






ಬಂದಾರು: ‘ಸಿದ್ದಿವಿನಾಯಕ’ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ವಾರ್ಷಿಕ ಮಹಾಸಭೆಯು ಅ.1ರಂದು ಒಕ್ಕೂಟದ ಅಧ್ಯಕ್ಷೆ ಸುಚಿತ್ರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಪಂಚಾಯಿತಿ ಆಡಳಿತಾಧಿಕಾರಿ ಡಾ. ಸಹನಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಿರ್ಮಲ್ ಕುಮಾರ್, ಒಕ್ಕೂಟದ ಅಧ್ಯಕ್ಷೆ ಸುಚಿತ್ರ, ಬೆಳ್ತಂಗಡಿ ತಾಲೂಕು ಪಂಚಾಯಿತಿ ವಲಯ ಮೇಲ್ವಿಚಾರಕಿ ವೀಣಾಶ್ರೀ ಹಾಗೂ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಪ್ರತಿಮಾ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಪ್ರತಿಮಾ ಸಂಜೀವಿನಿಯ ಧ್ಯೇಯೋದ್ದೇಶಗಳ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು. ಪಂಚಾಯಿತಿ ಆಡಳಿತಾಧಿಕಾರಿ ಡಾ. ಸಹನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಿರ್ಮಲ್ ಕುಮಾರ್ ಮಹಿಳಾ ಸಬಲೀಕರಣದ ಕುರಿತು ಮಾತನಾಡಿದರು.


ಎಂಬಿಕೆ ಶ್ವೇತಾ ಒಕ್ಕೂಟದ ವಾರ್ಷಿಕ ವರದಿ ಮಂಡಿಸಿದ್ದು, ಸಭೆಯು ಅನುಮೋದಿಸಿತು. ವಲಯ ಮೇಲ್ವಿಚಾರಕಿ ವೀಣಾಶ್ರೀ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಅಧಿಕಾರ ಹಸ್ತಾಂತರ ಪ್ರಕ್ರಿಯೆ ನಡೆಸಿಕೊಟ್ಟರು. ಪರಿಶಿಷ್ಟ ವರ್ಗದ ಸದಸ್ಯರನ್ನು ಒಳಗೊಂಡ ಶ್ರೀನಿಧಿ ಸಂಘಕ್ಕೆ ಸರಕಾರದಿಂದ ನೀಡಲಾದ ₹20 ಸಾವಿರ ನೆರವನ್ನು ಹಸ್ತಾಂತರಿಸಲಾಯಿತು. ಆರೋಗ್ಯ ಅಧಿಕಾರಿ ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಹಾಗೂ ವಿವಿಧ ರೋಗಗಳ ಕುರಿತು ಮಾಹಿತಿ ನೀಡಿದರು.
ಪುಷ್ಪಗುಚ್ಛ ಸ್ಪರ್ಧೆ, ‘ಈ ದಿನದ ಲಕ್ಕಿ ಸ್ಟಾರ್’ ಹಾಗೂ ವಾರ್ಡ್ ಮಟ್ಟದ ಅತ್ಯುತ್ತಮ ಸಂಘದ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನಿರ್ಗಮಿತ ಸದಸ್ಯರು, ಸಂಘದ ಸಿಬ್ಬಂದಿ ಹಾಗೂ ಅತಿಥಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಘನತ್ಯಾಜ್ಯ ನಿರ್ವಹಣಾ ಘಟಕದ ವಾಹನ ಚಾಲಕಿ ಗೀತಾ ಹಾಗೂ ಸಹಾಯಕಿ ಸರೋಜಿನಿ ಅವರ ಸೇವೆಯನ್ನು ಮೆಚ್ಚಿ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಪ್ರತಿಮಾ ಸ್ಮರಣಿಕೆ ನೀಡಿ ಅಭಿನಂದಿಸಿದರು.ಅಧ್ಯಕ್ಷೆ ಸುಚಿತ್ರ ಮಾತನಾಡಿ, ಹಿಂದಿನ ಸಮಿತಿ ಹಾಕಿಕೊಟ್ಟ ಉತ್ತಮ ಅಡಿಪಾಯ, ಸಂಘದ ಸದಸ್ಯರ ಸಕಾರಾತ್ಮಕ ಸ್ಪಂದನೆ ಹಾಗೂ ಸಂಜೀವಿನಿ ಸಿಬ್ಬಂದಿಯ ಕಾರ್ಯವೈಖರಿಯಿಂದ ಒಕ್ಕೂಟ ಈ ಮಟ್ಟದ ಪ್ರಗತಿ ಸಾಧಿಸಲು ಸಾಧ್ಯವಾಗಿದೆ ಎಂದರು.
ಎಂಬಿಕೆ ಶ್ವೇತಾ ಹಾಗೂ ಕೃಷಿ ಸಖಿ ರಶ್ಮಿತಾ ಪ್ರಾರ್ಥಿಸಿದರು. ಸದಸ್ಯರು ಸಂಜೀವಿನಿ ಧ್ಯೇಯಗೀತೆ ಹಾಡಿದರು. ಎಲ್‌ಸಿಆರ್‌ಪಿ ಪವಿತ್ರ ಸ್ವಾಗತಿಸಿ, ಎಲ್‌ಸಿಆರ್‌ಪಿ ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು. ಸಂಜೀವಿನಿ ಸಿಬ್ಬಂದಿ ಸಹಕರಿಸಿದರು. ಪಶು ಸಖಿ ಶಿಲ್ಪಾ ವಂದಿಸಿದರು.









