ಆಳ್ವಾಸ್ ಸಂಸ್ಥೆಗೆ ತಿಂಗಳೊಳಗೆ ‘ಡೀಮ್ಡ್ ಯೂನಿವರ್ಸಿಟಿ’ ಮಾನ್ಯತೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭರವಸೆ- ಮೂಡುಬಿದಿರೆಯಲ್ಲಿ ಆಳ್ವಾಸ್ ಮೆಡಿಕಲ್ ಕಾಲೇಜು ಉದ್ಘಾಟನೆ- ದಕ್ಷಿಣ ಕನ್ನಡ ದೇಶದ ‘ಮೆಡಿಕಲ್ ಹಬ್’ ಆಗುವ ಸಾಮರ್ಥ್ಯ ಹೊಂದಿದೆ ಎಂದ ಪ್ರಹ್ಲಾದ್ ಜೋಶಿ

0

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಸಂಸ್ಥೆಗೆ ಇನ್ನೊಂದು ತಿಂಗಳೊಳಗೆ ‘ಡೀಮ್ಡ್ ಯೂನಿವರ್ಸಿಟಿ’ ಮಾನ್ಯತೆ ನೀಡಲಾಗುವುದು ಎಂದು ಕೇಂದ್ರ ಶಿಕ್ಷಣ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಹಾಗೂ ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ಭರವಸೆ ನೀಡಿದ್ದಾರೆ.ಮೂಡುಬಿದಿರೆಯಲ್ಲಿ ನೂತನವಾಗಿ ನಿರ್ಮಿಸಲಾದ ‘ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆಂಡ್ ರಿಸರ್ಚ್ ಸೆಂಟರ್’ (ಆಳ್ವಾಸ್ ಮೆಡಿಕಲ್ ಕಾಲೇಜು) ಲೋಕಾರ್ಪಣೆ ನೆರವೇರಿಸಿ ಅವರು ಮಾತನಾಡಿದರು.

ತಿಂಗಳೊಳಗೆ ‘ಲೆಟರ್ ಆಫ್ ಇಂಟೆಂಟ್’ಡೀಮ್ಡ್ ಯೂನಿವರ್ಸಿಟಿ ಮಾನ್ಯತೆಗೆ ಸಂಬಂಧಿಸಿದಂತೆ 10ರಿಂದ 12 ಸ್ಪಷ್ಟೀಕರಣದ ಅಂಶಗಳನ್ನು ಇ-ಮೇಲ್ ಮೂಲಕ ಆಳ್ವಾಸ್ ಸಂಸ್ಥೆಗೆ ಈಗಾಗಲೇ ಕಳುಹಿಸಲಾಗಿದೆ. ಸಂಸ್ಥೆಯಿಂದ ಸೂಕ್ತ ಸ್ಪಷ್ಟೀಕರಣ ಬಂದ ತಕ್ಷಣ, 30 ದಿನದೊಳಗೆ ಮಾನ್ಯತೆಯ ಪತ್ರವನ್ನು ಹಸ್ತಾಂತರಿಸಲಾಗುವುದು. ಆಳ್ವಾಸ್ ಶಿಕ್ಷಣ ಸಂಸ್ಥೆಯ ಎಲ್ಲ ಘಟಕಗಳನ್ನು ಒಂದೇ ವಿಶ್ವವಿದ್ಯಾನಿಲಯದ ಅಡಿಯಲ್ಲಿ ತಂದು, ಜಾಗತಿಕ ಮಟ್ಟದ ಅತ್ಯುತ್ತಮ ಇನ್‌ಸ್ಟಿಟ್ಯೂಟ್ ಆಗಿ ರೂಪಿಸಬೇಕು ಎಂಬುದು ತಮ್ಮ ಆಸೆ ಎಂದು ಸಚಿವರು ಹೇಳಿದರು.

21ನೇ ಶತಮಾನ ಭಾರತದ್ದು:19ನೇ ಶತಮಾನ ಇಂಗ್ಲೆಂಡ್‌ನದ್ದಾಗಿತ್ತು, 20ನೇ ಶತಮಾನ ಅಮೆರಿಕದ್ದಾಗಿತ್ತು. ಆದರೆ 21ನೇ ಶತಮಾನ ಭಾರತದ್ದಾಗಿದ್ದು, 2047ರ ವೇಳೆಗೆ ಭಾರತವು ‘ವಿಕಸಿತ ಭಾರತ’ವಾಗಲಿದೆ. ದೇಶದ ವಿಕಾಸಕ್ಕೆ ತಕ್ಕಂತೆ ಶಿಕ್ಷಣ ವ್ಯವಸ್ಥೆ, ಸಂಶೋಧನೆ ಹಾಗೂ ನವೋದ್ಯಮಗಳು (ಸ್ಟಾರ್ಟ್‌ಅಪ್‌) ಬೆಳೆಯಬೇಕಿದೆ ಎಂದರು.

