






ಶಿಶಿಲ: ಮಂತ್ರಾಲಯಕ್ಕೆ ತೆರಳುತ್ತಿದ್ದವರ ಕಾರಿಗೆ ವಿರುದ್ಧ ದಿಕ್ಕಿನಿಂದ ಬಂದ ಕಾರು ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದ ಶಿಶಿಲ ಗ್ರಾಮದ ಮಂತಾಜೆ ನಿವಾಸಿ ದೀಪೇಶ್ (27) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಈ ನಡುವೆ, ಅಪಘಾತಕ್ಕೆ ಕಾರಣನಾದ ಕಾರಿನ ಚಾಲಕ ಮದ್ಯಪಾನ ಮಾಡಿದ್ದ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದರೂ ಎಫ್ಐಆರ್ನಲ್ಲಿ ದಾಖಲಿಸದೆ ಪ್ರಕರಣವನ್ನು ದಾರಿ ತಪ್ಪಿಸಲು ಯತ್ನಿಸಲಾಗಿದೆ ಎಂದು ಗಾಯಾಳುಗಳು ಆರೋಪಿಸಿದ್ದಾರೆ.
ಮಂತ್ರಾಲಯಕ್ಕೆ ಹೊರಟಿದ್ದ ಸ್ನೇಹಿತರುಬಣಕಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರು ಹಾಗೂ ಎಫ್ಐಆರ್ನ ಪ್ರಕಾರ, ಸೆ.29ರಂದು ನಸುಕಿನ ಜಾವ ಸುಮಾರು 1.30ಕ್ಕೆ ಶಿಶಿಲದ ರಘು (32), ಶಿಶಿಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸುಧೀನ್, ಸತೀಶ, ದೀಪೇಶ್, ದೀಪಕ್ ಅಲಿಯಾಸ್ ತಿರುಮಲೇಶ್ವರ ಹಾಗೂ ಶೋಭಿತ್ ಅಲಿಯಾಸ್ ನಾಗರಾಜ್ ಅವರು ಮಂತ್ರಾಲಯಕ್ಕೆ ತೆರಳಲು ಶಿಶಿಲದಿಂದ ಹೊರಟಿದ್ದರು.ಸ್ನೇಹಿತ ವಸಂತಕುಮಾರ್ ಅವರ ಮಾಲೀಕತ್ವದ ಕೆಎ–03 ಎಂಪಿ–6754 ನೋಂದಣಿಯ ಇನೋವಾ ಕಾರನ್ನು ರಘು ಚಲಾಯಿಸುತ್ತಿದ್ದರು.
ಅವರ ಪಕ್ಕದ ಆಸನದಲ್ಲಿ ದೀಪಕ್ ಕುಳಿತಿದ್ದು, ಉಳಿದವರು ಹಿಂಬದಿಯ ಆಸನಗಳಲ್ಲಿದ್ದರು. ಉಜಿರೆ–ಚಾರ್ಮಾಡಿ ಮಾರ್ಗವಾಗಿ ಬಣಕಲ್ ದಾಟಿ ಮೂಡಿಗೆರೆ ಕಡೆಗೆ ಪ್ರಯಾಣಿಸುತ್ತಿದ್ದರು.ನಸುಕಿನ ಜಾವ ಸುಮಾರು 3.40ಕ್ಕೆ ಸಬ್ಬೇನಹಳ್ಳಿ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿ 73ರಲ್ಲಿ ಮೂಡಿಗೆರೆ ಕಡೆಯಿಂದ ಬಂದ ಕಾರು ಇವರ ಕಾರಿಗೆ ಡಿಕ್ಕಿ ಹೊಡೆದಿದೆ. ಎದುರಿನಿಂದ ಬಂದ ಕಾರಿನ ಚಾಲಕ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ತಪ್ಪು ಬದಿಯಲ್ಲಿ ವಾಹನ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎಂದು ರಘು ದೂರಿನಲ್ಲಿ ತಿಳಿಸಿದ್ದಾರೆ.


