ಮಾಲಾಡಿಯಲ್ಲಿ ಸತ್ಯ ಶೋಧಕ ವೇದಿಕೆಯಿಂದ ‘ಸೂಪರ್ ಸಿಕ್ಸ್’ ಕ್ರಿಕೆಟ್ ಪಂದ್ಯಾಟ: ಸಮಾಜಸೇವಾ ಚಟುವಟಿಕೆಗೆ ಚಾಲನೆ​

0

ಬೆಳ್ತಂಗಡಿ: ಸತ್ಯ ಶೋಧಕ ವೇದಿಕೆ ಬೆಳ್ತಂಗಡಿ ಇದರ ಆಶ್ರಯದಲ್ಲಿ ಸಮಾಜಸೇವಾ ಚಟುವಟಿಕೆಗಳ ಸಹಾಯಾರ್ಥವಾಗಿ ಹಾಗೂ ಸಮಾಜ ಪರಿವರ್ತನಾ ಮುಖಂಡರಾದ ಬ್ರಹ್ಮಶ್ರೀ ನಾರಾಯಣ ಗುರುಗಳು ಮತ್ತು ವೈಚಾರಿಕ ಕ್ರಾಂತಿಯ ನಾಯಕ ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಅವರ ಜಯಂತ್ಯುತ್ಸವದ ಪ್ರಯುಕ್ತ ಸಾರ್ವಜನಿಕರಿಗಾಗಿ 7 ಜನರ ‘ಸೂಪರ್ ಸಿಕ್ಸ್’ ಕ್ರಿಕೆಟ್ ಪಂದ್ಯಾಟವನ್ನು ಮಾಲಾಡಿ ಭಜನಾ ಮಂದಿರದ ವಠಾರದಲ್ಲಿ ಅ. 11 ರಂದು ಆಯೋಜಿಸಲಾಗಿತ್ತು.​

ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ದ.ಕ.ಜಿಲ್ಲಾ ಪಂಚಾಯತ್ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಮಾಲಾಡಿಯ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಶಂಕರ್ ಜೆ. ಎಂ. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, “ಸತ್ಯ ಶೋಧಕ ತಂಡದ ಈ ಸಾಮಾಜಿಕ ಕಾಳಜಿಯ ಕಾರ್ಯಕ್ರಮ ಅತ್ಯಂತ ಮೆಚ್ಚುವಂತದ್ದು. ಉಚಿತ ಪುಸ್ತಕ ವಿತರಣೆ, ಆರೋಗ್ಯ ತುರ್ತು ನೆರವು ಮುಂತಾದ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವ ಈ ಸಂಸ್ಥೆಯು ಮುಂದಿನ ದಿನಗಳಲ್ಲಿ ಇಡೀ ಸಮಾಜಕ್ಕೆ ವಿಸ್ತಾರವಾಗಿ ಬೆಳೆಯಲಿ” ಎಂದು ಶುಭ ಹಾರೈಸಿದರು.

​ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಯಕ್ಷಗಾನ ಕಲಾವಿದೆ ಸುನೀತಾ ಕುಕ್ಕಳ ಮಾತನಾಡಿ, “ಸತ್ಯ ಶೋಧಕ ತಂಡದ ಕಾರ್ಯಗಳು ಇಂದಿನ ಸಮಾಜಕ್ಕೆ ಮಾದರಿಯಾಗಿವೆ. ವಿಶೇಷವಾಗಿ ಶಿಕ್ಷಣ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಇವರ ಕೊಡುಗೆ ಅಪಾರ. ಕ್ರೀಡೆಯ ಮೂಲಕ ನೆರವು ಸಂಗ್ರಹಿಸಿ, ಬಂದ ಹಣವನ್ನು ಸತ್ಕಾರ್ಯಕ್ಕೆ ಬಳಸುವುದು ಅತ್ಯಂತ ಶ್ಲಾಘನೀಯ” ಎಂದು ಅಭಿಪ್ರಾಯಪಟ್ಟರು.​

ವೇದಿಕೆಯಲ್ಲಿ ಮಾಲಾಡಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಉಮೇಶ್ ಎಂ., ಎಸ್‌ಎಫ್‌ಸಿ ಪಣಕಜೆಯ ಅಣ್ಣಪ್ಪ, ಸ್ಥಳೀಯ ಪ್ರಮುಖರಾದ ರಾಜೇಶ್ ಮಾಲಾಡಿ ಹಾಗೂ ಸತ್ಯ ಶೋಧಕ ವೇದಿಕೆಯ ಕಾರ್ಯದರ್ಶಿ ಗಿರೀಶ್ ಪಣಕಜೆ ಉಪಸ್ಥಿತರಿದ್ದರು.​ತಂಡದ ಅಧ್ಯಕ್ಷ ಸುಕೇಶ್ ಕೆ. ಮಾಲಾಡಿ ಕ್ರೀಡಾಕೂಟ ಆಯೋಜನೆಯ ಉದ್ದೇಶದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ, ಬಂದಂತಹ ಅಭ್ಯಾಗತರನ್ನು ಸ್ವಾಗತಿಸಿದರು. ಕುಮಾರಿ ಮಂಗಳಾ ಮಾರಿಗುಡಿ ನಾಡಗೀತೆ ಹಾಡಿದರು.

ಕುಮಾರಿ ಸುಶ್ಮೀತಾ ಮಾಲಾಡಿ ಕಾರ್ಯಕ್ರಮ ನಿರೂಪಿಸಿದರೆ, ಕಾರ್ಯದರ್ಶಿ ಗಿರೀಶ್ ಧನ್ಯವಾದ ಸಮರ್ಪಿಸಿದರು.

LEAVE A REPLY

Please enter your comment!
Please enter your name here