ಬೆಳ್ತಂಗಡಿ: ಮೀಸಲು ಅರಣ್ಯಕ್ಕೆ ಅಕ್ರಮ ಪ್ರವೇಶ: ಇಬ್ಬರು ಯೂಟ್ಯೂಬರ್‌ಗಳ ವಿರುದ್ಧ ಪ್ರಕರಣ ದಾಖಲು

0

ಬೆಳ್ತಂಗಡಿ: ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ಮೀಸಲು ಅರಣ್ಯದೊಳಗೆ ಅಕ್ರಮವಾಗಿ ಪ್ರವೇಶ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರ ವಿರುದ್ಧ ಬೆಳ್ತಂಗಡಿ ವಲಯ ಅರಣ್ಯ ಇಲಾಖೆಯವರು ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಬಂಗ್ಲೆಗುಡ್ಡೆ ಮೀಸಲು ಅರಣ್ಯ ಪ್ರದೇಶದೊಳಗೆ ಸೆ.20 ರಂದು ಯೂನೈಟೆಡ್ ಮೀಡಿಯಾ ಯೂಟ್ಯೂಬರ್ ಅಭಿಷೇಕ್ ಮತ್ತು ಬೆಂಗಳೂರು ಪೋಸ್ಟ್ ವೆಬ್‌ಸೈಟ್‌ನ ಶ್ರೇಯಸ್ ಅವರು ಯಾವುದೇ ಅನುಮತಿ ಇಲ್ಲದೆ ಪ್ರವೇಶ ಮಾಡಿದ್ದರು. ಈ ವೇಳೆ ಧರ್ಮಸ್ಥಳ ಗ್ರಾಮಸ್ಥರು ಇಬ್ಬರನ್ನು ಹಿಡಿದು ಧರ್ಮಸ್ಥಳ ಪೊಲೀಸರಿಗೆ ಒಪ್ಪಿಸಿದ್ದರು. ನಂತರ ಪೊಲೀಸರು ಇಬ್ಬರನ್ನು ಬೆಳ್ತಂಗಡಿ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದರು.

ಈ ಬಗ್ಗೆ ಧರ್ಮಸ್ಥಳ ನಿವಾಸಿ ನಿತಿನ್ ಎಂಬವರು ಬೆಳ್ತಂಗಡಿ ವಲಯ ಅರಣ್ಯ ಇಲಾಖೆಗೆ ದೂರು ನೀಡಿದ್ದರು. ದೂರಿನ ಅನ್ವಯ ವಿಚಾರಣೆ ನಡೆಸಿ ವರದಿ ತಯಾರಿಸಿದ ಇಲಾಖೆ, ಸೆ.21 ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಪ್ರಕರಣ ದಾಖಲಿಸಲು ಅನುಮತಿ ಕೋರಿತ್ತು.

ನ್ಯಾಯಾಲಯವು ಸೆ.22 ರಂದು ಅನುಮತಿ ನೀಡಿದ ಬಳಿಕ, ಅರಣ್ಯ ಇಲಾಖೆಯವರು ಕರ್ನಾಟಕ ಅರಣ್ಯ ಕಾಯ್ದೆ ಕಲಂ 24C(ii) ಅಡಿಯಲ್ಲಿ ಶ್ರೇಯಸ್ ಮತ್ತು ಅಭಿಷೇಕ್ ವಿರುದ್ಧ ಸೆ.22 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here