






ಶಿಶಿಲ: ಅರಸಿನಮಕ್ಕಿಯಿಂದ ಶಿಶಿಲ ಸಂಪರ್ಕಿಸುವ ರಾಜ್ಯ ರಸ್ತೆಯ ಬದಿಯಲ್ಲಿ ಅಪಾಯಕಾರಿ ರೀತಿಯಲ್ಲಿ ವಿದ್ಯುತ್ ಕಂಬಗಳು ನಿಂತಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರ ಜೀವಕ್ಕೆ ಅಪಾಯ ತಂದೊಡ್ಡುವಂತಾಗಿದೆ.
ಈಗಾಗಲೇ ಈ ರಸ್ತೆಯಲ್ಲಿ ಮೂರು ಅಪಘಾತಗಳು ಸಂಭವಿಸಿದ್ದರೂ ಸಂಬಂಧಪಟ್ಟ ಮೆಸ್ಕಾಂ ಇಲಾಖೆ ಇನ್ನೂ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.ಸುಮಾರು ಆರು ವರ್ಷಗಳ ಹಿಂದೆ ಶಾಸಕ ಹರೀಶ್ ಪೂಂಜ ಅವರ ಮುತುವರ್ಜಿಯಿಂದ ಈ ರಸ್ತೆ ಜಿಲ್ಲಾ ಪಂಚಾಯತ್ ರಸ್ತೆಯಿಂದ ರಾಜ್ಯ ರಸ್ತೆಯಾಗಿ ಮೇಲ್ದರ್ಜೆಗೇರಿತ್ತು. ಶ್ರೀ ಶಿಶಿಲೇಶ್ವರ ದೇವಸ್ಥಾನಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಹಾಗೂ ಪ್ರವಾಸಿಗರು ಆಗಮಿಸುವುದರಿಂದ, ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುವ ಪ್ರಮುಖ ಸಂಪರ್ಕ ರಸ್ತೆಯಾಗಿದೆ.
ರಸ್ತೆ ಮೇಲ್ದರ್ಜೆಗೇರಿದರೂ ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬಗಳನ್ನು ಮಾತ್ರ ಇದುವರೆಗೆ ಸ್ಥಳಾಂತರಿಸಲಾಗಿಲ್ಲ. ರಸ್ತೆ ಅಗಲೀಕರಣ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುವ ರೀತಿಯಲ್ಲಿ ಕೆಲವು ಕಂಬಗಳು ನಿಂತಿರುವುದರಿಂದ, ಯಾವುದೇ ಸಂದರ್ಭದಲ್ಲಿ ಅಪಘಾತ ಸಂಭವಿಸುವ ಆತಂಕ ಸಾರ್ವಜನಿಕರಲ್ಲಿ ಮೂಡಿದೆ.ಈ ಸಮಸ್ಯೆಯ ಕುರಿತು ಹಲವು ವರ್ಷಗಳಿಂದ ಗ್ರಾಮಸಭೆ ಹಾಗೂ ಜನಸಂಪರ್ಕ ಸಭೆಗಳಲ್ಲಿ ಸಾರ್ವಜನಿಕರು ನಿರಂತರವಾಗಿ ಧ್ವನಿ ಎತ್ತಿದ್ದಾರೆ.
