






ಬೆಳ್ತಂಗಡಿ: ಮೂಲ ಸೌಕರ್ಯಗಳಿಂದ ವಂಚಿತವಾಗಿ, ಹಳ್ಳಿಯ ಕೃಷಿಕರು ಹಾಗೂ ಬಡ ಕುಟುಂಬಗಳು ಅಭಿವೃದ್ಧಿಯಿಲ್ಲದೆ ಕಂಗಾಲಾಗಿದ್ದ ಒಳನಾಡಿನ ಕುಗ್ರಾಮ ದಿಡುಪೆಯನ್ನು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಅಕ್ಷರಶಃ ‘ಸುಗ್ರಾಮ’ವನ್ನಾಗಿ ಪರಿವರ್ತಿಸಿದೆ ಎಂದು ಧರ್ಮಸ್ಥಳ ಯೋಜನೆಯ ವಿಸ್ಕಾಂತ ಪ್ರಾದೇಶಿಕ ನಿರ್ದೇಶಕ ಹಾಗೂ ಕರ್ನಾಟಕ ವಿಶ್ವ ಹಿಂದೂ ಪರಿಷತ್ತಿನ ದಕ್ಷಿಣ ಪ್ರಾಂತ ಧರ್ಮ ಪ್ರಸಾರ ಪ್ರಮುಖ್ ಬಿ. ಜಯರಾಮ ನೆಲ್ಲಿತ್ತಾಯ ಅಭಿಪ್ರಾಯಪಟ್ಟಿದ್ದಾರೆ.

ಮಲವಂತಿಗೆ ಗ್ರಾಮದ ದಿಡುಪೆಯಲ್ಲಿ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯ ಧಾರ್ಮಿಕ ಸಭೆಯಲ್ಲಿ ಧರ್ಮ ಸಂದೇಶ ನೀಡಿ ಅವರು ಮಾತನಾಡಿದರು.
ಯೋಜನೆಯ ಪರಿವರ್ತನೆಯ ಹಾದಿ ಮನೆ ಸರ್ವೇಕ್ಷಣೆ ಹಾಗೂ ಸೌಕರ್ಯ: ಒಂದು ಕಾಲದಲ್ಲಿ ತೀರಾ ಹಿಂದುಳಿದಿದ್ದ ದಿಡುಪೆ ಗ್ರಾಮಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಲಿಟ್ಟ ನಂತರ, ಕಾರ್ಯಕರ್ತರು ಮನೆ-ಮನೆಗೆ ತೆರಳಿ ಸರ್ವೇಕ್ಷಣೆ ನಡೆಸಿ ಬಡ ಕುಟುಂಬಗಳಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಟ್ಟರು.


ಕೃಷಿಕರ ಅನುಕೂಲಕ್ಕಾಗಿ ಅಡಿಕೆ, ತೆಂಗು, ನೀರಾವರಿ ಪೈಪುಗಳು ಹಾಗೂ ಹಂಚು ಮುಂತಾದ ಸಾಮಗ್ರಿಗಳನ್ನು ಒದಗಿಸುವ ಮೂಲಕ ಬಡ ಕುಟುಂಬಗಳ ಆರ್ಥಿಕ ಚೇತನಕ್ಕೆ ಬೆನ್ನೆಲುಬಾಗಿ ನಿಂತಿತು.
ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹಗಲಿರುವೆನ್ನದೆ ಗ್ರಾಮ-ಗ್ರಾಮಗಳಿಗೆ ಸುತ್ತಾಡಿ, ತಮ್ಮ ಅಮೂಲ್ಯ ಸಮಯವನ್ನು ಬಡ ಕುಟುಂಬಗಳ ಅಭಿವೃದ್ಧಿಗೆ ಮೀಸಲಿಟ್ಟಿದ್ದರ ಫಲವಾಗಿ ಇಂದು ಸಾವಿರಾರು ಕುಟುಂಬಗಳು ಪ್ರಗತಿ ಸಾಧಿಸಿವೆ. ಹಿಂದುಳಿದ ಪ್ರದೇಶಗಳ ಅಭಿವೃದ್ಧಿ ಸಂಶೋಧನೆಗೆ ಬೆಳ್ತಂಗಡಿ ತಾಲೂಕಿನ ದಿಡುಪೆ ಗ್ರಾಮ ಉತ್ತಮ ಉದಾಹರಣೆಯಾಗಿದೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಒಕ್ಕೂಟಗಳು ಮತ್ತು ವಿವಿಧ ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಧಾರ್ಮಿಕ ಸಭೆ, ಆಟೋಟ ಸ್ಪರ್ಧೆಗಳು ಹಾಗೂ ವಿವಿಧ ಕ್ರೀಡಾಕೂಟಗಳು ಅತ್ಯಂತ ಅದ್ದೂರಿಯಾಗಿ ಜರುಗಿದವು. ವೇದಿಕೆಯಲ್ಲಿ ಉದ್ಘಾಟಕರಾಗಿ ಶ್ರೀಮತಿ ಡೀಕಮ್ಮ, ಒಕ್ಕೂಟದ ಅಧ್ಯಕ್ಷರಾದ ಶ್ರೀ ಪ್ರವೀಣ್, ಮೇಲ್ವಿಚಾರಕರಾದ ಶ್ರೀಮತಿ ಉಷಾ ಪ್ರಸಾದ್, ಶ್ರೀಮತಿ ಪೂರ್ಣಿಮಾ ಹಾಗೂ ಶ್ರೀ ಕುಶಾಲಪ್ಪ ಉಪಸ್ಥಿತರಿದ್ದರು. ಶ್ರೀ ಕೆಂಪಯ್ಯ ಪ್ರಾರ್ಥನೆ ನೆರವೇರಿಸಿದರು. ಶ್ರೀ ರಮೇಶ್ ವಿದ್ಯಾನಗರ ಸ್ವಾಗತಿಸಿದರೆ, ಶ್ರೀ ಜಯಂತ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿ, ವಂದನಾರ್ ಅರ್ಪಿಸಿದರು.