ಅಪಘಾತದ ಬಳಿಕ ರಘು ಹಾಗೂ ದೀಪಕ್ ಕಾರಿನಿಂದ ಇಳಿದು ನೋಡಿದಾಗ, ಹಿಂಬದಿಯಲ್ಲಿ ಕುಳಿತಿದ್ದ ದೀಪೇಶ್ ಅವರ ಕುತ್ತಿಗೆಗೆ ಹಾಗೂ ಸುಧೀನ್ ಅವರ ಎಡಭುಜಕ್ಕೆ ಪೆಟ್ಟಾಗಿರುವುದು ಕಂಡುಬಂದಿತ್ತು. ರಘು, ಸತೀಶ, ನಾಗರಾಜ್ ಹಾಗೂ ದೀಪಕ್ ಅವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದವು. ಗಾಯಾಳುಗಳನ್ನು ಕಾರಿನಿಂದ ಹೊರತೆಗೆದು ಉಪಚರಿಸಲಾಯಿತು ಎಂದು ದೂರಿನಲ್ಲಿ ವಿವರಿಸಲಾಗಿದೆ.ಡಿಕ್ಕಿ ಹೊಡೆದ ವಾಹನವು ಕೆಎ–51 ಎಂಪಿ–9399 ನೋಂದಣಿಯ ಫೋರ್ಡ್ ಎಂಡೆವರ್ ಕಾರಾಗಿದ್ದು, ಅದರ ಚಾಲಕ ಆಲ್ದೂರು ನಿವಾಸಿ, ಸುಂದರೇಶ್ ಅವರ ಪುತ್ರ ಅಮೋಘ್ ಡಿ.ಎಸ್. ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬಣಕಲ್ನಿಂದ ಉಜಿರೆ, ಬಳಿಕ ಮಂಗಳೂರಿಗೆ ಚಿಕಿತ್ಸೆಗಾಗಿ ಸ್ಥಳಾಂತರಅಪಘಾತದ ಬಳಿಕ ದೀಪಕ್ ಅವರು ಆಂಬುಲೆನ್ಸ್ನಲ್ಲಿ ದೀಪೇಶ್ ಹಾಗೂ ಸುಧೀನ್ ಅವರನ್ನು ಬಣಕಲ್ನ ಕೃಷ್ಣ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಪಘಾತಕ್ಕೀಡಾದ ವಾಹನಗಳನ್ನು ಠಾಣೆಗೆ ಕೊಂಡೊಯ್ದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ಬಣಕಲ್ ಆಸ್ಪತ್ರೆಯ ವೈದ್ಯರ ಸಲಹೆಯಂತೆ ದೀಪೇಶ್ ಹಾಗೂ ಸುಧೀನ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಂಬುಲೆನ್ಸ್ನಲ್ಲಿ ಉಜಿರೆಯ ಎಸ್ಡಿಎಂ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಸುಧೀನ್ ಅವರನ್ನು ಒಳರೋಗಿಯಾಗಿ ದಾಖಲಿಸಿಕೊಳ್ಳಲಾಗಿತ್ತು. ದೀಪೇಶ್ ಅವರಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದುದರಿಂದ ವೈದ್ಯರ ಸಲಹೆಯಂತೆ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದೀಪೇಶ್ ಮೃತಪಟ್ಟಿದ್ದಾರೆ.ಮೃತರು ತಾಯಿ ಕಮಲ, ಸಹೋದರರಾದ ದೀಪಕ್, ದೀಕ್ಷಿತ್ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.ಅ.1ರಂದು ಪ್ರಕರಣ ದಾಖಲುಗಾಯಾಳುಗಳ ಚಿಕಿತ್ಸೆಯ ಕಾರಣದಿಂದ ಆಸ್ಪತ್ರೆಯಲ್ಲಿದ್ದುದರಿಂದ ದೂರು ನೀಡಲು ವಿಳಂಬವಾಗಿದೆ ಎಂದು ರಘು ದೂರಿನಲ್ಲಿ ತಿಳಿಸಿದ್ದಾರೆ. ಅವರ ಲಿಖಿತ ದೂರಿನ ಮೇರೆಗೆ ಅ.1ರಂದು ಸಂಜೆ 5ಕ್ಕೆ ಬಣಕಲ್ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 54/2026ರಂತೆ ಭಾರತೀಯ ನ್ಯಾಯ ಸಂಹಿತೆಯ ಕಲಂ 281 ಹಾಗೂ 125(ಎ) ಅಡಿ ಪ್ರಕರಣ ದಾಖಲಿಸಲಾಗಿದೆ.
