವಿಭಾಗ ಹಾಗೂ ಹಲ್ಲಿನ ಚಿಕಿತ್ಸಾ ವಿಭಾಗದ 40 ಕ್ಕೂ ಮಿಕ್ಕಿ ತಜ್ಞ ವೈದ್ಯರು ಹಾಗೂ ತಂತ್ರಜ್ಞರು ಶಿಬಿರದಲ್ಲಿ ಸಹಕರಿಸಿದರು. ಪರಿಸರದ ಸುಮಾರು 300 ಕ್ಕೂ ಮಿಕ್ಕಿ ಜನರು ಭಾಗವಹಿಸಿ ಪ್ರಯೋಜನ ಪಡೆದುಕೊಂಡರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸಮಾಜ ಕಾರ್ಯ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು ಸ್ವಯಂಸೇವಕರಾಗಿ ಸಹಕರಿಸಿದರು.