ಶಿಶಿಲ: ಪ್ರಯಾಣಿಕರನ್ನು ಅರ್ಧದಾರಿಯಲ್ಲೇ ಇಳಿಸುತ್ತಿರುವ ಸರ್ಕಾರಿ ಬಸ್

0

ಶಿಶಿಲ: ಉಪ್ಪಿನಂಗಡಿ–ಶಿಶಿಲ–ಸುದೆಗಂಡಿ (ಹೊಳೆಗಂಡಿ) ಮಾರ್ಗದಲ್ಲಿ ಸಂಚರಿಸುವ ಸರ್ಕಾರಿ ಬಸ್ ಪ್ರಯಾಣಿಕರನ್ನು ಅರ್ಧದಾರಿಯಲ್ಲೇ ಇಳಿಸಿ ವಾಪಸ್ ತೆರಳುತ್ತಿರುವ ಆರೋಪ ಕೇಳಿಬಂದಿದೆ.

ಈ ಭಾಗಕ್ಕೆ ಪ್ರತಿದಿನ ಸಂಜೆ 4.30ರ ಸುಮಾರಿಗೆ ಆಗಮಿಸುವ ಬಸ್ಸಿನ ಚಾಲಕ ಮತ್ತು ನಿರ್ವಾಹಕರು ಬಸ್ ಕೆಟ್ಟಿದೆ ಎಂಬ ಕಾರಣ ನೀಡುತ್ತಿದ್ದು, ಸುದೆಗಂಡಿಗೆ (ಹೊಳೆಗಂಡಿ) ಸಂಚರಿಸದೆ ಶಿಶಿಲ ಪೇಟೆಯಲ್ಲೇ ಪ್ರಯಾಣಿಕರನ್ನು ಇಳಿಸಿ ವಾಪಸ್ ತೆರಳುತ್ತಿದ್ದಾರೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ.

ಶಿಶಿಲದಿಂದ ಹೊಳೆಗಂಡಿ ನಡುವಿನ ಮಾರ್ಗದಲ್ಲಿ ನೂರಾರು ಕುಟುಂಬಗಳು ವಾಸವಾಗಿವೆ. ಈ ಭಾಗದ ಶಾಲಾ-ಕಾಲೇಜು ವಿದ್ಯಾರ್ಥಿಗಳು, ವಯಸ್ಕರು, ಉದ್ಯೋಗಿಗಳು ಹಾಗೂ ಹೈನುಗಾರರು ಬಸ್ ಸೇವೆಯನ್ನು ಅವಲಂಬಿಸಿದ್ದಾರೆ. ಆದರೆ ಬಸ್ ಹೊಳೆಗಂಡಿಗೆ ತೆರಳದೆ ಶಿಶಿಲದಲ್ಲೇ ಪ್ರಯಾಣಿಕರನ್ನು ಇಳಿಸುತ್ತಿರುವುದರಿಂದ ಸುಮಾರು 8 ಕಿ.ಮೀ. ದೂರ ಕಾಲ್ನಡಿಗೆಯಲ್ಲಿ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಕೆ.ಎಸ್.ಆರ್.ಟಿ.ಸಿ. ಧರ್ಮಸ್ಥಳ ಡಿಪೋ ವ್ಯವಸ್ಥಾಪಕರ ಗಮನಕ್ಕೂ ತರಲಾಗಿದ್ದರೂ, ಸಮಸ್ಯೆಗೆ ಸಮರ್ಪಕ ಸ್ಪಂದನೆ ದೊರೆಯುತ್ತಿಲ್ಲ ಎಂದು ಪ್ರಯಾಣಿಕರು ದೂರಿದ್ದಾರೆ.ಹೊಳೆಗಂಡಿವರೆಗೆ ಬಸ್ ಸಂಚಾರವನ್ನು ನಿಯಮಿತವಾಗಿ ಮುಂದುವರಿಸಿ, ಪ್ರಯಾಣಿಕರಿಗೆ ಉಂಟಾಗುತ್ತಿರುವ ತೊಂದರೆಯನ್ನು ನಿವಾರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here