






ಹಲವು ವರ್ಷಗಳಿಂದ ಗ್ರಾಮಸ್ಥರ ಬೇಡಿಕೆಯಾಗಿರುವ ಶಿಶಿಲ-ಬೈರಾಪುರ ಅಂತರ ಜಿಲ್ಲಾ ಗ್ರಾಮೀಣ ರಸ್ತೆಯನ್ನು ಹಸಿರು ಮಾದರಿ ರಸ್ತೆಯಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮಂಗಳವಾರ ಸ್ಥಳ ಪರಿಶೀಲನೆ ನಡೆಯಿತು.ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ (ಪಿಎಂಜಿಎಸ್‌ವೈ) ಯೋಜನಾ ವಿಭಾಗ, ಚಿಕ್ಕಮಗಳೂರು ವತಿಯಿಂದ ನಡೆದ ಪರಿಶೀಲನೆಯಲ್ಲಿ ಕಾರ್ಯನಿರ್ವಾಹಕ ಅಭಿಯಂತರ ತರುಣ್ ಶಶಿ ಹಾಗೂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಹರೀಶ್ ಭಾಗವಹಿಸಿದ್ದರು.
ಅಧಿಕಾರಿಗಳು ರಸ್ತೆ ದುಸ್ಥಿತಿ, ಮಳೆಗಾಲದಲ್ಲಿ ಉಂಟಾಗಿರುವ ಮಣ್ಣಿನ ಸವೆತ, ಬದಿ ಚರಂಡಿ ಕೊರತೆ ಹಾಗೂ ಗುಡ್ಡ ಕುಸಿತವಾಗಿರುವ ಪ್ರದೇಶಗಳನ್ನು ಪರಿಶೀಲಿಸಿದರು.ಶಿಶಿಲ-ಬೈರಾಪುರ ರಸ್ತೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ-ಶಿಶಿಲ ಭಾಗವನ್ನು ಸಂಪರ್ಕಿಸುವ ಪ್ರಮುಖ ಅಂತರ ಜಿಲ್ಲಾ ಸಂಪರ್ಕ ರಸ್ತೆಯಾಗಿದೆ. ಮಳೆಗಾಲದಲ್ಲಿ ರಸ್ತೆ ಸಂಚಾರಕ್ಕೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ, ರಸ್ತೆಯನ್ನು ಎಲ್ಲ ಹವಾಮಾನಕ್ಕೂ ಸೂಕ್ತವಾಗಿರುವ ಆಲ್ ವೆದರ್ ರಸ್ತೆಯಾಗಿ ಅಭಿವೃದ್ಧಿಪಡಿಸುವಂತೆ ಗ್ರಾಮಸ್ಥರು ಅಧಿಕಾರಿಗಳಿಗೆ ಮನವಿ ಮಾಡಿದರು.
ಶೂನ್ಯ ಇಂಗಾಲ ಹೊರಸೂಸುವಿಕೆ ಹಸಿರು ರಸ್ತೆ ಪ್ರಸ್ತಾವನೆನಿವೃತ್ತ ಅಭಿಯಂತರ ಹೆಚ್.ಎಂ. ಶಿವಪ್ರಕಾಶ್ ಅವರು ಪರಿಶೀಲನೆ ವೇಳೆ, ಶಿಶಿಲ-ಬೈರಾಪುರ ರಸ್ತೆಯನ್ನು ರಾಜ್ಯದಲ್ಲೇ ಮಾದರಿಯಾಗುವ ರೀತಿಯಲ್ಲಿ ಶೂನ್ಯ ಇಂಗಾಲ ಹೊರಸೂಸುವಿಕೆ ಪರಿಕಲ್ಪನೆಯಡಿ ಅಭಿವೃದ್ಧಿಪಡಿಸುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು.ರಸ್ತೆ ಡಾಂಬರೀಕರಣಕ್ಕೆ ಬಿಸಿ ಮಾಡುವ ಅಗತ್ಯವಿಲ್ಲದ ಕೋಲ್ಡ್ ಮಿಕ್ಸ್ ಎಮಲ್ಷನ್ ತಂತ್ರಜ್ಞಾನ ಬಳಸುವುದರಿಂದ ಹೊಗೆ ಹೊರಸೂಸುವಿಕೆ ಕಡಿಮೆಯಾಗುವುದರೊಂದಿಗೆ ಇಂಧನ ಉಳಿತಾಯವಾಗಲಿದೆ. ಅರಣ್ಯ ಪ್ರದೇಶಕ್ಕೆ ಪೂರಕವಾಗಿರುವ ಈ ತಂತ್ರಜ್ಞಾನವನ್ನು ಮಳೆಗಾಲದಲ್ಲಿಯೂ ಬಳಸಲು ಸಾಧ್ಯವಿದೆ ಎಂದು ಅವರು ವಿವರಿಸಿದರು.
