ನಾವೂರು ಡಾ. ಪ್ರದೀಪ್ ಆರೋಗ್ಯ ಕ್ಲಿನಿಕ್‌ಗೆ ಬೆಂಕಿ ಪ್ರಕರಣ: ಆರೋಪಿಗಳನ್ನು ಶೀಘ್ರ ಬಂಧಿಸಲು ವಿ.ಹಿಂ.ಪ – ಬಜರಂಗದಳ ಆಗ್ರಹ

0

ಬೆಳ್ತಂಗಡಿ,: ಡಾ. ಪ್ರದೀಪ್ ಅವರ ಆರೋಗ್ಯ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಘಟನೆ ನಡೆದು 7 ದಿನಗಳು ಕಳೆದಿದ್ದರೂ, ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿರುವ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗದಿರುವುದು ಕಳವಳಕಾರಿ ಸಂಗತಿ ಎಂದು ವಿಶ್ವ ಹಿಂದೂ ಪರಿಷತ್ – ಬಜರಂಗದಳ, ಬೆಳ್ತಂಗಡಿ ಪ್ರಖಂಡ ಆಗ್ರಹಿಸಿದೆ.

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಶೀಘ್ರವಾಗಿ ಪತ್ತೆಹಚ್ಚಿ ಬಂಧಿಸಿ, ಕಾನೂನುಬದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.ಘಟನೆ ನಡೆದು ಒಂದು ವಾರ ಕಳೆದಿದ್ದರೂ ತನಿಖೆಯ ಪ್ರಗತಿ ಹಾಗೂ ಆರೋಪಿಗಳ ಬಂಧನದ ಕುರಿತು ಸ್ಪಷ್ಟತೆ ಇಲ್ಲದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಪೊಲೀಸ್ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಲಭ್ಯವಿರುವ ಸಾಕ್ಷ್ಯಾಧಾರಗಳನ್ನು ಸಮಗ್ರವಾಗಿ ಪರಿಶೀಲಿಸಿ, ನಿಷ್ಪಕ್ಷಪಾತ ಹಾಗೂ ತ್ವರಿತ ತನಿಖೆ ನಡೆಸಬೇಕು. ಈ ಕೃತ್ಯದ ಹಿಂದೆ ಇರುವವರನ್ನು ಗುರುತಿಸಿ, ತಪ್ಪಿತಸ್ಥರ ವಿರುದ್ಧ ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆ ಒತ್ತಾಯಿಸಿದೆ.

ಆರೋಗ್ಯ ಕ್ಲಿನಿಕ್‌ಗಳು ಸಾರ್ವಜನಿಕರಿಗೆ ಅಗತ್ಯವಾದ ವೈದ್ಯಕೀಯ ಸೇವೆ ಒದಗಿಸುವ ಪ್ರಮುಖ ಕೇಂದ್ರಗಳಾಗಿವೆ. ಇಂತಹ ಸ್ಥಳಗಳಿಗೆ ಬೆಂಕಿ ಹಚ್ಚುವ ಘಟನೆಗಳು ವೈದ್ಯರು, ರೋಗಿಗಳು ಹಾಗೂ ಸಾರ್ವಜನಿಕರಲ್ಲಿ ಭಯ ಮತ್ತು ಆತಂಕದ ವಾತಾವರಣ ಸೃಷ್ಟಿಸುತ್ತದೆ. ಆದ್ದರಿಂದ, ಡಾ. ಪ್ರದೀಪ್ ಅವರಿಗೂ ಅವರ ಕ್ಲಿನಿಕ್‌ಗೂ ಅಗತ್ಯ ಭದ್ರತೆ ಒದಗಿಸುವುದರ ಜೊತೆಗೆ, ಘಟನೆಯ ನೈಜ ಕಾರಣವನ್ನು ತನಿಖೆಯ ಮೂಲಕ ಬಹಿರಂಗಪಡಿಸಬೇಕು ಎಂದು ಮನವಿ ಮಾಡಿದೆ.

ಈ ಪ್ರಕರಣದ ತನಿಖೆಯನ್ನು ತ್ವರಿತಗೊಳಿಸಿ, ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಒತ್ತಾಯಿಸಿ ಪೊಲೀಸ್ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಸಂಘಟನೆ ತಿಳಿಸಿದೆ. ತನಿಖೆ ಮತ್ತು ಆರೋಪಿಗಳ ಬಂಧನದಲ್ಲಿ ಸೂಕ್ತ ಪ್ರಗತಿ ಕಂಡುಬರದಿದ್ದಲ್ಲಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಪೂರ್ವಸೂಚನೆ ನೀಡಿ, ಕಾನೂನು ಮತ್ತು ಸುವ್ಯವಸ್ಥೆಗೆ ಯಾವುದೇ ಧಕ್ಕೆಯಾಗದಂತೆ ಶಾಂತಿಯುತ ಪ್ರತಿಭಟನೆ ನಡೆಸಲಾಗುವುದು.

ದುರ್ಗಾ ವಾಹಿನಿ ಹಾಗೂ ಮಾತೃಶಕ್ತಿ ಘಟಕಗಳ ಸಹಯೋಗದಲ್ಲಿ ಬೆಳ್ತಂಗಡಿ ಪ್ರಖಂಡದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳುವ ಕುರಿತು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಂಘಟನೆ ತಿಳಿಸಿದೆ.ಸಾರ್ವಜನಿಕರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ತಕ್ಷಣ ಸ್ಪಂದಿಸಿ, ಪ್ರಕರಣದ ತನಿಖೆಯಲ್ಲಿ ಅಗತ್ಯ ಪ್ರಗತಿ ಸಾಧಿಸಬೇಕು ಹಾಗೂ ತಪ್ಪಿತಸ್ಥರನ್ನು ಕಾನೂನಿನ ಮುಂದೆ ತರಬೇಕು ಎಂದು ವಿಶ್ವ ಹಿಂದೂ ಪರಿಷತ್ – ಬಜರಂಗದಳ, ಬೆಳ್ತಂಗಡಿ ಪ್ರಖಂಡ ಆಗ್ರಹಿಸಿದೆ.ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ, ಬಿ.ಎಮ್.ಎಸ್ ರಾಜ್ಯ ಕಾರ್ಯದರ್ಶಿ ಕುಮರನಾಥ ಶೆಟ್ಟಿ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ವಿಶ್ವ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ವಿಷ್ಣು ಮರಾಠೆ, ಉಪಾಧ್ಯಕ್ಷ ವೆಂಕಟೇಶ್ ಭಟ್, ಕಾರ್ಯದರ್ಶಿ ರಮೇಶ್, ಸಂಯೋಜಕ ಪ್ರಭಾಕರ್ ಮಚ್ಚಿನ, ಸಹ ಕಾರ್ಯದರ್ಶಿ ಸತೀಶ್, ಸಹ ಸಂಯೋಜಕ ಗೌರವ್, ಜಿಲ್ಲಾ ಸಹ ಸಂಯೋಜಕ ದಿನೇಶ್ ಚಾರ್ಮಾಡಿ, ಉದ್ಯಮಿ ಪದ್ಮನಾಭ ಶೆಟ್ಟಿಗಾರ್, ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಪ್ರಮೋದ್ ದಿಡಿಪೆ, ಪ್ರಮುಖರಾದ ರಾಘವೇಂದ್ರ, ಸುಧಾಕರ್ ಶೆಟ್ಟಿ, ಕರುಣಾಕರ್ ಉಜಿರೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here