ಜಾಗತಿಕ ಮೆಡಿಕಲ್, ಮ್ಯಾನುಫ್ಯಾಕ್ಚರಿಂಗ್ ಹಬ್:ದೇಶವನ್ನು ಜಾಗತಿಕ ‘ಮೆಡಿಕಲ್ ಹಬ್’ ಹಾಗೂ ಮ್ಯಾನುಫ್ಯಾಕ್ಚರಿಂಗ್ ಹಬ್ ಆಗಿ ಬೆಳೆಸಲು ಕೇಂದ್ರ ಸರ್ಕಾರ ಹಲವು ಕ್ರಾಂತಿಕಾರಿ ಕ್ರಮಗಳನ್ನು ಕೈಗೊಂಡಿದೆ. ದೇಶದಲ್ಲಿದ್ದ ಮೆಡಿಕಲ್ ಕಾಲೇಜುಗಳ ಸಂಖ್ಯೆ ೩೮೦ರಿಂದ ೭೦೦ಕ್ಕೂ ಅಧಿಕ ಹೆಚ್ಚಾಗಿದ್ದು, ವೈದ್ಯಕೀಯ ಸೀಟುಗಳ ಸಂಖ್ಯೆ ೫೧ ಸಾವಿರದಿಂದ 1.40 ಲಕ್ಷಕ್ಕೂ ಅಧಿಕ ಏರಿಕೆಯಾಗಿದೆ. ೨೦೨೫-೨೬ರ ವೇಳೆಗೆ ಭಾರತದ ರಫ್ತು ಪ್ರಮಾಣ ೮೬೩ ಬಿಲಿಯನ್ ಡಾಲರ್‌ಗೆ ತಲುಪಿದೆ. ‘ಝೀರೋ ಎಫೆಕ್ಟ್, ಝೀರೋ ಡಿಫೆಕ್ಟ್’ ನೀತಿಯಡಿ ಗುಣಮಟ್ಟದ ಉತ್ಪನ್ನ ತಯಾರಿಕೆಗೆ ಆದ್ಯತೆ ನೀಡಲಾಗುತ್ತಿದೆ.

ಪ್ರಮುಖ ದೇಶಗಳು ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿವೆ ಎಂದು ಪ್ರಹ್ಲಾದ ಜೋಶಿ ತಿಳಿಸಿದರು.ಪೋಷಕರು ತಮ್ಮ ಇಷ್ಟದ ಕೋರ್ಸ್‌ಗಳನ್ನು ಮಕ್ಕಳ ಮೇಲೆ ಹೇರಬಾರದು. ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯ ಕಾಯ್ದುಕೊಳ್ಳುವ ವಾತಾವರಣ ನಿರ್ಮಿಸಬೇಕು. ಈ ಆಶಯವನ್ನು ಡಾ.ಎಂ. ಮೋಹನ್ ಆಳ್ವ ಅವರು ತಮ್ಮ ಸಂಸ್ಥೆಯಲ್ಲಿ ಸಾಕಾರ ಮಾಡಿಕೊಂಡಿದ್ದಾರೆ. ಕ್ರೀಡಾಪಟುಗಳು, ಬಡವರು ಹಾಗೂ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ ಉಚಿತ ಹಾಗೂ ರಿಯಾಯಿತಿ ಶಿಕ್ಷಣ ನೀಡುತ್ತಿರುವ ಅವರ ಕಾರ್ಯ ಶ್ಲಾಘನೀಯ ಎಂದರು.

