ಉಜಿರೆ: ಪೋಷಕರಿಗಾಗಿ ‘ದೀಕ್ಷಾರಂಭ – 2026’ ಓರಿಯಂಟೇಶನ್ ಕಾರ್ಯಕ್ರಮ

0

ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದ ಬಿಎನ್‌ವೈಎಸ್ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರಿಗಾಗಿ ‘ದೀಕ್ಷಾರಂಭ – 2026’ ಓರಿಯಂಟೇಶನ್ ಕಾರ್ಯಕ್ರಮವನ್ನು ರತ್ನಮ್ಮ ಹೆಗ್ಗಡೆ ಸಭಾಂಗಣದಲ್ಲಿ ಆಯೋಜಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಹಿರಿಯ ಪತ್ರಕರ್ತ ಶೇಷಕೃಷ್ಣ ಭಟ್ ಭಾಗವಹಿಸಿ, ಪ್ರಥಮ ವರ್ಷದ ಬಿಎನ್‌ವೈಎಸ್ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರನ್ನುದ್ದೇಶಿಸಿ ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ಶಿಸ್ತು, ಸೇವಾ ಮನೋಭಾವ, ಜ್ಞಾನಾರ್ಜನೆ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕ್ಷೇತ್ರದಲ್ಲಿ ಉತ್ತಮ ವೃತ್ತಿಪರರಾಗಿ ಬೆಳೆಯಲು ಕಾಲೇಜಿನಲ್ಲಿ ದೊರೆಯುವ ಶೈಕ್ಷಣಿಕ ಹಾಗೂ ಪ್ರಾಯೋಗಿಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಲಹೆ ನೀಡಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶಿವಪ್ರಸಾದ್ ಶೆಟ್ಟಿ, ಉಪಪ್ರಾಂಶುಪಾಲರಾದ ಡಾ. ಸುಜಾತಾ ಕೆ.ಜೆ., ಡಯಟ್ & ನ್ಯೂಟ್ರಿಷನ್ ವಿಭಾಗದ ಡೀನ್ ಡಾ. ಬಿಂದು ಶ್ರೀಧರ್ ಹಾಗೂ ಬೇಸಿಕ್ ಸೈನ್ಸಸ್ ವಿಭಾಗದ ಡೀನ್ ಡಾ. ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.

38ನೇ ಬ್ಯಾಚ್‌ನ ಪ್ರಥಮ ವರ್ಷದ ಬಿಎನ್‌ವೈಎಸ್ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ವಿದ್ಯಾರ್ಥಿಗಳಿಗೆ ಕಾಲೇಜಿನ ಶೈಕ್ಷಣಿಕ ವಾತಾವರಣ, ಅಧ್ಯಯನದ ವಿಧಾನ, ಕಾಲೇಜಿನ ವಿವಿಧ ಚಟುವಟಿಕೆಗಳು ಹಾಗೂ ಮುಂದಿನ ವೃತ್ತಿಜೀವನದ ಕುರಿತು ಪರಿಚಯ ಮತ್ತು ಮಾರ್ಗದರ್ಶನ ನೀಡುವ ಮೂಲಕ ಕಾರ್ಯಕ್ರಮ ಅರ್ಥಪೂರ್ಣವಾಗಿ ನೆರವೇರಿತು.

LEAVE A REPLY

Please enter your comment!
Please enter your name here