ಅರಸಿನಮಕ್ಕಿಯಲ್ಲಿ ಎಸ್‌ಐಆರ್ ತಿದ್ದುಪಡಿಗೆ 4 ಗ್ರಾಮಗಳ ಜನರಿಗೆ ಆಹ್ವಾನ,-ನೂರಾರು ಮಂದಿ ಆಗಮನ; ಕೈಕೊಟ್ಟ ಸರ್ವರ್-ಅಧಿಕಾರಿಗಳ ವಿರುದ್ಧ ಆಕ್ರೋಶ

0

ಅರಸಿನಮಕ್ಕಿ: ಎಸ್‌ಐಆರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ವಿವಿಧ ತಿದ್ದುಪಡಿಗಳನ್ನು ಮಾಡಿಸಿಕೊಳ್ಳಲು ಅರಸಿನಮಕ್ಕಿ ಗ್ರಾಮ ಪಂಚಾಯತ್‌ನಲ್ಲಿ ಸೆ.9ರಂದು ಆಯೋಜಿಸಿದ್ದ ಕಾರ್ಯಕ್ಕೆ ನಾಲ್ಕು ಗ್ರಾಮಗಳ ಜನರನ್ನು ಏಕಕಾಲದಲ್ಲಿ ಆಹ್ವಾನಿಸಿದ್ದರಿಂದ ನೂರಾರು ಮಂದಿ ಆಗಮಿಸಿ ಸರ್ವರ್ ಕೈಕೊಟ್ಟ ಪರಿಣಾಮ ತಿದ್ದುಪಡಿ ಕಾರ್ಯಕ್ಕೆ ಅಡ್ಡಿಯಾಯಿತು.

ಆಡಳಿತಾಧಿಕಾರಿ ಭರತ್ ಕುಮಾರ್ ಎಲ್. ಅವರ ಸೂಚನೆಯಂತೆ ಶಿಶಿಲ, ಶಿಬಾಜೆ, ಹತ್ಯಡ್ಕ ಹಾಗೂ ರೆಖ್ಯ ಗ್ರಾಮಗಳ ವ್ಯಾಪ್ತಿಯ ಜನರನ್ನು ತಿದ್ದುಪಡಿ ಕಾರ್ಯಕ್ಕಾಗಿ ಅರಸಿನಮಕ್ಕಿ ಗ್ರಾಮ ಪಂಚಾಯತ್‌ ಕಚೇರಿಗೆ ಕರೆಯಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರಿಂದ ಪಂಚಾಯತ್ ಆವರಣದಲ್ಲಿ ಜನಜಂಗುಳಿ ಕಂಡುಬಂತು.ಈ ನಡುವೆ ಸರ್ವರ್ ಸಮಸ್ಯೆ ಉಂಟಾಗಿ ಆನ್‌ಲೈನ್‌ ತಿದ್ದುಪಡಿ ಪ್ರಕ್ರಿಯೆ ಸ್ಥಗಿತಗೊಂಡಿದ್ದರಿಂದ ಹಲವು ಮಂದಿ ತಮ್ಮ ಕೆಲಸ ಪೂರ್ಣಗೊಳ್ಳದೆ ಪರದಾಡುವಂತಾಯಿತು. ದೂರದ ಗ್ರಾಮಗಳಿಂದ ಆಗಮಿಸಿದ್ದ ಜನರು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.

ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ನಾಲ್ಕು ಗ್ರಾಮಗಳ ನೂರಾರು ಮಂದಿಯನ್ನು ಒಂದೇ ದಿನ, ಒಂದೇ ಸ್ಥಳಕ್ಕೆ ಏಕಕಾಲದಲ್ಲಿ ಕರೆಸುವ ಅಗತ್ಯವೇನಿತ್ತು. ಪ್ರತಿ ಗ್ರಾಮಕ್ಕೆ ಪ್ರತ್ಯೇಕ ದಿನ ನಿಗದಿಪಡಿಸಿ ತಿದ್ದುಪಡಿ ಕಾರ್ಯ ನಡೆಸಬಹುದಿತ್ತಲ್ಲವೇ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆಗಳು ಮರುಕಳಿಸದಂತೆ ಗ್ರಾಮವಾರು ಪ್ರತ್ಯೇಕ ದಿನಗಳಲ್ಲಿ ತಿದ್ದುಪಡಿ ಕಾರ್ಯ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.

LEAVE A REPLY

Please enter your comment!
Please enter your name here