ದ.ಕ. ಭಾರತದ ಹೀಲಿಂಗ್ ಕ್ಯಾಪಿಟಲ್ ಆಗಲಿ- ಕ್ಯಾ.ಚೌಟ:ಕಾರ್ಯಕ್ರಮದಲ್ಲಿ ಮಾತನಾಡಿದ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ, ಮೆಡಿಕಲ್ ಟೂರಿಸಂ ದೃಷ್ಟಿಯಿಂದ ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಇಡೀ ದೇಶದ ‘ಹೀಲಿಂಗ್ ಕ್ಯಾಪಿಟಲ್’ (ಅಧ್ಯಾತ್ಮ ಹಾಗೂ ಆರೋಗ್ಯ ಕೇಂದ್ರ) ಆಗಿ ಹೊರಹೊಮ್ಮಬೇಕಿದೆ ಎಂದರು.ಕೇವಲ ೧೦ ತಿಂಗಳ ಅಲ್ಪ ಅವಧಿಯಲ್ಲಿ ಅತ್ಯಂತ ಸುಂದರ ಹಾಗೂ ಸುಸಜ್ಜಿತ ವೈದ್ಯಕೀಯ ಶಿಕ್ಷಣ ಸಂಸ್ಥೆಯನ್ನು ನಿರ್ಮಿಸಿ ಲೋಕಾರ್ಪಣೆಗೊಳಿಸಿರುವುದು ಅಪರೂಪದ ಸಾಧನೆ. ಆಳ್ವಾಸ್ ಸಂಸ್ಥೆಯನ್ನು ಡೀಮ್ಡ್ ಯೂನಿವರ್ಸಿಟಿ ಆಗಿ ಘೋಷಿಸುವ ಸಮಯ ಅತಿ ಶೀಘ್ರ ಕೈಗೂಡಲಿ ಎಂದು ಆಶಿಸಿದರು.ಟಿಬಿ ಮುಕ್ತ ಭಾರತ: ಪ್ರಧಾನಿಯವರ ‘ಟಿಬಿ ಮುಕ್ತ ಭಾರತ’ ಅಭಿಯಾನಕ್ಕೆ ಜಿಲ್ಲೆಯ ಎಲ್ಲ ಮೆಡಿಕಲ್ ಕಾಲೇಜುಗಳು ಕೈಜೋಡಿಸಿ ರೋಗಿಗಳನ್ನು ಗುರುತಿಸಿ ಉಚಿತ ಚಿಕಿತ್ಸೆ ನೀಡುವಂತೆ ಕ್ಯಾ. ಚೌಟ ಸಲಹೆ ನೀಡಿದರು.

