






ಬೆಳ್ತಂಗಡಿ: ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ ಬೆಂಗಳೂರು, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಹಾಗೂ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಇಲಾಖೆ ಬೆಳ್ತಂಗಡಿ ತಾಲೂಕು, ಚಾರ್ಮಾಡಿ ಗ್ರಾಮ ಪಂಚಾಯತ್ ಹಾಗೂ ತ್ರಿವೇಣಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ (ರಿ.) ಚಾರ್ಮಾಡಿ ಇವರ ಜಂಟಿ ಆಶ್ರಯದಲ್ಲಿ ತ್ಯಾಜ್ಯ ನಿರ್ವಹಣೆ, ಮಳೆನೀರು ಇಂಗಿಸುವಿಕೆ ಹಾಗೂ ಸೌರಶಕ್ತಿ ಯೋಜನೆಗಳ ಬಗ್ಗೆ ಕಾರ್ಯಗಾರ ಚಾರ್ಮಾಡಿ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಚಾರ್ಮಾಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ ಕಾರ್ಯಕ್ರಮ ಉದ್ಘಾಟಿಸಿ ಪರಿಸರ ಉಳಿಸುವ ನಿಟ್ಟಿನಲ್ಲಿ ಮಾಹಿತಿ ನೀಡುವ ಸಂಸ್ಥೆಗಳ ಉದ್ದೇಶಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸದಸ್ಯರು ಇಲ್ಲಿ ಪಡೆಯುವ ಮಾಹಿತಿ ಪ್ರತಿ ಮನೆಯಲ್ಲಿ , ಗ್ರಾಮದಲ್ಲಿ ಅಳವಡಿಸಿಕೊಳ್ಳಬೇಕು, ನಮ್ಮ ಗ್ರಾಮ ಮಾದರಿ ಗ್ರಾಮ ಆಗಲು ಬೇಕಾದ ಎಲ್ಲಾ ಮಾಹಿತಿ ಪಡೆದು ಅದರ ಅಳವಡಿಕೆ ಬಗ್ಗೆ ಕಾರ್ಯಪ್ರವೃತ್ತರಾಗಬೇಕು ಎಂದರು.


ಭಾರತೀಯ ವಿಕಾಸ ಟ್ರಸ್ಟ್ ಇದರ ಕಾರ್ಯಕ್ರಮ ವ್ಯವಸ್ಥಾಪಕರಾದ ಶ್ರೀ ಜೀವನ್ ಕೊಲ್ಯ ಮಾತಾಡುತ್ತಾ ಗ್ರಾಮೀಣ ಪ್ರದೇಶದಲ್ಲಿ ತ್ಯಾಜ್ಯ ನಿರ್ವಹಣೆ ಹಾಗೂ ಸೌರಶಕ್ತಿ ಬಳಕೆ ಬಗ್ಗೆ ತಿಳಿದು ನಮ್ಮ ಮಕ್ಕಳಿಗೆ ತಿಳಿಸಬೇಕು, ನಾವು ಪಡೆದ ಮಾಹಿತಿಯನ್ನು ನಮ್ಮ ಮನೆಯಲ್ಲಿ ಮೊದಲು ಅಳವಡಿಸಿ ಗ್ರಾಮದ ಜನತೆ ಅಳವಡಿಸಲು ಪ್ರಯತ್ನ ಪಟ್ಟರೆ ನಮ್ಮ ಗ್ರಾಮ ಸ್ವಚ್ಛ ಗ್ರಾಮ ಆಗಬಹುದು ಎಂದು ತಿಳಿಸಿದರು. ಇಂದಿನ ಕಾರ್ಯಕ್ರಮದಲ್ಲಿ ಜೀವನ್ ಕೊಲ್ಯ ಸೌರಶಕ್ತಿ ಹಾಗೂ ಮಳೆಕೊಯ್ಲು ಬಗ್ಗೆ, ಗೌತಮ್ ತ್ಯಾಜ್ಯ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.
NRLM ಬೆಳ್ತಂಗಡಿ ತಾಲೂಕಿನ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಪ್ರತಿಮಾ , NRLM ಕೃಷಿಯೇತರ ತಾಲೂಕು ವ್ಯವಸ್ಥಾಪಕ ನಿತೀಶ್, ವಲಯ ಮೇಲ್ವಿಚಾರಕರಾದ ಜಯಾನಂದ ,ಒಕ್ಕೂಟದ ಅಧ್ಯಕ್ಷೆ ಶುಭ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಚಾರ್ಮಾಡಿ ಪಂಚಾಯತ್ ಮುಖ್ಯ ಪುಸ್ತಕ ಬರಹಗಾರರಾದ ಭವ್ಯ ನಿರೂಪಿಸಿ, ಕೃಷಿ ಸಖಿ ಅಶ್ವಿನಿ ಸ್ವಾಗತಿಸಿದರು. ಚಾರ್ಮಾಡಿ ಪಂಚಾಯತ್ ವ್ಯಾಪ್ತಿಯ ಸ್ವ ಸಹಾಯ ಸಂಘದ ಸದಸ್ಯರು, ಬೆಳ್ತಂಗಡಿ ತಾಲೂಕಿನ MBK ಗಳು ಮತ್ತು ತ್ಯಾಜ್ಯ ನಿರ್ವಹಣೆಯ ಸಿಬ್ಬಂದಿಗಳು ಕಾರ್ಯಾಗಾರದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.









