






ಬೆಳ್ತಂಗಡಿ; ಜಿಲ್ಲೆಯ ಎಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಸಹಕಾರದಿಂದಾಗಿ ಜಿಲ್ಲಾ ಸಹಕಾರಿ ಯೂನಿಯನ್ ಕಳೆದ ಸಾಲಿನಲ್ಲಿ 14 ಲಕ್ಷ ರೂ. ಲಾಭ ಗಳಿಸಿದ್ದು, 10 % ಲಾಭಾಂಶ ಕೊಡುವಂತಾಗಿದೆ. ಕಟ್ಟಕಡೇಯ ವ್ಯಕ್ತಿಗೆ ಸಹಾಯ ಮಾಡಲು ಅವಕಾಶವಿರುವ ಹಾಲು ಸೊಸೈಟಿಯ ವ್ಯವಸ್ಥೆಯಲ್ಲಿ ಸಿಇಒ ಗಳು ತರಬೇತುಗೊಳ್ಳುವುದು ಎಷ್ಟು ಮುಖ್ಯವೋ ಅದೇ ರೀತಿ ಮುಂದಿನ ವರ್ಷ ಹಾಲು ಸೊಸೈಟಿಯ ಅಧ್ಯಕ್ಷರುಗಳಿಗೂ ಕೌಶಲ್ಯ ತರಬೇತಿ ನೀಡುವ ಇಚ್ಚೇ ಇದೆ ಎಂದು ದ.ಕ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಹೇಳಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಲ ನಿ. ಬೆಂಗಳೂರು, ದ.ಕ ಸಹಕಾರಿ ಯೂನಿಯನ್ ಮಂಗಳೂರು, ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ. ಮಂಗಳೂರು, ಸಹಕಾರಿ ಇಲಾಖೆ ದ.ಕ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಬೆಳ್ತಂಗಡಿ ಡಿಸಿಸಿ ಬ್ಯಾಂಕಿನ ಸಭಾಂಗಣದಲ್ಲಿ, ಬೆಳ್ತಂಗಡಿ ತಾಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ವಿಶೇಷ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾರ್ಯಾಗಾರವನ್ನು ಜಿಲ್ಲಾ ಹಾಲು ಒಕ್ಕೂಟದ ಉಪಾಧ್ಯಕ್ಷ ಉದಯ ಕೋಟ್ಯಾನ್ ಉದ್ಘಾಟಿಸಿದರು.ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಪಿ ಕುಶಾಲಪ್ಪ ಗೌಡ ಶುಭ ಕೋರಿದರು. ವೇದಿಕೆಯಲ್ಲಿ ಸಹಕಾರಿ ಹಾಲು ಒಕ್ಕೂಟದ ನಿರ್ದೇಶಕ ಪ್ರಭಾಕರ ಆರಂಬೋಡಿ, ಡಿಸಿಸಿ ಬ್ಯಾಂಕ್ ಬೆಳ್ತಂಗಡಿ ಶಾಖಾ ವ್ಯವಸ್ಥಾಪಕ ಸುಧೀರ್ ಉಪಸ್ಥಿರಿದ್ದರು.


ಸಂಪನ್ಮೂಲ ವ್ಯಕ್ತಿಗಳಾದ ದ.ಕ ಹಾಲು ಒಕ್ಕೂಟದ ಪುತ್ತೂರು ವಿಭಾಗದ ಉಪ ವ್ಯವಸ್ಥಾಪಕ ಡಾ. ಸತೀಶ್ ರಾವ್ ಮತ್ತು ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ನಿವೃತ್ತ ಉಪನಿರ್ದೇಶಕ ಕೆ.ಎಸ್ ಬಾಲಸುಬ್ರಹ್ಮಣ್ಯ ತರಬೇತಿ ನಡೆಸಿಕೊಟ್ಟರು.
ಸಹಕಾರಿ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ವಿ ಹಿರೇಮಠ ಕಾರ್ಯಕ್ರಮ ಸಂಯೋಜಿಸಿದರು. ಹಾಲಿನ ಗುಣಮಟ್ಟ, ರಾಸುಗಳ ನಿರ್ವಹಣೆ ಮತ್ತು ಒಕ್ಕೂಟದ ಯೋಜನೆಗಳ ಸೌಲಭ್ಯಗಳು ಹಾಗೂ ಲೆಕ್ಕಪತ್ರಗಳ ನಿರ್ವಹಣೆ ಮತ್ತು ಲೆಕ್ಕಪರಿಶೋಧನೆ, ಸಿಇಒ ಗಳ ಜವಾಬ್ದಾರಿ ಮತ್ತು ಕರ್ತವ್ಯಗಳು, ನಿವೃತ್ತ ಸಿಬ್ಬಂದಿಗಳ ಸೇವಾ ಸೌಲಭ್ಯಗಳು ವಿಷಯದಲ್ಲಿ ತರಬೇತಿ ನಡೆಯಿತು.

ಸಹಕಾರಿ ಕ್ಷೇತ್ರ ಇಂದು ಬೇರೆ ಬೇರೆ ರೀತಿಯಲ್ಲಿ ಗ್ರಾಮಾಂತರದಿಂದ ರಾಷ್ಟ್ರಮಟ್ಟದವರೆಗೆ ಬೆಳೆದಿದೆ. ಜಿಲ್ಲೆಯ ಹಾಲು ಉತ್ಪಾದನೆ 4.40 ಲಕ್ಷ ಲೀಟರ್ ನಲ್ಲಿ 1.23 ಲಕ್ಷ ಲೀ. ಬೆಳ್ತಂಗಡಿ ತಾಲೂಕಿನ 87 ಹಾಲು ಸೊಸೈಟಿ ಗಳಿಂದ ಪೂರೈಕೆಯಾಗುತ್ತಿದೆ ಎಂಬುದು ಹೆಮ್ಮೆಯ ವಿಚಾರ. ನಾವು ಬೆಳೆಯುವುದು ಇನ್ನೊಬ್ಬರನ್ನು ಬೆಳೆಸುವುದೇ ಸಹಕಾರಿ ತತ್ವ– ಉದಯ ಕೋಟ್ಯಾನ್ ಜಿಲ್ಲಾ ಹಾಲು ಒಕ್ಕೂಟದ ಉಪಾಧ್ಯಕ್ಷ
ಇದೇ ವೇಳೆ ರಾಜ್ಯ ಸಹಕಾರ ಮಹಾಮಂಡಲದ ನಿರ್ದೇಶಕರಾಗಿ ಆಯ್ಕೆಯಾಗಿರುವ ಶಶಿಕುಮಾರ್ ರೈ ಅವರನ್ನು ಅಭಿನಂದಿಸಲಾಯಿತು