ಸಮಾರಂಭದಲ್ಲಿ ಆರ್‌ಎಸ್‌ಎಸ್ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯವಾಹ ಎನ್. ತಿಪ್ಪೇಸ್ವಾಮಿ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ. ಭಗವಾನ್ ಬಿ.ಸಿ. ಮಾತನಾಡಿದರು. ಮೂಡುಬಿದಿರೆ ಶಾಸಕ ಉಮಾನಾಥ ಎ. ಕೋಟ್ಯಾನ್, ಮಾಜಿ ಸಚಿವರಾದ ಕೆ. ಅಭಯಚಂದ್ರ ಜೈನ್ ಹಾಗೂ ವಿನಯ ಕುಮಾರ್ ಸೊರಕೆ, ಮಾಜಿ ಎಂಎಲ್ಸಿ ಕ್ಯಾ. ಗಣೇಶ್ ಕಾರ್ಣಿಕ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಮಾಹೆ ಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್, ನಿಟ್ಟೆ ವಿವಿ ಕುಲಾಧಿಪತಿ ವಿಶಾಲ್ ಹೆಗ್ಡೆ, ಯೆನೆಪೊಯ ವಿವಿ ಕುಲಾಧಿಪತಿ ಡಾ. ಅಬ್ದುಲ್ಲಾ ಕುಂಞ್ಞಿ, ಶ್ರೀನಿವಾಸ ವಿವಿ ಕುಲಾಧಿಪತಿ ಡಾ.ಎ. ಶ್ರೀನಿವಾಸ್ ರಾವ್, ಮಂಗಳೂರು ವಿವಿ ಕುಲಪತಿ ಡಾ.ಪಿ.ಎಲ್. ಧರ್ಮ, ಆರ್‌ಜಿಯುಎಚ್‌ಎಸ್ ಮೊದಲ ಕುಲಪತಿ ಡಾ.ಎಸ್. ಕಾಂತಾ, ವಿಶ್ರಾಂತ ಕುಲಪತಿಗಳಾದ ಡಾ.ಎಸ್. ಚಂದ್ರಶೇಖರ್ ಶೆಟ್ಟಿ, ಡಾ. ರಮಾನಂದ ಶೆಟ್ಟಿ, ಡಾ.ಎಸ್. ಸಚ್ಚಿದಾನಂದ, ಡಾ. ಜಯಕರ್ ಶೆಟ್ಟಿ, ಕರಾವಳಿ ಗ್ರೂಪ್ ಸ್ಥಾಪಕಾಧ್ಯಕ್ಷ ಎಸ್. ಗಣೇಶ್ ರಾವ್, ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷ ಚಿದಾನಂದ ಗೌಡ, ಲಕ್ಷ್ಮೀ ಮೆಮೋರಿಯಲ್ ಟ್ರಸ್ಟ್ ಅಧ್ಯಕ್ಷ ಡಾ.ಎ.ಜೆ. ಶೆಟ್ಟಿ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಪ್ರಧಾನ ಆಯುಕ್ತ ಡಾ. ಪಿ.ಜಿ.ಆರ್. ಸಿಂಧ್ಯಾ, ಧರ್ಮಸ್ಥಳದ ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ತೇಜಸ್ವಿನಿ ಆಸ್ಪತ್ರೆ ಸ್ಥಾಪಕ ಅಧ್ಯಕ್ಷ ಡಾ. ಶಾಂತಾರಾಮ್ ಶೆಟ್ಟಿ, ಫಸ್ಟ್ ನ್ಯೂರೋ ಹಾಸ್ಪಿಟಲ್ ವೈದ್ಯಕೀಯ ನಿರ್ದೇಶಕ ಡಾ. ರಾಜೇಶ್ ಶೆಟ್ಟಿ, ಕೆಎಂಸಿ ಮೂಳೆ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಕಿರಣ್ ಕೆ.ವಿ. ಆಚಾರ್ಯ, ಫಾದರ್ ಮುಲ್ಲರ್ ಸಂಸ್ಥೆಯ ನಿರ್ದೇಶಕ ಫೌಸ್ಟಿನ್ ಲ್ಯೂಕಸ್ ಲೋಬೊ, ಧರ್ಮಗುರು ರೆ. ಫಾ. ಫ್ರಾನ್ಸಿಸ್ ಕ್ಷೇವಿಯರ್ ಗೋಮ್ಸ್, ಅದಾನಿ ಸಮೂಹದ ಕಾರ್ಯ ನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಕಣಚೂರು ಸಂಸ್ಥೆಗಳ ಅಧ್ಯಕ್ಷ ಡಾ. ಹಾಜಿ ಯು.ಕೆ. ಮೋನು, ಎಂಆರ್‌ಜಿ ಗ್ರೂಪ್ ಅಧ್ಯಕ್ಷ ಡಾ. ಪ್ರಕಾಶ್ ಶೆಟ್ಟಿ, ಬಿಮಾಲ್ ಬಿಲ್ಡ್‌ಕಾನ್ ಆಡಳಿತ ನಿರ್ದೇಶಕ ಪ್ರವೀಣ್ ಕುಮಾರ್, ಭಾರತ್ ಇನ್‌ಫ್ರಾಟೆಕ್ ವ್ಯವಸ್ಥಾಪಕ ನಿರ್ದೇಶಕ ಮುಸ್ತಫಾ ಎಸ್.