






ಬೆಳ್ತಂಗಡಿ: ಗ್ರಾಮ ಪಂಚಾಯತ್ ಅಂಡಿಂಜೆ ನಿಸರ್ಗ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ (ರಿ.) ಮತ್ತು ಜಿಲ್ಲಾ ಕೃಷಿ ತರಬೇತಿ ಕೇಂದ್ರ ಬೆಳ್ತಂಗಡಿ ಇದರ ಆಶ್ರಯದಲ್ಲಿ ಸೆ29 ರಂದು ಮಲ್ಲಿಗೆ ಮತ್ತು ಅಣಬೆ ಕೃಷಿ ತರಬೇತಿ ಕಾರ್ಯಕ್ರಮವು ಜರುಗಿತು.
ಒಕ್ಕೂಟದ ಅಧ್ಯಕ್ಷರಾದ ಸುದರ್ಶಿನಿ ಹೆಗ್ಡೆ ಅವರ ದಿವ್ಯ ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯಕ್ರಮವನ್ನು, ಶ್ರೀಮತಿ ರಮಣಿ ಹೆಗ್ಡೆ ಅವರ ಪ್ರಾರ್ಥನೆಯೊಂದಿಗೆ ಹಾಗೂ ಕೃಷಿ ಸಖಿ ಶ್ರೀಮತಿ ವತ್ಸಲ ಅವರ ಸ್ವಾಗತದೊಂದಿಗೆ ಅಧಿಕೃತವಾಗಿ ಪ್ರಾರಂಭಿಸಲಾಯಿತು.ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕೃಷಿ ಅಧಿಕಾರಿಯಾಗಿರುವ ಗಣೇಶ್ ಅಡಿಗ ಅವರು ಕೃಷಿ ಇಲಾಖೆಯಿಂದ ರೈತರಿಗೆ ಲಭ್ಯವಿರುವ ಸೌಲಭ್ಯಗಳು ಹಾಗೂ ಸರ್ಕಾರದ ಯೋಜನೆಗಳ ಕುರಿತು ಸಂಕ್ಷಿಪ್ತ ಮಾಹಿತಿ ನೀಡಿದರು.


ಅಣಬೆ ಕೃಷಿ: ಸಂಪನ್ಮೂಲ ವ್ಯಕ್ತಿಗಳಾದ ಸುಲೈಮಾನ್ ಬೆಳಾಲ ಅವರು ಅಣಬೆ ಕೃಷಿಯನ್ನು ಲಾಭದಾಯಕವಾಗಿ ಬೆಳೆಸುವ ವಿಧಾನಗಳ ಕುರಿತು ಪ್ರಾಯೋಗಿಕ ಮಾಹಿತಿ ಮತ್ತು ತರಬೇತಿ ನೀಡಿದರು. ತಾಲೂಕು ಕೃಷಿ ವ್ಯವಸ್ಥಾಪಕರಾದ ಬಂಗಾರಪ್ಪ ಅವರು ಸಂಜೀವಿನಿ ಯೋಜನೆಯ ಮಹತ್ವ ಹಾಗೂ ಕೃಷಿಕರಿಗೆ ದೊರೆಯುವ ಸಾಲ ಸೌಲಭ್ಯಗಳ ಬಗ್ಗೆ ವಿವರವಾಗಿ ತಿಳಿಸಿಕೊಟ್ಟರು.
ಇನ್ನೋರ್ವ ಪ್ರಗತಿಪರ ಕೃಷಿಕರಾದ ಪ್ರಭಾಕರಮಯ್ಯ ಮಲ್ಲಿಗೆ ಕೃಷಿಯನ್ನು ವೈಜ್ಞಾನಿಕವಾಗಿ ಮಾಡಿ ಉತ್ತಮ ಆದಾಯ ಗಳಿಸುವ ಕುರಿತು ಮಾರ್ಗದರ್ಶನ ಮಾಡಿದರು.ಕಾರ್ಯಕ್ರಮದ ವಿಶೇಷ ಮುಖವಾಗಿ, ಕೃಷಿ ಅಧಿಕಾರಿ ಗಣೇಶ್ ಅಡಿಗ ನೈಸರ್ಗಿಕ ಕೃಷಿಗೆ ಸಂಬಂಧಿಸಿದಂತೆ ರೈತರಿಗೆ ಸಾಂಕೇತಿಕವಾಗಿ ಮಣ್ಣು ಪರೀಕ್ಷೆ ಕಾರ್ಡ್ಗಳನ್ನು ವಿತರಿಸಿದರು.
ಸಮಾರಂಭದಲ್ಲಿ ಆಗಮಿಸಿದ್ದ ಅತಿಥಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರ ಮಲ್ಲಿಕಾ ಕಾರ್ಯಕ್ರಮವನ್ನು ನಿರೂಪಿಸಿದರೆ, ಎಲ್.ಸಿ.ಆರ್.ಪಿ (LCRP) ಸುರೇಖಾ ವಂದನಾರ್ಪಣೆ ಸಲ್ಲಿಸಿದರು.









