






ಬೆಳ್ತಂಗಡಿ: ನಾವೂರಿನ ಡಾ. ಪ್ರದೀಪ್ ಅವರ ಆರೋಗ್ಯ ಕ್ಲೀನಿಕ್ಗೆ ಬೆಂಕಿ ಹಚ್ಚಿರುವ ಕೃತ್ಯವನ್ನು ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಹಾಗೂ ವಾಣಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ತೀವ್ರವಾಗಿ ಖಂಡಿಸಿವೆ.
ಪೊಲೀಸ್ ಇಲಾಖೆ ನಿಷ್ಪಕ್ಷಪಾತ ತನಿಖೆ ನಡೆಸಿ, ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಆಗ್ರಹಿಸಿವೆ.ತಮ್ಮ ಸಮಾಜಮುಖಿ ಕಾರ್ಯಗಳ ಮೂಲಕ ನಾವೂರು ಗ್ರಾಮ ಹಾಗೂ ಬೆಳ್ತಂಗಡಿ ತಾಲೂಕಿಗೆ ರಾಷ್ಟ್ರಮಟ್ಟದಲ್ಲಿ ಗೌರವ ತಂದಿರುವ ಡಾ. ಪ್ರದೀಪ್ ಅವರ ಕ್ಲೀನಿಕ್ಗೆ ಹಾನಿ ಉಂಟಾಗಿರುವುದು ತೀವ್ರ ಆಘಾತ ತಂದಿದೆ. ಜನಸೇವೆಯಲ್ಲಿ ತೊಡಗಿಸಿಕೊಂಡಿರುವವರ ವಿರುದ್ಧ ಇಂತಹ ಕೃತ್ಯ ನಡೆದಿರುವುದು ಸುಸಂಸ್ಕೃತ ಸಮಾಜ ತಲೆತಗ್ಗಿಸುವ ಸಂಗತಿಯಾಗಿದೆ ಎಂದು ಸಂಘದ ಪ್ರಮುಖರು ತಿಳಿಸಿದ್ದಾರೆ.


ಮಕ್ಕಳಿಗೆ ಭಗವದ್ಗೀತೆ ಹಾಗೂ ವಿಷ್ಣು ಸಹಸ್ರನಾಮ ಪಠನ ಕಲಿಸಿ, ಸಂಸ್ಕಾರದ ಹಾದಿ ತೋರುವ ಮೂಲಕ ಧಾರ್ಮಿಕ ಮತ್ತು ಸಾಂಸ್ಕೃತಿಕ ಜಾಗೃತಿ ಮೂಡಿಸುತ್ತಿರುವ ಅವರ ನಿಸ್ವಾರ್ಥ ಸೇವೆ ಅನನ್ಯವಾಗಿದೆ. ಅವರು ಬೆಳಗಿಸಿದ ಸೇವೆ ಮತ್ತು ಸಂಸ್ಕಾರದ ದೀಪವನ್ನು ನಂದಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.ಈ ಸಂಕಷ್ಟದ ಸಂದರ್ಭದಲ್ಲಿ ಸಂಘ ಹಾಗೂ ವಾಣಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಡಾ. ಪ್ರದೀಪ್ ಅವರ ಬೆನ್ನಿಗೆ ನಿಲ್ಲಲಿವೆ. ಅವರು ಧೈರ್ಯದಿಂದ ಸಂಕಷ್ಟವನ್ನು ಎದುರಿಸಿ, ಆತ್ಮವಿಶ್ವಾಸದಿಂದ ತಮ್ಮ ಸೇವಾ ಕಾರ್ಯಗಳನ್ನು ಮುಂದುವರಿಸಬೇಕು ಎಂದು ಬೆಂಬಲ ವ್ಯಕ್ತಪಡಿಸಿದ್ದಾರೆ.
ಘಟನೆಯ ಹಿಂದೆ ಯಾರೇ ಇದ್ದರೂ ಸಮಗ್ರ ತನಿಖೆಯ ಮೂಲಕ ಸತ್ಯಾಂಶ ಹೊರಬರಬೇಕು. ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಗೌರವಾಧ್ಯಕ್ಷ ಹೆಚ್. ಪದ್ಮ ಗೌಡ, ಕಾರ್ಯದರ್ಶಿ ಗಣೇಶ್ ಗೌಡ ಹಾಗೂ ಸಂಘದ ನಿರ್ದೇಶಕರು ಮತ್ತು ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.









