ಇಂಜಿನಿಯರ್ಸ್ ಡೇ ಆಚರಣೆ: ಜಾಥಾ–ಮಾಹಿತಿ ಕಾರ್ಯಾಗಾರ

0

ಬೆಳ್ತಂಗಡಿ: ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ (ಎಸಿಸಿಇಎ) ಬೆಳ್ತಂಗಡಿ ಸೆಂಟರ್ ವತಿಯಿಂದ ಸರ್ ಎಂ. ವಿಶ್ವೇಶ್ವರಯ್ಯ ಅವರ 165ನೇ ಜನ್ಮದಿನಾಚರಣೆ ಅಂಗವಾಗಿ ಇಂಜಿನಿಯರ್ಸ್ ಡೇ ಕಾರ್ಯಕ್ರಮ ಸೆ.22ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು.

ಎಸಿಸಿಇಎ ಬೆಳ್ತಂಗಡಿ ಸೆಂಟರ್ ಅಧ್ಯಕ್ಷ ಸುರೇಶ್ ಬಂಗೇರ ಎಂ.ಡಿ. ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಇಂಜಿನಿಯರ್‌ಗಳ ವಿವಿಧ ಬೇಡಿಕೆಗಳ ಕುರಿತು ಮನವಿಯನ್ನು ತಹಶೀಲ್ದಾರ್ ಅವರಿಗೆ ಸಲ್ಲಿಸಲಾಯಿತು. ಬಳಿಕ ಬೆಳ್ತಂಗಡಿಯಿಂದ ಉಜಿರೆವರೆಗೆ ನಡೆದ ವಾಹನ ಜಾಥಾಕ್ಕೆ ಬೆಳ್ತಂಗಡಿ ಪಟ್ಟಣ ಪಂಚಾಯತ್ ಇಂಜಿನಿಯರ್ ಮಹಾವೀರ ಆರಿಗ ಚಾಲನೆ ನೀಡಿ ಶುಭ ಹಾರೈಸಿದರು.

ಉಜಿರೆಯ ಎಸ್‌ಡಿಎಂಐಟಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಹಾಗೂ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗಾಗಿ ಮಾಹಿತಿ ಕಾರ್ಯಾಗಾರ ನಡೆಯಿತು. ಇಂಜಿನಿಯರ್‌ಗಳ ವೃತ್ತಿಪರ ಜವಾಬ್ದಾರಿ, ತಾಂತ್ರಿಕ ಜ್ಞಾನ ಹಾಗೂ ಸಾಮಾಜಿಕ ಬದ್ಧತೆ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು.ಸಂಜೆ ಓಷಿಯನ್ ಪರ್ಲ್‌ನಲ್ಲಿ ನಡೆದ ಇಂಜಿನಿಯರ್ಸ್ ಡೇ ಕಾರ್ಯಕ್ರಮದಲ್ಲಿ ಎಸಿಸಿಇ (ಐ) ರಾಷ್ಟ್ರೀಯ ಅಧ್ಯಕ್ಷ ರಾಜೇಂದ್ರ ಕಲ್ಬಾವಿ ಹಾಗೂ ಎಸಿಸಿಇಎ (ಆರ್) ಉಡುಪಿ ಅಧ್ಯಕ್ಷ ಮತ್ತು ರಾಷ್ಟ್ರೀಯ ನಿರ್ದೇಶಕ ಭಗವಾನ್‌ದಾಸ್ ಕೆ. ಅವರನ್ನು ಸನ್ಮಾನಿಸಲಾಯಿತು.

