






ಉಜಿರೆ, ಸೆ. 10: ವಿದ್ಯಾರ್ಥಿ ಜೀವನದಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳ ಅನುಭವವೂ ಸಮಾನವಾದ ಅಗತ್ಯವಾಗಿದೆ.
ಹಾಗಾಗಿ ಕೌಶಲಾಧಾರಿತ ಶಿಕ್ಷಣ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುವುದರ ಮೂಲಕ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಎಸ್ಡಿಎಂ ಆರೋಹಮ್-2026 ವಿದ್ಯಾರ್ಥಿಗಳಲ್ಲಿರುವ ಸೃಜನಶೀಲತೆ ಹಾಗೂ ಹೊಸತನದ ಚಿಂತನೆಯನ್ನು ಹೊರತರುವ ಪರಿಣಾಮಕಾರಿ ವೇದಿಕೆಯಾಗಿದೆ ಎಂದು ಬೆಂಗಳೂರಿನ ಕ್ಷೇಮವನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರದ್ಧಾ ಅಮಿತ್ ಹೇಳಿದರು.

ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ‘ಎಸ್.ಡಿ.ಎಂ ಆರೋಹಂ – 2026’ ಎರಡು ದಿನಗಳ ರಾಷ್ಟ್ರೀಯ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಹಬ್ಬವನ್ನು ಸಾಂಪ್ರದಾಯಿಕವಾಗಿ ಡೋಲು ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಈ ರೀತಿಯ ಶೈಕ್ಷಣಿಕ ಹಬ್ಬಗಳು ವಿದ್ಯಾರ್ಥಿಗಳ ಸೃಜನಶೀಲ ಚಿಂತನೆಗೆ ವೇದಿಕೆಯಾಗುತ್ತದೆ. ವಿದ್ಯಾರ್ಥಿಗಳು ತಮ್ಮ ತಮ್ಮ ಆಸಕ್ತ ಕ್ಷೇತ್ರಗಳಲ್ಲಿ ಕ್ರಿಯಾತ್ಮಕತೆಯನ್ನು ಮೈಗೂಡಿಸಿಕೊಳ್ಳಬೇಕು. ಶೈಕ್ಷಣಿಕ ಜೀವನದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಜತೆಗೆ ಕಲೆ, ಸಾಹಿತ್ಯ ಹಾಗೂ ನಮ್ಮ ಸಂಸ್ಕೃತಿಯ ಅರಿವು ಕೂಡ ಬಹಳ ಮುಖ್ಯ. ಈ ಉದ್ದೇಶವನ್ನು “ಎಸ್ಡಿಎಂ ಆರೋಹಂ 2026” ಯಶಸ್ವಿಯಾಗಿ ಸಾಕಾರಗೊಳಿಸಲಿ ಎಂದು ಶುಭ ಹಾರೈಸಿದರು.

ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ವಿಶಿಷ್ಟ ಪ್ರತಿಭೆ ಅಡಗಿರುತ್ತದೆ. ಆ ಪ್ರತಿಭೆಯನ್ನು ಗುರುತಿಸಿ, ಅದಕ್ಕೆ ಸೂಕ್ತ ವೇದಿಕೆ ಕಲ್ಪಿಸುವಲ್ಲಿ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳು ತಮ್ಮ ಸ್ವ-ಸಾಮರ್ಥ್ಯದ ಮೇಲೆ ವಿಶ್ವಾಸವಿಟ್ಟು, ಅದನ್ನು ಸಕಾರಾತ್ಮಕವಾಗಿ ಬಳಸಿಕೊಂಡು ಜೀವನದಲ್ಲಿ ಯಶಸ್ಸಿನ ಗುರಿ ತಲುಪಬೇಕು.ತರಗತಿಯ ನಾಲ್ಕು ಗೋಡೆಗಳ ಹೊರಗೆ ನಡೆಯುವ ಇಂತಹ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅನುಭವ ನೀಡುವುದರ ಜೊತೆಗೆ, ನೈಜ ಜೀವನದ ಸವಾಲುಗಳನ್ನು ಎದುರಿಸಲು ಅಗತ್ಯವಾದ ಆತ್ಮವಿಶ್ವಾಸ ಮತ್ತು ಕೌಶಲಗಳನ್ನು ಬೆಳೆಸುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ಎರಡು ದಿನಗಳ ಈ ಹಬ್ಬದಲ್ಲಿ ಸಕ್ರಿಯವಾಗಿ ಭಾಗವಹಿಸಿ, ತಮ್ಮ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಪ್ರದರ್ಶಿಸುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕಾರ್ಯಕ್ರಮದ ಅಭ್ಯಾಗತರಾಗಿದ್ದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶಚಂದ್ರ ಎಸ್ ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ ಪಿ ವಹಿಸಿದ್ದರು. ವೇದಿಕೆಯಲ್ಲಿ ಉಪಪ್ರಾಂಶುಪಾಲೆ ನಂದಕುಮಾರಿ ಕೆ. ಪಿ ಹಾಗೂ ಆಡಳಿತ ಕುಲಸಚಿವ ಪ್ರೊ ಶ್ರೀಧರ್ ಎನ್ ಭಟ್ಟ, ಪರೀಕ್ಷಾಂಗ ಕುಲಸಚಿವ ಬಿ ಗಣೇಶ್ ನಾಯಕ್, ಡೀನ್ ಗಳು, ವಿಭಾಗ ಮುಖ್ಯಸ್ಥರು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮದ ಜೊತೆಯಲ್ಲಿ ಬಹುಮಾನಗಳ ಅನಾವರಣ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು.ಈವರೆಗೆ ಎಸ್ಡಿಎಂ ಆರೋಹಮ್ 2026 ಭಾಗವಾಗಿ ಎರಡು ದಿನಗಳ ಕಾಲ ನಡೆಯವ ವಿವಿಧ ಸ್ಪರ್ಧೆಗಳಲ್ಲಿ ರಾಜ್ಯಾದಾದ್ಯಂತ 20 ಪಿಯುಸಿ ಕಾಲೇಜುಗಳು ಮತ್ತು 17 ಪದವಿ ಕಾಲೇಜುಗಳು ನೊಂದಾಯಿಸಿಕೊಂಡು ರಾಜ್ಯದ 35 ಕ್ಕೂ ಅಧಿಕ ಕಾಲೇಜುಗಳಿಂದ 1000ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗಿಯಾಗಿದ್ದರು.ಪದವಿ ಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿರುವ ಈ ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಪ್ರವೇಶ ಕಲ್ಪಿಸಲಾಗಿದ್ದು, ಆರೋಹಂ 2026ರಲ್ಲಿ ಪಿಯು ಹಾಗೂ ಪದವಿ ವಿಭಾಗಗಳಿಗೆ ಕಲೆ, ವಿಜ್ಞಾನ, ವಾಣಿಜ್ಯ, ತಂತ್ರಜ್ಞಾನ ಹೀಗೆ ವಿವಿಧ ವಿಷಯಕ್ಕೆ ಸಂಬಂಧಪಟ್ಟ ಒಟ್ಟು 23 ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಒಬ್ಬ ವಿದ್ಯಾರ್ಥಿ ಕೇವಲ ಒಂದು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದ್ದು, ಸ್ಪರ್ಧಾ ವಿಜೇತರಿಗೆ ನಗದು ಬಹುಮಾನ ಸಿಗಲಿದೆ.
ಒಟ್ಟು 1,50,000 ನಗದು ಬಹುಮಾನ ಪಡೆಯಬಹುದಾಗಿದೆ.ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ವೈದೇಹಿ ಮತ್ತು ತಂಡದವರು ಪ್ರಾರ್ಥಿಸಿದರು. ಕನ್ನಡ ಪ್ರಾಧ್ಯಾಪಕ ಡಾ. ದಿವಾಕರ್ ಸ್ವಾಗತಿಸಿ, ವಂದಿಸಿ ಹಾಗೂ ಕಾರ್ಯಕ್ರಮ ನಿರೂಪಿಸಿದರು.
” ಎಸ್.ಡಿ.ಎಂ ಸಂಸ್ಥೆ ವಿದ್ಯಾರ್ಥಿಗಳ ಉತ್ತಮ ಆಯ್ಕೆಯಾಗಿದೆ. ಇಲ್ಲಿನ ಮೌಲ್ಯಯುತ ಶಿಕ್ಷಣ ಮತ್ತು ಸಂಸ್ಕಾರ ಎಲ್ಲವು ಭಿನ್ನ ಮತ್ತು ವಿಶೇಷ. ಸಂಸ್ಥೆಯೂ ಈಗಾಗಲೇ ನೂರಾರು ಸಾಧಕರನ್ನು ಸಮಾಜಕ್ಕೆ ನೀಡಿದೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಾಗಿ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಇಲ್ಲಿ ಕಲ್ಪಿಸಿಕೊಡಲಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಆರೋಹಂ ನಂತಹ ರಾಷ್ಟ್ರೀಯ ಮಟ್ಟದ ಶೈಕ್ಷಣಿಕ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಬಹುಮುಖ ಪ್ರತಿಭೆಗಳಿಗೆ ವೇದಿಕೆಯಾಗುವುದರ ಜೊತೆಗೆ ಜೀವನ ಶಿಕ್ಷಣವನ್ನು ಪಡೆದುಕೊಳ್ಳಲು ಸಹಕಾರಿಯಾಗಿದೆ. ”
– ಡಾ. ಸತೀಶ್ಚಂದ್ರ ಎಸ್ ಕಾರ್ಯದರ್ಶಿಗಳು, ಎಸ್.ಡಿ.ಎಂ ಶಿಕ್ಷಣ ಸಂಸ್ಥೆ









