ಕಡಿರುದ್ಯಾವರದಲ್ಲಿ ಕಸ್ತೂರಿ ರಂಗನ್ ವರದಿ ಕುರಿತು ವಿಶೇಷ ಗ್ರಾಮ ಸಭೆ – ವರದಿ ಜಾರಿಗೆ ಗ್ರಾಮಸ್ಥರ ತೀವ್ರ ವಿರೋಧ

0

ಕಡಿರುದ್ಯಾವರ:ಕಸ್ತೂರಿ ರಂಗನ್ ವರದಿ ಕುರಿತ ವಿಶೇಷ ಗ್ರಾಮ ಸಭೆಯು ಸೆ.23 ರಂದು ಕಡಿರುದ್ಯಾವರ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.

ಆಡಳಿತಾಧಿಕಾರಿ, ವನ್ಯಜೀವಿ ಇಲಾಖೆಯ ವಲಯ ಅರಣ್ಯಾಧಿಕಾರಿ ಶರ್ಮಿಷ್ಠಾ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.ಪಿಡಿಒ ರವಿಬನಪ್ಪ ಗೌಡ್ರ, ಬೆಳ್ತಂಗಡಿ ವಲಯ ಸಹಾಯಕ ಅರಣ್ಯಾಧಿಕಾರಿ ರಂಜಿತ್, ಗ್ರಾಮ ಆಡಳಿತಾಧಿಕಾರಿ ಸಂತೋಷ್, ಮಾಜಿ ಅಧ್ಯಕ್ಷರುಗಳಾದ ಅಶೋಕ್, ವನಿತಾ ಜೆ. ಪೂಜಾರಿ, ನೇಮಿರಾಜ ಕಿಲ್ಲೂರು, ಸಂತೋಷ್ ಕುಮಾರ್ ಗೌಡ ವಳಂಬ್ರ, ಸೂರಜ್ ವಳಂಬ್ರ*, ಮಾಜಿ ಸದಸ್ಯರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ ಜಾರಿಗೆ ವಿರೋಧ: ಕಸ್ತೂರಿ ರಂಗನ್ ವರದಿ ಜಾರಿಯಿಂದ ಗ್ರಾಮಸ್ಥರಿಗೆ ಬಹಳಷ್ಟು ಸಮಸ್ಯೆಯಾಗಲಿದೆ. ಈ ವರದಿಯು ಜನರ ಬದುಕಿನ ಹಕ್ಕನ್ನು ಕಸಿಯುತ್ತಿದೆ. ಜಾರಿಗೊಂಡರೆ ಜನರ ಬದುಕು ಅತಂತ್ರವಾಗಲಿದೆ. ಈಗಾಗಲೇ ವರದಿಯ ಸುದ್ದಿಯಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಜನರ ಭಯ ಹೋಗಬೇಕಾದರೆ ಕೇಂದ್ರ ಸರ್ಕಾರ ಈ ವರದಿಯನ್ನು ಜಾರಿ ಮಾಡಲೇಬಾರದು ಎಂದು ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿ ಆಗ್ರಹಿಸಿದರು.ಶತಮಾನಗಳಿಂದ ಬದುಕುತ್ತಿರುವ ಜನರ ಹಿತಾಸಕ್ತಿ ಕಾಪಾಡಬೇಕು. ಗ್ರಾಮದ ಭೌಗೋಳಿಕ ಮತ್ತು ವಾಸ್ತವಿಕ ಪರಿಸ್ಥಿತಿಯನ್ನು ಪರಿಗಣಿಸದೆ ಯಾವುದೇ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಗೆ ಸೇರಿಸಬಾರದು. ಅಭಿವೃದ್ಧಿಗೆ ಅಡ್ಡಿ ಪಡಿಸಿದರೆ ಸಂಘಟಿತ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಗ್ರಾಮಸ್ಥರಿಗೆ ಸರಿಯಾದ ಮಾಹಿತಿ ನೀಡದೆ ಗೊಂದಲಕ್ಕೆ ಈಡು ಮಾಡಬಾರದು ಎಂದು ಒತ್ತಾಯಿಸಿದರು. ಸಭೆಯಲ್ಲಿ ಗ್ರಾಮಸ್ಥರ ಅಹವಾಲು, ಆಕ್ಷೇಪಣೆಗಳನ್ನು ಸ್ವೀಕರಿಸಲಾಯಿತು.

LEAVE A REPLY

Please enter your comment!
Please enter your name here