ರಾಜೇಂದ್ರ ಕಲ್ಬಾವಿ ಮಾತನಾಡಿ, ಇಂಜಿನಿಯರ್‌ಗಳು ಸ್ಪರ್ಧಾತ್ಮಕ ಜಗತ್ತಿಗೆ ಹೊಂದಿಕೊಂಡು ತಾಂತ್ರಿಕವಾಗಿ ಪ್ರಬಲರಾಗಬೇಕು. ನೀರಿನ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು. ಎಸಿಸಿಇಎ ಸೆಂಟರ್‌ಗಳನ್ನು ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಬಲಪಡಿಸುವುದರಿಂದ ಸಂಘಟನೆಗೆ ಹೆಚ್ಚಿನ ಶಕ್ತಿ ದೊರೆಯಲಿದೆ ಎಂದು ತಿಳಿಸಿ, ಬೆಳ್ತಂಗಡಿ ಘಟಕದ ಕಾರ್ಯಚಟುವಟಿಕೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಭಗವಾನ್‌ದಾಸ್ ಕೆ. ಮಾತನಾಡಿ, ಇಂಜಿನಿಯರ್‌ಗಳಿಗೆ ಸಮಾಜದಲ್ಲಿ ದೊಡ್ಡ ಜವಾಬ್ದಾರಿಯಿದೆ. ನಿಯಮಗಳನ್ನು ಪಾಲಿಸುವುದರ ಜೊತೆಗೆ ಕಾನೂನಿಗೆ ಗೌರವ ನೀಡಿ ವೃತ್ತಿಯ ಘನತೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಂಗಳೂರು–ಮೈಸೂರು ವಿಭಾಗದ ಕೆಸಿಪಿಸಿಇ ಸ್ಥಾಪಕ ಸದಸ್ಯ ಜಗದೀಶ್ ಪ್ರಸಾದ್ ಹಾಗೂ ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಡಾ. ರವೀಶ್ ಪಡುಮಲೆ ಅವರನ್ನು ಗೌರವಿಸಲಾಯಿತು. ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆ ಮಾಲಕ ಕೆ. ಮೋಹನ್ ಕುಮಾರ್, ಎಸ್‌ಎಲ್‌ವಿ ಕನ್‌ಸ್ಟ್ರಕ್ಷನ್ ಮಾಲಕ ಸಂಪತ್ ರತ್ನ ರಾವ್, ರಾಮೋ ಸಂಸ್ಥೆಯ ಡೆಪ್ಯೂಟಿ ಮೇಜನರ್ ಹಾಗೂ ಸಹಪ್ರಯೋಜಕರನ್ನು ಅಸೋಸಿಯೇಷನ್ ವತಿಯಿಂದ ಅಭಿನಂದಿಸಲಾಯಿತು.

ಇಂಜಿನಿಯರ್ಸ್ ಡೇ ಅಂಗವಾಗಿ ಶಾಲಾ ಮಕ್ಕಳಿಗೆ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಅಸೋಸಿಯೇಷನ್‌ಗೆ ಸೇರ್ಪಡೆಗೊಂಡ ಆರು ಮಂದಿ ನೂತನ ಸದಸ್ಯರನ್ನು ಸ್ವಾಗತಿಸಲಾಯಿತು. ಚಿತ್ರಕಲಾ ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಭಾಗವಹಿಸಿದ ಛಾಯಾಗ್ರಾಹಕ ವಸಂತ ಶರ್ಮ ಹಾಗೂ ಉಪನ್ಯಾಸಕ ಶೈಲೇಶ್ ಕುಮಾರ್ ಅವರನ್ನು ಗುರುತಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಎಂಎಲ್‌ಸಿ ಪ್ರತಾಪಸಿಂಹ ನಾಯಕ್, ಎಸ್‌ಡಿಎಂ ಕಾಲೇಜಿನ ಇಂಜಿನಿಯರಿಂಗ್ ಪ್ರಾಂಶುಪಾಲ ಸಂದೀಪ್, ಬೆಳ್ತಂಗಡಿ ಘಟಕದ ಕಾರ್ಯದರ್ಶಿ ಶಿಜೋ ಜೋಸೆಫ್, ಕೋಶಾಧಿಕಾರಿ ನಾಗೇಶ್ ಎಂ., ಸದಸ್ಯರಾದ ಶ್ರವಣ್ ಕಾಂತಾಜೆ, ಹರ್ಷೇಂದ್ರ ಕುಮಾರ್, ಹಂಸರಾಜ್, ಯಶೋಧರ ಸೇರಿದಂತೆ ಪದಾಧಿಕಾರಿಗಳು ಸಹಕರಿಸಿದರು.

ಜಿಲ್ಲೆಯ ವಿವಿಧ ಘಟಕಗಳ ಪದಾಧಿಕಾರಿಗಳು, ರೋಟರಿ ಅಧ್ಯಕ್ಷ ಶ್ರೀಧರ್ ಹಾಗೂ ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕರು ಭಾಗವಹಿಸಿದ್ದರು.ಕಾರ್ಯಕ್ರಮದ ಬಳಿಕ ಉಡುಪಿಯ ಶ್ರೀ ಧೂಮಾವತಿ ಚೆಂಡೆ ಬಳಗದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here