ನಾವೂರು ಆರೋಗ್ಯ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣ: ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ ರಕ್ಷಿತ್ ಬಡೆಕಾವುಗುತ್ತು: ಡಾ. ಪ್ರದೀಪ್ ಪರ ವಕೀಲರಿಂದ ಜಾಮೀನು ಅರ್ಜಿಗೆ ಆಕ್ಷೇಪ: ಅ.27ಕ್ಕೆ ವಿಚಾರಣೆ ಮುಂದೂಡಿಕೆ

0

ಬೆಳ್ತಂಗಡಿ: ನಾವೂರು ಪೇಟೆಯಲ್ಲಿ‌ ಕಾರ್ಯ ನಿರ್ವಹಿಸುತ್ತಿರುವ ಡಾ. ಪ್ರದೀಪ್ ಎ. ಅವರ ಕ್ಲಿನಿಕ್ ಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವೂರು ಗ್ರಾಮದ ಬಡೆಕಾವುಗುತ್ತು ನಿವಾಸಿ ರಕ್ಷಿತ್ ಅವರು ಮಂಗಳೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಕ್ಕೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.

ತಾನು ಉಡುಪಿ ಜಿಲ್ಲೆಯ ಜಿಲ್ಲಾ ಸಾಮಾಜಿಕ ಲೆಕ್ಕ ಪರಿಶೋಧನಾ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದು ನಾವೂರು ಗ್ರಾಮದ ಬಡೆಕಾವುಗುತ್ತು ದೈವಸ್ಥಾನದ ಧರ್ಮದರ್ಶಿಯಾಗಿ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದೇನೆ.

ಬಡೆಕಾವು ಗುತ್ತು ಕುಟುಂಬಕ್ಕೆ ಬೆಳ್ತಂಗಡಿ ತಾಲೂಕಿನಲ್ಲಿ ಉತ್ತಮ ಹೆಸರಿದೆ. ತನ್ನ ವಿರುದ್ಧ ಇದುವರೆಗೆ ಯಾವುದೇ ಕಪ್ಪುಚುಕ್ಕೆ ಇಲ್ಲ . ಅ.7ರಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಅಪರಾಧ ಸಂಖ್ಯೆ 112/2026 ಪ್ರಕರಣದಲ್ಲಿ ತನ್ನನ್ನು ಸುಳ್ಳು ಆರೋಪದ ಮೇಲೆ ಸಿಲುಕಿಸಲಾಗುತ್ತಿದೆ. ದೂರುದಾರರು ದ್ವೇಷದಿಂದ ತನ್ನ ಹೆಸರನ್ನು ಪ್ರಸ್ತಾಪಿಸಿದ್ದು ಬಂಧಿತರ ಮೇಲೆ ರಾಜಕೀಯ ಒತ್ತಡ ಹೇರಿ ತನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಲು ಪ್ರಯತ್ನಿಸಲಾಗುತ್ತಿದೆ. ತಾನು ಈ ಕೃತ್ಯವನ್ನು ಮಾಡಿಲ್ಲ, ಯಾರಿಗೂ ಪ್ರಚೋದನೆ ನೀಡಿಲ್ಲ. ತಾನು ಸಂಪೂರ್ಣ ನಿರಪರಾಧಿ. ತಾನು ಕಾನೂನನ್ನು ಗೌರವಿಸುವ ಪ್ರಜೆಯಾಗಿದ್ದು ಪೊಲೀಸರು ಯಾವುದೇ ಕ್ಷಣದಲ್ಲಿ ಬಂಧಿಸಬಹುದೆಂಬ ಆತಂಕವಿದೆ. ತನ್ನ ಮಾನ-ಪ್ರತಿಷ್ಠೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಪ್ರಕರಣದ ವಿಚಾರಣೆ ಮುಗಿಯುವವರೆಗೆ ತನಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಬೇಕು ಎಂದು ನ್ಯಾಯಾಲಯಕ್ಕೆ ತಮ್ಮ ವಕೀಲ ಮಯೂರ ಕೀರ್ತಿ ಮೂಲಕ‌ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯಲ್ಲಿ ರಕ್ಷಿತ್ ಅವರು ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಡಾ. ಪ್ರದೀಪ್ ಪರ ವಕೀಲರಿಂದ ಆಕ್ಷೇಪಣೆ:ರಕ್ಷಿತ್ ಬಡೆಕಾವುಗುತ್ತು ಅವರು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಗೆ ಸಂತ್ರಸ್ತ ಡಾ. ಪ್ರದೀಪ್ ಎ. ಅವರ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದ್ದಾರೆ. ಡಾ. ಪ್ರದೀಪ್ ಅವರ ಪರ ವಕೀಲರಾದ ಬಿ.ಕೆ.ಧನಂಜಯ ರಾವ್, ಸುಬ್ರಹ್ಮಣ್ಯ ಕುಮಾರ್ ಅಗರ್ತ ಮತ್ತು ಜಿನೇಂದ್ರ ಜೈನ್ ಅವರು ನ್ಯಾಯಾಲಯಕ್ಕೆ ಹಾಜರಾಗಿ ರಕ್ಷಿತ್ ಅವರ ನಿರೀಕ್ಷಣಾ ಜಾಮೀನು ಅರ್ಜಿಗೆ ಆಕ್ಷೇಪ ಸಲ್ಲಿಸಿದ್ದಾರೆ. ಆಕ್ಷೇಪಣಾ ಅರ್ಜಿ ಸ್ವೀಕರಿಸಿರುವ ನ್ಯಾಯಾಧೀಶರು ಮುಂದಿನ ವಿಚಾರಣೆಯನ್ನು ಅ.27ಕ್ಕೆ ಮುಂದೂಡಿದ್ದಾರೆ.

ಈ ಪ್ರಕರಣದಲ್ಲಿ‌ ಪ್ರಾಸಿಕ್ಯೂಶನ್ ಪರ ನ್ಯಾಯಾಲಯಕ್ಕೆ ಹಾಜರಾಗಿದ್ದ ಸರಕಾರಿ ಅಭಿಯೋಜಕ ಮೋಹನ್ ಕುಮಾರ್ ಅವರು ಕೂಡ ರಕ್ಷಿತ್ ಅವರ ನಿರೀಕ್ಷಣಾ ಜಾಮೀನಿಗೆ ಆಕ್ಷೇಪಣೆ ಸಲ್ಲಿಸಿದ್ದಾರೆ.ಆರೋಗ್ಯ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ನಾವೂರಿನ ರವಿಪೂಜಾರಿ, ಸುರೇಶ್ ಇಂಚರ ಮತ್ತು ದಿನೇಶ್ ಪ್ರಭು ಎಂಬವರನ್ನು ಬೆಳ್ತಂಗಡಿ ಠಾಣಾ ಪೊಲೀಸರು ಬಂಧಿಸಿ ಜೈಲುಗಟ್ಟಿದ್ದಾರೆ.

LEAVE A REPLY

Please enter your comment!
Please enter your name here