ದಲಿತ ಸಂಘಟನೆಗಳ ಸಮನ್ವಯ ಸಮಿತಿ ಮತ್ತು ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಪ.ಜಾತಿ ಘಟಕದ ಜಂಟಿ ಪತ್ರಿಕಾಗೋಷ್ಠಿ ಡಿಸಿ ಮನ್ನಾ ಭೂಮಿ ಮಂಜೂರಾತಿಗೆ ಶೀಘ್ರ ಆದೇಶ ಸಚಿವರ ಭರವಸೆ

0

ಬೆಳ್ತಂಗಡಿ: ಕಳೆದ 35 ವರ್ಷಗಳಿಂದಲೂ ದ.ಕ. ಜಿಲ್ಲೆಯ ದಲಿತ ಸಂಘಟನೆಗಳು ವಿವಿಧ ತಾಲೂಕು ಕೇಂದ್ರ, ಜಿಲ್ಲಾ ಕೇಂದ್ರಗಳಲ್ಲಿ ಪರಿಶಿಷ್ಟರ ಮೀಸಲು ಭೂಮಿಯಾದ ಡಿಸಿ ಮನ್ನಾ ಭೂಮಿಯನ್ನು ಭೂರಹಿತ ಪರಿಶಿಷ್ಟರಿಗೆ ಭೂ ಮಂಜೂರಾತಿ ಮಾಡಬೇಕೆಂದು ಹೋರಾಟಗಳು, ಧರಣಿಗಳು ನಡೆಯುತ್ತಲೇ ಇತ್ತು.

ಆದರೆ ಜಿಲ್ಲಾಧಿಕಾರಿಗಳು ಮತ್ತು ಸರಕಾರಗಳ ಮೃದು ಧೋರಣೆಯಿಂದಾಗಿ ದಲಿತರ ಮೀಸಲು ಭೂಮಿ ಭೂ ಮಂಜೂರಾತಿ ಆಗದೇ ಉಳಿದಿರುವ ಕಾರಣ 2017 ನೇ ಇಸವಿಯಲ್ಲಿ ದ.ಕ. ಜಿಲ್ಲೆಯಲ್ಲಿರುವ ಎಲ್ಲಾ ದಲಿತಪರ ಸಂಘಟನೆಗಳು ಅಭಿಪ್ರಾಯಭೇದಗಳನ್ನು ಮರೆತು ಎಲ್ಲಾ ಸಂಘಟನೆಗಳ ಜೊತೆಯಾಗಿ ಹೋರಾಟ ಮಾಡಲು “ದಲಿತ ಸಂಘಟನೆಗಳ ಸಮನ್ವಯ ಸಮಿತಿ” ರಚಿಸಿಕೊಂಡು ದ.ಕ. ಜಿಲ್ಲಾ ಕೇಂದ್ರದಲ್ಲಿ “ನಮ್ಮ ಭೂಮಿ ನಮ್ಮ ಹಕ್ಕು” ಎಂಬ ಬೃಹತ್ ಭೂಹೋರಾಟ ನಡೆಸಿತು. ಈ ಹಿನ್ನಲೆಯಲ್ಲಿ ದಲಿತ ಸಮುದಾಯದ ಡಿಸಿ ಮನ್ನಾ ಸಮಸ್ಯೆಯನ್ನು ಇತ್ಯರ್ಥ ಪಡಿಸಬೇಕೆಂದು 2023 ನೇ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಡಿಸಿ ಮನ್ನಾ ಭೂಮಿ ಸಮಸ್ಯೆ ಪರಿಹಾರ ಮಾಡುತ್ತೇವೆ ಹೇಳಿಕೊಂಡಿತ್ತು ಎಂದು ಜಿಲ್ಲಾ ದಲಿತ ಸಂಘಟನೆಗಳ ಜಿಲ್ಲಾ ಸಮನ್ವಯ ಉಪಾಧ್ಯಕ್ಷ ಬಿ.ಕೆ ವಸಂತ ಹೇಳಿದರು.

ಅವರು ಅ.5 ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಎರಡುವರೆ ವರ್ಷ ಪೂರೈಕೆ ಮಾಡಿಯೂ ಡಿಸಿ ಮನ್ನಾ ಜಮೀನಿನ ಇತ್ಯರ್ಥ ಪಡಿಸದೇ ‘ಇದ್ದಾಗ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಪದಾಧಿಕಾರಿಗಳ ಮತ್ತು ಕಾಂಗ್ರೆಸ್ ಪ.ಜಾತಿ ಘಟಕದ ಪದಾಧಿಕಾರಿಗಳು ಸರಕಾರದ ಸಚಿವರಲ್ಲಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಅತೀ ಶೀಘ್ರವಾಗಿ ಡಿಸಿ ಮನ್ನಾ ಜಮೀನಿನ ಇತ್ಯರ್ಥ ಪಡಿಸುವಂತೆ ಒತ್ತಡ ಹಾಕಲಾಗಿತ್ತು. ಈ ಬಗ್ಗೆ ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟದಲ್ಲಿ ಈ ವಿಚಾರವನ್ನು ಕೈಗೆತ್ತಿಗೊಳ್ಳಲಾಗುವುದು ಎಂದು ಭರವಸೆ ಇತ್ತು.