ಎಂ., ಮೂಡುಬಿದಿರೆ ಚೌಟರ ಅರಮನೆಯ ಕುಲದೀಪ ಎಂ., ಡಾ. ಶಂಕರ್ ನಾಯಕ್ ಟ್ರಸ್ಟ್ ಅಧ್ಯಕ್ಷೆ ಪಂಕಜಾ ಶಂಕರ ನಾಯಕ್, ಅಮರನಾಥ್ ಶೆಟ್ಟಿ ಟ್ರಸ್ಟ್ ಅಧ್ಯಕ್ಷೆ ಡಾ. ಅಮರಶ್ರೀ, ಆಳ್ವಾಸ್ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಟ್ರಸ್ಟಿಗಳಾದ ಜಯಶ್ರೀ ಅಮರನಾಥ ಶೆಟ್ಟಿ, ಡಾ. ವಿನಯ್ ಆಳ್ವ, ಗ್ರೀಷ್ಮಾ ವಿವೇಕ್ ಆಳ್ವ, ಹನ್ನಾ ವಿನಯ್ ಆಳ್ವ, ನಿಕಟಪೂರ್ವ ಸಿಂಡಿಕೇಟ್ ಸದಸ್ಯ ಡಾ. ಶಿವಶರಣ್ ಶೆಟ್ಟಿ, ಸೆನೆಟ್ ಸದಸ್ಯೆ ಡಾ. ವೈಶಾಲಿ ಶ್ರೀಜಿತ್, ಉದ್ಯಮಿಗಳಾದ ಶ್ರೀಪತಿ ಭಟ್, ರವೀಂದ್ರನಾಥ ಆಳ್ವ, ಮಂಜರಿ ಪ್ರವೀಣ್ ಸಲ್ದಾನ, ಎಂ.ಬಿ. ಪುರಾಣಿಕ್, ಡಾ. ಎಂ.ಎಸ್. ಆಳ್ವ, ರಾಮಚಂದ್ರ ಶೆಟ್ಟಿ ಹಾಗೂ ಶ್ರೀನಿವಾಸ ಆಳ್ವ ಸೇರಿದಂತೆ ಹಲವಾರು ಪ್ರಮುಖರು ವೇದಿಕೆಯಲ್ಲಿದ್ದರು.———–ಬಾಕ್ಸ್ವೈದ್ಯಕೀಯ ಶಿಕ್ಷಣ ಜತೆಗೆ ಮಾನವೀಯ ಮೌಲ್ಯ ಬೆಳೆಸುವುದು ನಮ್ಮ ಮುಖ್ಯ ಗುರಿ: ಡಾ.ಎಂ. ಮೋಹನ್ ಆಳ್ವವೈದ್ಯಕೀಯ ಶಿಕ್ಷಣ ಪಡೆಯಲು ಬರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೇವಲ ಪಠ್ಯ ಕೌಶಲ ಮಾತ್ರವಲ್ಲದೆ, ಅವರಲ್ಲಿ ಮಾನವೀಯತೆ, ಕರುಣೆ, ಸೇವಾಭಾವನೆ ಹಾಗೂ ಜೀವಕಲೆಯನ್ನು ಬೆಳೆಸುವುದು ಸಂಸ್ಥೆಯ ಮುಖ್ಯ ಕರ್ತವ್ಯವಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಹೇಳಿದರು.ಸಮಾರಂಭದಲ್ಲಿ ಮಾತನಾಡಿದ ಅವರು, ತಮ್ಮ ಜೀವನಕ್ಕೆ ತಿರುವು ನೀಡಿದ ಮಾರ್ಗದರ್ಶಕರು ಹಾಗೂ ವೈದ್ಯಕೀಯ ರಂಗದಲ್ಲಿ ಅಪಾರ ಕೊಡುಗೆ ನೀಡಿದ ಹಿರಿಯ ವೈದ್ಯರನ್ನು ಗೌರವಿಸುವ ನಿಟ್ಟಿನಲ್ಲಿ ನೂತನ ಮೆಡಿಕಲ್ ಕಾಲೇಜಿನ ವಿವಿಧ ವಿಭಾಗಗಳಿಗೆ ಅವರ ಹೆಸರುಗಳನ್ನು ಇರಿಸಲಾಗಿದೆ ಎಂದು ಹೇಳಿದರು.ಸೇವಾ ಕಾರ್ಯಗಳು:೪೦ ಎಕರೆ ವಿಸ್ತೀರ್ಣದ ಈ ಮೆಡಿಕಲ್ ಕಾಲೇಜು ಆವರಣದಲ್ಲಿ ಸಮಾಜದ ಬಡ ಮತ್ತು ಅಗತ್ಯವಿರುವ ಜನರಿಗಾಗಿ ಹಲವು ಸಮಾಜಮುಖಿ ಯೋಜನೆಗಳನ್ನು ರೂಪಿಸಲಾಗಿದೆ. ವೃದ್ಧಾಪ್ಯ ಆರೋಗ್ಯ ಕೇಂದ್ರ, ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಹಾಗೂ ಹಾಸಿಗೆ ಹಿಡಿದ ರೋಗಿಗಳಿಗೆ ಶ್ರದ್ಧೆ ಮತ್ತು ನೆಮ್ಮದಿಯ ಸೇವೆಯನ್ನು ನೀಡುವ ಹ್ಯಾಪ್ಪಿಡೆತ್ ವಿಭಾಗ ತೆರೆಯಲು ಉದ್ದೇಶಿಸಲಾಗಿದೆ. ಅಲ್ಲದೆ, ಕಡಿಮೆ ಶುಲ್ಕದಲ್ಲಿ ಸುಸಜ್ಜಿತ ಡಯಾಲಿಸಿಸ್ ಕೇಂದ್ರ ನಿರ್ಮಾಣ, ಬಡ ತಾಯಂದಿರಿಗೆ ಕೈಗೆಟುಕುವ ವೆಚ್ಚದಲ್ಲಿ ಹೆರಿಗೆ ಹಾಗೂ ಗರ್ಭಿಣಿ ಆರೈಕೆ ವಿಭಾಗ ತೆರೆಯಲಾಗುವುದು ಎಂದು ಡಾ.ಆಳ್ವ ಹೇಳಿದರು.

LEAVE A REPLY

Please enter your comment!
Please enter your name here