ಅದೇ ರೀತಿ, ರಸ್ತೆಯ ಇಕ್ಕೆಲಗಳಲ್ಲಿ ನಿರ್ಮಿಸುವ ಚರಂಡಿ ನೀರನ್ನು ಸೂಕ್ತವಾಗಿ ಸಂಗ್ರಹಿಸಿ ಬಳಕೆ ಮಾಡುವ ಮಳೆನೀರು ಕೊಯ್ಲು ವ್ಯವಸ್ಥೆ, ಪ್ರತಿ 200 ಮೀಟರ್‌ಗೊಮ್ಮೆ ನೀರು ಹರಿವಿನ ವ್ಯವಸ್ಥೆ ಹಾಗೂ ಗುಡ್ಡದ ಬದಿಗಳಲ್ಲಿ ಗಲ್ಲಿ ಪ್ಲಗ್‌ಗಳನ್ನು ನಿರ್ಮಿಸುವ ಮೂಲಕ ಮಣ್ಣಿನ ಸವಕಳಿ ನಿಯಂತ್ರಿಸುವ ಕುರಿತು ಪ್ರಸ್ತಾವಿಸಲಾಯಿತು.ಸ್ಥಳೀಯ ಮರಗಳ ನೆಡುವಿಕೆಗೆ ಒತ್ತುಗೃಹಮಂಡಲಿಯ ಮಾಜಿ ಅಧ್ಯಕ್ಷ ಜಿ.ಎಚ್. ಹಾಲಪ್ಪಗೌಡ ಮಾತನಾಡಿ, ರಸ್ತೆಯ ಇಕ್ಕೆಲಗಳಲ್ಲಿ ಮಲೆನಾಡಿನ ಸ್ಥಳೀಯ ತಳಿಗಳಾದ ಹೊನ್ನೆ, ನಂದಿ, ತೇಗ, ನೆಲ್ಲಿ, ಹಂಟಿಂಜಿ, ಹಲಸು, ಮಾವು, ಅತ್ತಿ, ಬೇವು, ಬಿದಿರು ಹಾಗೂ ವೆಟಿವರ್ ಹುಲ್ಲುಗಳನ್ನು ನೆಡಬಹುದು.


ಪ್ರತಿ ಮರವನ್ನು ಗ್ರಾಮದ ಒಂದು ಕುಟುಂಬ ದತ್ತು ಪಡೆದು ಸಂರಕ್ಷಿಸುವ ವ್ಯವಸ್ಥೆ ಮಾಡಿದರೆ ಮಣ್ಣಿನ ಸವಕಳಿ ತಡೆಗಟ್ಟುವುದರ ಜತೆಗೆ ಇಂಗಾಲ ಹೀರಿಕೆ ಹಾಗೂ ಪಕ್ಷಿಗಳಿಗೆ ಆವಾಸ ಕಲ್ಪಿಸಲು ಸಹಕಾರಿಯಾಗಲಿದೆ ಎಂದರು.
ಬಿ.ಕೆ. ಲಕ್ಷ್ಮಣ್ ಕುಮಾರ್, ನಿಡ್ಲೆ ಚಂದ್ರಣ್ಣ, ವಾಸುದೇವ್ ಸತ್ತಿಗನಹಳ್ಳಿ, ಊರುಬಗೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಿಚ್ಚಿ ಗೌಡ, ಲಿಂಗಪ್ಪ ಪೂಜಾರಿ, ಸುಮಿತ್ರಾ ಗೌಡ ಬೈರಾಪುರ ಹಾಗೂ ಗ್ರಾಮಸ್ಥರಾದ ರುದ್ರೇಗೌಡ, ಜಗದೀಶ್, ಪವನ್ ಮತ್ತಿತರರು ಮಾತನಾಡಿ, ಶಿಶಿಲದಲ್ಲಿರುವ ಕುಲದೇವರ ಕ್ಷೇತ್ರಕ್ಕೆ ತೆರಳಲು ಪ್ರಸ್ತುತ ರಸ್ತೆ ದುಸ್ಥಿತಿಯಿಂದಾಗಿ ಹರಸಾಹಸಪಡಬೇಕಾಗಿದೆ.
ವಿಶೇಷವಾಗಿ ಮಳೆಗಾಲದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುವುದು ಕಷ್ಟಕರವಾಗುತ್ತಿದೆ. ರಸ್ತೆ ಅಭಿವೃದ್ಧಿಯಾದರೆ ಮೂಡಿಗೆರೆ ಭಾಗದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಸುಗಮ ಸಂಪರ್ಕ ಸಾಧ್ಯವಾಗಲಿದೆ ಎಂದು ಹೇಳಿದರು.ಇದು ಹಲವು ವರ್ಷಗಳಿಂದ ಬಳಕೆಯಲ್ಲಿರುವ ಹಳೆಯ ಹಾದಿಯಾಗಿದ್ದು, ತಮ್ಮ ಪೂರ್ವಜರ ಕಾಲದಿಂದಲೂ ಈ ರಸ್ತೆ ಅಭಿವೃದ್ಧಿಯ ಕನಸಾಗಿದೆ. ಆದ್ದರಿಂದ ಕಾಮಗಾರಿಗೆ ಶೀಘ್ರ ಮಂಜೂರಾತಿ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಎನ್‌ಆರ್‌ಐಡಿಎಗೆ ಪ್ರಸ್ತಾವನೆಗ್ರಾಮಸ್ಥರು ಮುಂದಿಟ್ಟ ಹಸಿರು ರಸ್ತೆ ಪರಿಕಲ್ಪನೆಯನ್ನು ಮೆಚ್ಚಿದ ಕಾರ್ಯನಿರ್ವಾಹಕ ಅಭಿಯಂತರ ತರುಣ್ ಶಶಿ, ಈ ಪ್ರಸ್ತಾವನೆಯನ್ನು ದೆಹಲಿಯ ಎನ್‌ಆರ್‌ಐಡಿಎ ಯ ಅಡಿಯಲ್ಲಿ ಹಾಗೂ ಜಲ್ ಶಕ್ತಿ ಅಭಿಯಾನದೊಂದಿಗೆ ಒಗ್ಗೂಡಿಸಿ ಅಂದಾಜು ಸಿದ್ಧಪಡಿಸಿ ಕಳುಹಿಸುವುದಾಗಿ ಭರವಸೆ ನೀಡಿದರು.









