






ಮಡಂತ್ಯಾರು : ಮಡಂತ್ಯಾರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ನೇತೃತ್ವದಲ್ಲಿ ಜರುಗಿದ 44ನೇ ವರ್ಷದ ಗಣೇಶೋತ್ಸವದ ಸಮಾರೋಪ ಸಮಾರಂಭವು ವಿಜೃಂಭಣೆಯಿಂದ ನೆರವೇರಿತು.
ಸಮಾರೋಪ ಸಮಾರಂಭದ ಧಾರ್ಮಿಕ ಉಪನ್ಯಾಸಕರಾಗಿ ಆಗಮಿಸಿದ್ದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸಿವಿಲ್ ವಿಭಾಗದ ಮುಖ್ಯಸ್ಥರು ಹಾಗೂ ದೈವ ನರ್ತಕರಾದ ಡಾ. ರವೀಶ್ ಪಡುಮಲೆ ಮಾತನಾಡಿ, “ನಮ್ಮ ಮಕ್ಕಳಿಗೆ ಧರ್ಮ ಶಿಕ್ಷಣವನ್ನು ಮನೆಯಿಂದಲೇ ಕೊಡುವಂತಾಗಬೇಕು. ಅಧರ್ಮಗಳನ್ನು ಮೆಟ್ಟಿ ನಿಲ್ಲುವ ಗಟ್ಟಿಗತಿ ನಮ್ಮ ಮಕ್ಕಳಲ್ಲಿ ಮೂಡಿಬರಬೇಕು. ಜಾತಿ ಭೇದ ಮರೆತು ನಾವೆಲ್ಲರೂ ಒಂದಾಗಿ ಇಂತಹ ಹಬ್ಬಗಳನ್ನು ಆಚರಿಸೋಣ” ಎಂದು ಕರೆ ನೀಡಿದರು.
ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪುನೀತ್ ಕುಮಾರ್ ಮಡಂತ್ಯಾರ್ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ವೇದಿಕೆಯಲ್ಲಿ ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿ ನವೀನ್ ಕುಮಾರ್ ಕೊಡ್ಲಕ್ಕೆ ಉಪಸ್ಥಿತರಿದ್ದರು.ಕಾಂತಪ್ಪ ಗೌಡ ಪ್ರಸ್ತಾವಿಕವಾಗಿ ಮಾತನಾಡಿದರು. ವೀರೇಂದ್ರ ಕುಮಾರ್ ಸ್ವಾಗತಿಸಿದರು, ನವೀನ್ ಕುಮಾರ್ ಕೊಡ್ಲಕ್ಕೆ ವಂದಿಸಿದರು ಹಾಗೂ ತುಳಸಿದಾಸ್ ಪೈ ಕಾರ್ಯಕ್ರಮವನ್ನು ನಿರೂಪಿಸಿದರು.


ಕುಕ್ಕಿಲ ಅನಂತ ಕೃಷ್ಣ ಭಟ್ ಇವರ ಪೌರೋಹಿತ್ಯದಲ್ಲಿ ಸೆಪ್ಟೆಂಬರ್ 14ರಂದು ಮಹಾಗಣಪತಿಯ ಪ್ರತಿಷ್ಠೆ ನಡೆಯಿತು. ನಾಲ್ಕು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ನಿತ್ಯ ಅನ್ನಸಂತರ್ಪಣೆಯು ವಿಜೃಂಭಣೆಯಿಂದ ಜರುಗಿತು.
ಸೆಪ್ಟೆಂಬರ್ 17ರಂದು ಭಜನೆ, ಚೆಂಡೆ ಮೇಳ, ಟ್ಯಾಬ್ಲೋ, ಕೀಳು ಕುದುರೆ ಮತ್ತು ಸುಡುಮದ್ದು ಪ್ರದರ್ಶನದೊಂದಿಗೆ ಭವ್ಯ ಮೆರವಣಿಗೆ ನಡೆದು, ಪೂಂಜಾಲಕಟ್ಟೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಕೆರೆಯಲ್ಲಿ ಗಣೇಶ ಮೂರ್ತಿಯ ಜಲಸ್ತಂಭನ (ವಿಸರ್ಜನೆ) ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷರಾದ ಸಂಜೀವ ಶೆಟ್ಟಿ ಮುಗೆರೋಡಿ, ಅಧ್ಯಕ್ಷರಾದ ಪುನೀತ್ ಕುಮಾರ್ ಮಡಂತ್ಯಾರ್, ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್ ಕೊಡ್ಲಕ್ಕೆ, ಕೋಶಾಧಿಕಾರಿ ಧರ್ಣಪ್ಪ ಗೌಡ ಹಟ್ಟತೋಡಿ, ಜೊತೆ ಕಾರ್ಯದರ್ಶಿ ಸಂಗೀತ ಶೆಟ್ಟಿ ಬ್ರಹ್ಮಗಿರಿ, ಉಪಾಧ್ಯಕ್ಷ ಸಂಜಿತ್ ಶೆಟ್ಟಿ ಮುಗೆರೋಡಿ ಹಾಗೂ ಸಮಿತಿಯ ಮಾಜಿ ಅಧ್ಯಕ್ಷರು, ಗೌರವ ಸಲಹೆಗಾರರು, ಸರ್ವ ಸದಸ್ಯರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.









