ಅಧಿಕಾರಿಗಳ ಗೈರು: ಶಿರ್ಲಾಲು ವಿಶೇಷ ಗ್ರಾಮಸಭೆಯಲ್ಲಿ ಆಕ್ರೋಶ

0

ಶಿರ್ಲಾಲು: ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶಗಳ ಘೋಷಣೆ ಕುರಿತು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಹೊರಡಿಸಿರುವ ಕಸ್ತೂರಿ ರಂಗನ್ ವರದಿಯ ಕರಡು ಅಧಿಸೂಚನೆ ವಿರುದ್ಧ ಆಯೋಜಿಸಿದ್ದ ವಿಶೇಷ ಗ್ರಾಮಸಭೆಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸೇರಿದಂತೆ ಯಾವುದೇ ಇಲಾಖೆಯ ಅಧಿಕಾರಿಗಳು ಹಾಜರಾಗದ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತವಾದ ಘಟನೆ ಸೆ.21 ರಂದು ಶಿರ್ಲಾಲಿನಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳ ಸೂಚನೆಯಂತೆ ತಾಲೂಕಿನ ಕಸ್ತೂರಿ ರಂಗನ್ ವರದಿ ಬಾಧಿತ ಗ್ರಾಮ ಪಂಚಾಯತ್‌ಗಳಲ್ಲಿ ವಿಶೇಷ ಗ್ರಾಮಸಭೆ ನಡೆಸಲು ಆದೇಶ ನೀಡಲಾಗಿತ್ತು. ಅದರಂತೆ ಶಿರ್ಲಾಲು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ವಿಶೇಷ ಗ್ರಾಮಸಭೆ ಆಯೋಜಿಸಲಾಗಿತ್ತು.ಬೆಳಿಗ್ಗೆ 10 ಗಂಟೆಗೆ ನೂರಾರು ಸಂತ್ರಸ್ತರು ಗ್ರಾಮ ಪಂಚಾಯತ್‌ನಲ್ಲಿ ಜಮಾಯಿಸಿದ್ದರು. ಆದರೆ ಮಧ್ಯಾಹ್ನ 12 ಗಂಟೆಯಾದರೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸೇರಿದಂತೆ ಒಬ್ಬನೇ ಒಬ್ಬ ಅಧಿಕಾರಿಯೂ ಸಭೆಗೆ ಹಾಜರಾಗಿಲ್ಲ. ಇದರಿಂದ ಆತಂಕಗೊಂಡ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.ಅಲ್ಲದೆ, ಸಭೆ ನಿಗದಿಯಾಗಿದ್ದ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಬೇರೆ ಕಾರ್ಯಕ್ರಮ ನಡೆಯುತ್ತಿದ್ದ ಕಾರಣ ಜನರು ಬಿಸಿಲಿನಲ್ಲಿ ಪಂಚಾಯತ್ ಎದುರು ನಿಲ್ಲುವಂತಾಗಿದೆ.

ಆಕ್ರೋಶಿತ ಜನರು ಪಂಚಾಯತ್ ಕಚೇರಿ ಎದುರೇ ಕುಳಿತು ಪ್ರತಿಭಟನೆ ನಡೆಸಿದರು.ಈ ಬಗ್ಗೆ ಮಾಹಿತಿ ತಿಳಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರು ತಕ್ಷಣ ಸ್ಪಂದಿಸಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ, ಕಸ್ತೂರಿ ರಂಗನ್ ವಿಶೇಷ ಗ್ರಾಮಸಭೆಗೆ ನಿರ್ಲಕ್ಷ್ಯ ತೋರಿದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here