ಸಾರ್ವಜನಿಕ ಹಿತದೃಷ್ಟಿಯಿಂದ ಕೆಲವರು ವೈಯಕ್ತಿಕವಾಗಿಯೂ ಮೆಸ್ಕಾಂ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ. ಆದರೂ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತಿಲ್ಲ.ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಲು ಅನುದಾನದ ಕೊರತೆಯೇ ಕಾರಣವೇ? ಅಥವಾ ಅಧಿಕಾರಿಗಳ ನಿರ್ಲಕ್ಷ್ಯವೇ? ಎಂಬ ಪ್ರಶ್ನೆ ಇದೀಗ ಸಾರ್ವಜನಿಕರಲ್ಲಿ ಮೂಡಿದೆ. ಅನುದಾನದ ಸಮಸ್ಯೆಯಿದ್ದರೆ ಅದನ್ನು ಸರ್ಕಾರದ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳುವುದು ಸಂಬಂಧಪಟ್ಟ ಇಲಾಖೆಯ ಜವಾಬ್ದಾರಿಯಲ್ಲವೇ ಎಂಬ ಪ್ರಶ್ನೆಯೂ ಎದುರಾಗಿದೆ.ಈಗಾಗಲೇ ಮೂರು ಅಪಘಾತಗಳು ಸಂಭವಿಸಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತದೆ. ಮತ್ತೊಂದು ದೊಡ್ಡ ಅನಾಹುತ ಸಂಭವಿಸುವವರೆಗೆ ಇಲಾಖೆ ಕಾಯುತ್ತಿದೆಯೇ ಎಂಬ ಆಕ್ರೋಶವೂ ಸಾರ್ವಜನಿಕರಿಂದ ವ್ಯಕ್ತವಾಗಿದೆ.


ಇನ್ನೊಂದು ಗಮನಾರ್ಹ ವಿಚಾರವೆಂದರೆ, ಸಂಬಂಧಪಟ್ಟ ಇಲಾಖೆಯ ಮುಖ್ಯ ಅಧಿಕಾರಿಯೇ ಮೂರು ಗ್ರಾಮ ಪಂಚಾಯಿತಿಗಳ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ತಮ್ಮ ಕಾರ್ಯನಿರ್ವಹಣೆಯ ಸಂದರ್ಭದಲ್ಲಿ ಇದೇ ರಸ್ತೆಯಲ್ಲಿ ಸಂಚರಿಸುತ್ತಾರೆ. ರಸ್ತೆ ಬದಿಯ ಅಪಾಯಕಾರಿ ವಿದ್ಯುತ್ ಕಂಬಗಳನ್ನು ಕಣ್ಣಾರೆ ಕಂಡಿದ್ದರೂ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.ಅಪಘಾತದ ಬಳಿಕ ಪರಿಹಾರ ಹುಡುಕುವುದಕ್ಕಿಂತ ಮುನ್ನೆಚ್ಚರಿಕೆ ಅಗತ್ಯಜನರ ಜೀವಕ್ಕೆ ಅಪಾಯ ಉಂಟಾದ ಬಳಿಕ ಪರಿಹಾರ ಹುಡುಕುವುದಕ್ಕಿಂತ, ಅಪಘಾತ ಸಂಭವಿಸುವ ಮುನ್ನವೇ ಅಪಾಯಕಾರಿ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವುದು ಸಂಬಂಧಪಟ್ಟ ಇಲಾಖೆಗಳ ಜವಾಬ್ದಾರಿಯಾಗಿದೆ.
ಆದ್ದರಿಂದ ಮೆಸ್ಕಾಂ, ಲೋಕೋಪಯೋಗಿ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ, ರಸ್ತೆ ಬದಿಯಲ್ಲಿರುವ ಅಪಾಯಕಾರಿ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಜನರ ಹಲವು ವರ್ಷಗಳ ಬೇಡಿಕೆಯನ್ನು ಇನ್ನೂ ನಿರ್ಲಕ್ಷಿಸಿದರೆ, ಮುಂದೆ ಸಂಭವಿಸುವ ಯಾವುದೇ ಅನಾಹುತಕ್ಕೆ ಯಾರು ಹೊಣೆ ಎಂಬ ಪ್ರಶ್ನೆಗೆ ಸಂಬಂಧಪಟ್ಟ ಅಧಿಕಾರಿಗಳೇ ಉತ್ತರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ.ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು, ಸಾರ್ವಜನಿಕರ ಜೀವಕ್ಕೆ ಅಪಾಯವಾಗುವ ಪರಿಸ್ಥಿತಿ ಮುಂದುವರಿಯದಂತೆ ತಕ್ಷಣ ಕ್ರಮ ಕೈಗೊಳ್ಳಬೇಕಾಗಿದೆ.









