






ಶಿಶಿಲ: ಕಳೆದ ನಲವತ್ತು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಶಿಶಿಲ–ಬೈರಾಪುರ ಸಂಪರ್ಕ ರಸ್ತೆಯನ್ನು ಕೂಡಲೇ ಅಭಿವೃದ್ಧಿಪಡಿಸಬೇಕೆಂಬುದು ಶಿಶಿಲ, ಶಿಬಾಜೆ, ಅರಸಿನಮಕ್ಕಿ, ರೇಖ್ಯ, ಕಳೆಂಜ, ಕೊಕ್ಕಡ ಸೇರಿದಂತೆ ಈ ಭಾಗದ ಸಾವಿರಾರು ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾಗಿದೆ.
ಈ ಬೇಡಿಕೆಯತ್ತ ಸರಕಾರದ ಗಮನ ಸೆಳೆಯಲು ಹಾಗೂ ಮುಂದಿನ ಹೋರಾಟದ ರೂಪುರೇಷೆ ನಿರ್ಧರಿಸಲು ಶಿಶಿಲದಲ್ಲಿ ಸಮಾಲೋಚನಾ ಸಭೆ ನಡೆಯಿತು.ಕೆ.ಜಿ. ಗೋಖಲೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಿಶಿಲ–ಬೈರಾಪುರ ರಸ್ತೆಯ ಅವಶ್ಯಕತೆ ಹಾಗೂ ರಸ್ತೆ ಅಭಿವೃದ್ಧಿಯಿಂದ ಈ ಭಾಗದ ಜನರಿಗೆ ದೊರೆಯುವ ಅನುಕೂಲಗಳ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು.
‘ಈ ರಸ್ತೆ ಕೇವಲ ಸಂಪರ್ಕ ರಸ್ತೆಯಲ್ಲ; ಮಲೆನಾಡಿನ ಜನರ ಬದುಕಿನ ದಾರಿ’ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.ಹೋರಾಟಕ್ಕೆ ಮತ್ತಷ್ಟು ಬಲ ತುಂಬುವ ಉದ್ದೇಶದಿಂದ ನವೆಂಬರ್ 2, 2026ರಂದು ಅರಸಿನಮಕ್ಕಿಯಲ್ಲಿ ಬೃಹತ್ ಹಕ್ಕೊತ್ತಾಯ ಸಮಾವೇಶ ನಡೆಸಲು ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯಿಸಲಾಯಿತು.


ಸಮಾವೇಶದಲ್ಲಿ ಸುತ್ತಮುತ್ತಲಿನ ಎಲ್ಲ ಗ್ರಾಮಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಂಘಟಿಸಿ, ಸರಕಾರಕ್ಕೆ ಗ್ರಾಮಸ್ಥರ ಒಗ್ಗಟ್ಟನ್ನು ತೋರಿಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಶಿಶಿಲ–ಬೈರಾಪುರ ರಸ್ತೆ ಹೋರಾಟ ಸಮಿತಿಯ ಅಧ್ಯಕ್ಷ ಜೆ.ಹೆಚ್. ಹಾಲಪ್ಪ ಗೌಡ, ನಿವೃತ್ತ ಇಂಜಿನಿಯರ್ ಶಿವಪ್ರಕಾಶ್, ರಾಜ್ಯ ಜೆಡಿಎಸ್ ಕಾರ್ಯದರ್ಶಿ ನಿಡ್ವಾಳೆ ಚಂದ್ರಣ್ಣ, ಅರಸಿನಮಕ್ಕಿಯ ಮೊಯ್ದೀನ್, ಸಿ.ಎ. ಬ್ಯಾಂಕ್ ನಿರ್ದೇಶಕ ಧರ್ಮರಾಜ ಅಡ್ಕಾಡಿ, ಶಿಶಿಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಂದೀಪ್ ಎಂ.ಎಸ್., ಶಿಶಿಲೇಶ್ವರ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸೂರಜ್ ನೆಲ್ಲಿತಾಯ, ಚಾಮುಂಡೇಶ್ವರಿ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಕೆ. ರಾಮಚಂದ್ರ, ಶಿಶಿಲೇಶ್ವರ ದೇವಸ್ಥಾನ ಆಡಳಿತ ಸಮಿತಿ ಸದಸ್ಯ ಶ್ರೀಧರ್ ರಾವ್, ನಿಡ್ಲೆ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಧನಂಜಯ ಗೌಡ, ಉದ್ಯಮಿ ಕೆ. ನರಸಿಂಹ ಗೌಡ ಸೇರಿದಂತೆ ಅನೇಕ ಗಣ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ನೂತನ ಹಕ್ಕೊತ್ತಾಯ ಸಮಿತಿ ರಚನೆ: ಇದೇ ಸಂದರ್ಭದಲ್ಲಿ ಹೋರಾಟವನ್ನು ವ್ಯವಸ್ಥಿತವಾಗಿ ಮುನ್ನಡೆಸಲು ನೂತನ ಹಕ್ಕೊತ್ತಾಯ ಸಮಿತಿಯನ್ನು ರಚಿಸಲಾಯಿತು. ಸಮಿತಿಯ ಅಧ್ಯಕ್ಷರಾಗಿ ರಾಘವೇಂದ್ರ ನಾಯಕ್ ಹಾಗೂ ಕಾರ್ಯದರ್ಶಿಯಾಗಿ ಧರ್ಮರಾಜ ಅಡ್ಕಾಡಿ ಅವರನ್ನು ಆಯ್ಕೆ ಮಾಡಲಾಯಿತು.
ಶಿಶಿಲ, ಶಿಬಾಜೆ, ಹತ್ಯಡ್ಕ, ಕಳೆಂಜ, ರೇಖ್ಯ ಮತ್ತು ಕೊಕ್ಕಡ ಗ್ರಾಮಗಳಿಂದ ಸಂಚಾಲಕರನ್ನೂ ಆಯ್ಕೆ ಮಾಡಲಾಯಿತು. ಮುಂದಿನ ದಿನಗಳಲ್ಲಿ ಎಲ್ಲ ಗ್ರಾಮಗಳಲ್ಲಿ ಸಂಚರಿಸಿ ಜನಜಾಗೃತಿ ಮೂಡಿಸುವ ಮೂಲಕ ನವೆಂಬರ್ 2ರ ಸಮಾವೇಶವನ್ನು ಐತಿಹಾಸಿಕವಾಗಿ ಯಶಸ್ವಿಗೊಳಿಸಲು ಸಭೆಯಲ್ಲಿ ಕರೆ ನೀಡಲಾಯಿತು.