ಒದಗಿಸಲಾದ ಎಫ್ಐಆರ್ ಪ್ರತಿಯಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಕುರಿತ ಉಲ್ಲೇಖವಿಲ್ಲ.ಮದ್ಯಪಾನದ ವಿಚಾರ ತಿಳಿಸಿದ್ದರೂ ದಾಖಲಿಸಿಲ್ಲವೆಂದು ಆರೋಪಅಪಘಾತಕ್ಕೆ ಕಾರಣನಾದ ಕಾರಿನ ಚಾಲಕ ಅಮೋಘ್ ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದ ಬಗ್ಗೆ ಬಣಕಲ್ ಠಾಣೆಯ ಸಬ್ಇನ್ಸ್ಪೆಕ್ಟರ್ ದಿಲೀಪ್ ಅವರಿಗೆ ತಿಳಿಸಿದ್ದೆವು ಎಂದು ಗಾಯಾಳುಗಳು ಹೇಳಿದ್ದಾರೆ. ಚಾಲಕನನ್ನು ವೈದ್ಯಕೀಯ ಪರೀಕ್ಷೆಗೂ ಒಳಪಡಿಸಲಾಗಿತ್ತು. ಆದರೂ ಮದ್ಯಪಾನ ಮಾಡಿ ವಾಹನ ಚಲಾಯಿಸಿದ ವಿಚಾರವನ್ನು ಎಫ್ಐಆರ್ನಲ್ಲಿ ಸೇರಿಸಿಲ್ಲ ಎಂಬುದು ಅವರ ಆರೋಪವಾಗಿದೆ.ಈ ಕುರಿತು ಪ್ರಶ್ನಿಸಿದಾಗ ಸಬ್ಇನ್ಸ್ಪೆಕ್ಟರ್ ದಿಲೀಪ್ ಅವರು ತಮ್ಮೊಂದಿಗೆ ದುರ್ವರ್ತನೆ ತೋರಿದ್ದಾರೆ ಎಂದು ಗಾಯಾಳುಗಳು ಆರೋಪಿಸಿದ್ದಾರೆ. “ನಾನು ಆ ತರ ಸೇರಿಸುವುದಿಲ್ಲ, ನೀವು ಏನು ಮಾಡುತ್ತೀರೋ ಮಾಡಿ” ಎಂದು ಹೇಳಿ ಬೆದರಿಸುವ ರೀತಿಯಲ್ಲಿ ವರ್ತಿಸಿದರು ಎಂದು ಅವರು ದೂರಿದ್ದಾರೆ.ಹರೀಶ್ ಪೂಂಜಾ, ಸಿ.ಟಿ. ರವಿ ಕೋಟಾ ಶ್ರೀನಿವಾಸ್ ಪೂಜಾರಿ ಗಮನಕ್ಕೂ ತಂದಿದ್ದಾಗಿ ಹೇಳಿಕೆಈ ವಿಚಾರವನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹಾಗೂ ಸಿ.ಟಿ. ರವಿ ಮತ್ತು ಕೋಟಾ ಅವರ ಗಮನಕ್ಕೂ ತರಲಾಗಿತ್ತು ಎಂದು ಗಾಯಾಳುಗಳು ತಿಳಿಸಿದ್ದಾರೆ. ಮದ್ಯಪಾನ ಮಾಡಿ ವಾಹನ ಚಲಾಯಿಸಿರುವ ಆರೋಪವಿದ್ದರೂ ಆ ವಿಚಾರವನ್ನು ಎಫ್ಐಆರ್ನಲ್ಲಿ ಏಕೆ ಸೇರಿಸಿಲ್ಲ ಎಂದು ಇವರಿಬ್ಬರು ಪೊಲೀಸ್ ಅಧಿಕಾರಿಯನ್ನು ಪ್ರಶ್ನಿಸಿದ್ದರು ಎಂಬುದು ಗಾಯಾಳುಗಳ ಹೇಳಿಕೆಯಾಗಿದೆ.ಅವರ ಬಳಿ ಸಂಬಂಧಿತ ವಿಚಾರವನ್ನು ಸೇರಿಸುವುದಾಗಿ ತಿಳಿಸಿದ್ದ ಸಬ್ಇನ್ಸ್ಪೆಕ್ಟರ್ ಬಳಿಕ ಅದನ್ನು ಸೇರಿಸಿಲ್ಲ. ಈ ಮೂಲಕ ಪ್ರಕರಣವನ್ನು ದಾರಿ ತಪ್ಪಿಸುವ ಯತ್ನ ನಡೆಸಿದ್ದಾರೆ ಎಂದು ಗಾಯಾಳುಗಳು ಆರೋಪಿಸಿದ್ದಾರೆ.ಮೂಡಿಗೆರೆ ಶಾಸಕಿಯ ಸ್ಪಂದನೆ ಬಗ್ಗೆಯೂ ಅಸಮಾಧಾನಈ ನಡುವೆ ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದಾಗಲೂ ಸಮರ್ಪಕ ಸ್ಪಂದನೆ ಸಿಗಲಿಲ್ಲ ಎಂದು ಗಾಯಾಳುಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮನ್ನು ಅವರ ಪಕ್ಷದವರಲ್ಲ ಎಂಬಂತೆ ಪರಿಗಣಿಸಿ ವರ್ತಿಸಿದರು ಎಂದು ಗಾಯಾಳುಗಳು ‘ಸುದ್ದಿ ನ್ಯೂಸ್’ಗೆ ತಿಳಿಸಿದ್ದಾರೆ.