ಆದರೆ ಇದರಲ್ಲಿ ಮಂಗಳೂರಿನ ಸಚಿವ ಸಂಪುಟದಲ್ಲಿ ಡಿಸಿ ಮನ್ನಾ ಇತ್ಯರ್ಥ ಆಗದೇ ಬಾಕಿ ಉಳಿದುಕೊಂಡಿತ್ತು. ಈ ಬಗ್ಗೆ ನಾವುಗಳು ಮಾಜಿ ಸಚಿವರಾದ ಬಿ ರಮಾನಾಥ ರೈಯವರಲ್ಲಿ ಮತ್ತು ಜಿಲ್ಲಾ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷರಾದ ಕೆ ಹರೀಶ್ ಕುಮಾರ್ ಹಾಗೂ ರಾಜ್ಯ ಕಾಂಗ್ರೆಸ್ ಕಾರ್ಯಾಧ್ಯಕ್ಷರಾದ ಮಂಜುನಾಥ ಭಂಡಾರಿಯವರಲ್ಲಿ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್‌ರವರಲ್ಲಿ ನಮ್ಮ ಡಿಸಿ ಮನ್ನಾ ಜಮೀನು ಇತ್ಯರ್ಥ ಆಗದೇ ಇರುವ ಬಗ್ಗೆ ಮನವರಿಕೆ ಮಾಡಿದಾಗ ಈ ಎಲ್ಲಾ ನಾಯಕರು ಕರ್ನಾಟಕ ಸರಕಾರದ ಮುಖ್ಯಮಂತ್ರಿಯವರಾದ ಡಿ ಕೆ ಶಿವಕುಮಾರ್ ರವರಿಗೆ ಡಿಸಿ ಮನ್ನಾ ಜಮೀನಿನ ವಿಚಾರವನ್ನು ಇತ್ಯರ್ಥ ಪಡಿಸುವಂತೆ ವಿನಂತಿಸಿಕೊಂಡಿದ್ದರು. ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿಗಳು ಈ ಬಗ್ಗೆ ದಲಿತ ಸಮುದಾಯದ ಮುಖಂಡರ ಸಮಕ್ಷಮ ಚರ್ಚಿಸಿ ಶೀಘ್ರವಾಗಿ ಪರಿಹಾರಮಾಡುವಂತೆ ಕಂದಾಯ ಸಚಿವರಾದ ಮತ್ತು ಉಪಮುಖ್ಯಮಂತ್ರಿಗಳಾದ ಡಾ|| ಜಿ ಪರಮೇಶ್ವ‌ರರವರಿಗೆ ಪತ್ರ ಬರೆದಿದ್ದರು. ಇದರ ಪರಿಣಾಮವಾಗಿ ದಿನಾಂಕ: 01.10.2026 ರಂದು ದ.ಕ. ಜಿಲ್ಲೆಯ ಪರಿಶಿಷ್ಟ ಸಮುದಾಯದ ಮುಖಂಡರಾದ ನಮ್ಮನ್ನು ವಿಧಾನಸೌಧದ ಕಛೇರಿಗೆ ನಮ್ಮನ್ನು ಕರೆದು. ಡಿಸಿ ಮನ್ನಾ ಜಮೀನಿನ ಎಲ್ಲಾ ವಿವರಗಳನ್ನು ಪಡೆದು ನಮ್ಮ ಜೊತೆಗೆ ಕಂದಾಯ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳನ್ನು ಕರೆದು ಸಭೆ ನಡೆಸಿದ್ದರು.

