






ಬೆಳ್ತಂಗಡಿ: ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಸಂದರ್ಭದಲ್ಲಿ, ನಿರ್ದಿಷ್ಟವಾಗಿ ಮುಸ್ಲಿಂ ಮತದಾರರನ್ನು ಗುರಿಯಾಗಿಸಿಕೊಂಡು ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಮಾಡಲು ಆಕ್ಷೇಪಣೆ ಸಲ್ಲಿಸಲಾಗುತ್ತಿದೆ.
ಇಂತಹ ಪಟ್ಟಭದ್ರ ಹಿತಾಸಕ್ತಿಗಳು ಹಾಗೂ ಖಾಸಗಿ ವ್ಯಕ್ತಿಗಳ ವಿರುದ್ಧ ಚುನಾವಣಾ ಆಯೋಗವು ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬೆಳ್ತಂಗಡಿ ಬ್ಲಾಕ್ ಕಾಂಗ್ರೇಸ್ ಘಟಕ ತೀವ್ರವಾಗಿ ಒತ್ತಾಯಿಸಿದೆ.ಆಗಸ್ಟ್ 20ರಿಂದ ಸೆಪ್ಟೆಂಬರ್ 23ರ ನಡುವೆ ನಡೆದ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ, ಹೆಸರುಗಳನ್ನು ಕೈಬಿಡುವಂತೆ ಕೋರಿ ಸಲ್ಲಿಕೆಯಾದ ಒಟ್ಟು ಆಕ್ಷೇಪಣೆಗಳಲ್ಲಿ ಶೇಕಡಾ 99.26ರಷ್ಟನ್ನು ಬಿಜೆಪಿ ಪಕ್ಷದ ಶಕ್ತಿ ಕೇಂದ್ರದ ಪದಾಧಿಕಾರಿಗಳು ಹಾಗೂ ಅವರ ಬೆಂಬಲಿತ ಖಾಸಗಿ ವ್ಯಕ್ತಿಗಳೇ ಸಲ್ಲಿಸಿರುವುದು ಅಧಿಕೃತ ಅಂಕಿಅಂಶಗಳಿಂದ ತಿಳಿದುಬಂದಿದೆ.


ಅದರಲ್ಲಿಯೂ ಬೆಳ್ತಂಗಡಿ ತಾಲೂಕಿನಲ್ಲಿ ಸಲ್ಲಿಕೆಯಾಗಿರುವ ಆಕ್ಷೇಪಣೆಗಳ ಪೈಕಿ ಶೇಕಡಾ 90ರಷ್ಟು ಆಕ್ಷೇಪಣೆಗಳು ಕೇವಲ ಮುಸ್ಲಿಂ ಮತದಾರರನ್ನೇ ಗುರಿಯಾಗಿಸಿ ಸಲ್ಲಿಸಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ.ಅರ್ಹ ಮತದಾರರನ್ನು ಮತದಾನದ ಹಕ್ಕಿನಿಂದ ವಂಚಿಸುವ ಉದ್ದೇಶಪೂರ್ವಕ ಸಂಚು ಇದರ ಹಿಂದೆ ಕಾಣಿಸುತ್ತಿದ್ದು, ಚುನಾವಣಾ ಆಯೋಗವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು.
ಯಾವುದೇ ಅರ್ಹ ನಾಗರಿಕನ ಹೆಸರು ಅನ್ಯಾಯವಾಗಿ ಪಟ್ಟಿಯಿಂದ ಕೈಬಿಡಲ್ಪಡದಂತೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಹಾಗೂ ಸುಳ್ಳು ಆಕ್ಷೇಪಣೆ ಸಲ್ಲಿಸಿರುವ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಬೆಳ್ತಂಗಡಿ ಬ್ಲಾಕ್ ಕಾಂಗ್ರೇಸ್ ಸಮಿತಿ ಆಗ್ರಹಿಸಿದೆ. ಅಧ್ಯಕ್ಷರು / ಪದಾಧಿಕಾರಿಗಳುಬೆಳ್ತಂಗಡಿ ಬ್ಲಾಕ್ ಕಾಂಗ್ರೇಸ್ ಘಟಕ