ಡಿಸಿ ಮನ್ನಾ ಭೂಮಿ ಮಂಜೂರಾತಿಗೆ ಕೆಲವು ಕಾನೂನು ತೊಡಕು ಇರುವುದನ್ನು ಅರಿತ ಸಚಿವರು ಬೆಂಗಳೂರಿನ ವಿಧಾನಸೌಧದಲ್ಲಿ ನಡೆಯುವ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಡಿಸಿ ಮನ್ನಾ ಜಮೀನು ಮಂಜೂರಾತಿಯ ಕಾನೂನು ತೊಡಕು ನಿವಾರಿಸಿ ಸಚಿವ ಸಂಪುಟದ ಅನುಮೋದನೆ ಪಡೆದು ಡಿಸಿ ಮನ್ನಾ ಭೂ ಮಂಜೂರಾತಿಗೆ ಆದೇಶ ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಅಲ್ಲದೇ ಮಂಗಳೂರಿಗೆ ತಾನೇ ಖುದ್ದಾಗಿ ಬಂದು ಭೂರಹಿತ ಪರಿಶಿಷ್ಟರಿಗೆ ಭೂ ಮಂಜೂರಾತಿಯ ಹಕ್ಕುಪತ್ರವನ್ನು ವಿತರಣೆ ಮಾಡುತ್ತೇನೆ ಎಂದು ಭರವಸೆಯನ್ನೂ ನೀಡಿದ್ದಾರೆ.ಈ ನಡುವೆ ದಿನಾಂಕ: 03.10.2026 ರಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಫರೀದ್‌ರವರು ಜಿಲ್ಲಾ ಕಾಂಗ್ರೆಸ್‌ನ ಪ.ಜಾತಿ ಘಟಕದ ಸಭೆ ಕರೆದು ಡಿಸಿ ಮನ್ನಾ ಜಮೀನಿನ ತಾಂತ್ರಿಕ ಸಮಸ್ಯೆ ಇರುವುದರಿಂದ ಮಂಗಳೂರು ಸಂಪುಟ ಸಭೆಯಲ್ಲಿ ಡಿಸಿ ಮನ್ನಾ ಇತ್ಯರ್ಥ ಆಗಿಲ್ಲ. ಕಂದಾಯ ಸಚಿವರಲ್ಲಿ ಮುಖ್ಯಮಂತ್ರಿಯವರಲ್ಲಿ ಈ ಬಗ್ಗೆ ಚರ್ಚೆ ನಡೆಸಿದ್ದೇನೆ, ಮುಂದಿನ ಸಚಿವ ಸಂಪುಟದಲ್ಲಿ ಡಿಸಿ ಮನ್ನಾ ಭೂ ಮಂಜೂರಾತಿಗೆ ನಾನು ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ.ಸರಕಾರದ ಕಂದಾಯ ಸಚಿವರು ಡಿಸಿ ಮನ್ನಾ ಭೂಮಿಯ ಭೂ ಮಂಜೂರಾತಿಗೆ ಆದೇಶ ನೀಡುವುದಾಗಿ ಭರವಸೆ ನೀಡಲು ಮೂಲ ಕಾರಣಕರ್ತರಾದ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷರಾದ ಮಂಜುನಾಥ ಭಂಡಾರಿಯವರಿಗೆ ಕಾಂಗ್ರೆಸ್ ಪಕ್ಷದ ಮಾಜಿ ಜಿಲ್ಲಾಧ್ಯಕ್ಷರು ಹಾಗೂ ಮೆಸ್ಕಾಂ ಅಧ್ಯಕ್ಷರಾದ ಕೆ ಹರೀಶ್ ಕುಮಾರ್ ಹಾಗೂ ಮಾಜಿ ಸಚಿವರಾದ ಬಿ ರಮಾನಾಥ ರೈಯವರಿಗೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್‌ರವರಿಗೆ, ಉಸ್ತುವಾರಿ ಸಚಿವರಾದ ಯು.ಟಿ. ಖಾದರ್‌ರವರಿಗೂ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಮತ್ತು ಗ್ರಾಮೀಣ ಕಾಂಗ್ರೆಸ್ ಎಸ್ಸಿ ಘಟಕದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ ಎಂದು ಬಿ.ಕೆ ವಸಂತ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಗ್ರಾಮೀಣ ಎಸ್.ಸಿ ಘಟಕದ ಅಧ್ಯಕ್ಷ ಕೆ.ನೇಮಿರಾಜ, ಜಿಲ್ಲಾ ಎಸ್.ಸಿ ಘಟಕದ ಕಾರ್ಯದರ್ಶಿ ಪ್ರಭಾಕರ ಶಾಂತಿಕೋಡಿ, ಕೆ.ಡಿ.ಪಿ ಸದಸ್ಯ ಬೇಬಿ ಸುವರ್ಣ, ಕೆ.ಪಿ.ಸಿ.ಸಿ ಜಿಲ್ಲಾ ಮಾಧ್ಯಮ ವಕ್ತಾರ ಜಗನ್ನಾಥ ಲಾಯಿಲ, ಸಮನ್ವಯ ಸಮಿತಿ ಸದಸ್ಯ ರಮೇಶ್ ಆರ್, ಅಕ್ರಮ-ಸಕ್ರಮ ನಾಮ ನಿರ್ದೇಶಿತ ಸದಸ್ಯ ಶ್ರೀಧರ್ ಕಳೆಂಜ, ಎಸ್.ಸಿ ಘಟಕದ ಸದಸ್ಯ ನಾರಾಯಣ ಪುದುವೆಟ್ಟು, ಮಾಧವ ಶಿಶಿಲ, ದ.ಕ ಜಿಲ್ಲಾ ದಲಿತ ಸಂಘಟನೆ ಸಂಚಾಲಕ ಚೆನ್ನಕೇಶವ, ಆರೋಗ್ಯ ರಕ್ಷಾ ಸಮಿತಿಯ ನಾಮ ನಿರ್ದೇಶಿತ ಸದಸ್ಯ ವೆಂಕಣ್ಣ ಕೊಯ್ಯೂರು, ಕಾಂಗ್ರೆಸ್ ಎಸ್.ಸಿ ಘಟಕದ ಸದಸ್ಯ ಶ್ರೀನಿವಾಸ್ ಉಜಿರೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here