ನಾವೂರು: ವರಮಹಾಲಕ್ಷ್ಮೀ ಪೂಜೆಗೆ ಅಡಚಣೆ, ಮನೆಗೆ ಅಕ್ರಮ ಪ್ರವೇಶ, ಕೊಲೆ ಬೆದರಿಕೆ; ಪ್ರತ್ಯೇಕ ಪ್ರಕರಣ ದಾಖಲು

0

ಬೆಳ್ತಂಗಡಿ: ತಾಲೂಕಿನ ನಾವೂರು ಗ್ರಾಮದಲ್ಲಿ ದೇವಸ್ಥಾನದ ಪೂಜಾ ಕಾರ್ಯಕ್ರಮಕ್ಕೆ ಅಡಚಣೆ, ಮನೆಗೆ ಅಕ್ರಮ ಪ್ರವೇಶ, ಅವಾಚ್ಯ ಶಬ್ದಗಳಿಂದ ನಿಂದನೆ ಹಾಗೂ ಜೀವ ಬೆದರಿಕೆ ಹಾಕಿದ ಆರೋಪಗಳಿಗೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರುಗಳು ದಾಖಲಾಗಿವೆ.

ನಾವೂರು ಗ್ರಾಮದ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಪೂಜೆಗೆ ಅಡಚಣೆ ಉಂಟುಮಾಡಿದ ಘಟನೆಗೆ ಸಂಬಂಧಿಸಿದಂತೆ ಎನ್.ಸಿ.ಆರ್. ದಾಖಲಾಗಿದೆ , ಮನೆಗೆ ಅಕ್ರಮ ಪ್ರವೇಶ ಹಾಗೂ ಕೊಲೆ ಬೆದರಿಕೆ ಆರೋಪಕ್ಕೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಎಫ್.ಐ.ಆರ್.ಗಳು ದಾಖಲಾಗಿವೆ.

ವರಮಹಾಲಕ್ಷ್ಮೀ ಪೂಜೆಗೆ ಅಡಚಣೆ: ಆ.28ರಂದು ಮಧ್ಯಾಹ್ನ ಸುಮಾರು 1.30ರ ವೇಳೆಗೆ ನಾವೂರು ಗ್ರಾಮದ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಿವೇದಿತಾ ಮಾತೃಮಂಡಳಿ ವತಿಯಿಂದ ವರಮಹಾಲಕ್ಷ್ಮೀ ಪೂಜೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ರಕ್ಷಿತ್ ಜೈನ್, ಸುರೇಶ್ ಇಂಚರ, ದಿನೇಶ್ ಪ್ರಭು ಹಡಿಲು, ವಾಸು ಶೆಟ್ಟಿಗಾರ ಅಲ್ಲಾಜೆ ಹಾಗೂ ಅರುಣೋದಯ ಗೌಡ ಎಂಬವರು ದೇವಸ್ಥಾನಕ್ಕೆ ಅಕ್ರಮವಾಗಿ ಪ್ರವೇಶಿಸಿ ಪೂಜಾ ಕಾರ್ಯಕ್ರಮಕ್ಕೆ ಅಡಚಣೆ ಉಂಟುಮಾಡಿ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಕುರಿತು ನಿವೇದಿತಾ ಮಾತೃಮಂಡಳಿಯ ಅಧ್ಯಕ್ಷೆ ಜಯಂತಿ ಅವರು ನೀಡಿದ ದೂರಿನ ಮೇರೆಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎನ್.ಸಿ.ಆರ್. (No.26/2026) ದಾಖಲಾಗಿದೆ.

ಮನೆಗೆ ಅಕ್ರಮ ಪ್ರವೇಶ, ನಿಂದನೆ ಹಾಗೂ ಕೊಲೆ ಬೆದರಿಕೆ: ಇನ್ನೊಂದು ಪ್ರಕರಣದಲ್ಲಿ, ಆ.29ರಂದು ಬೆಳಗ್ಗೆ ಸುಮಾರು 7 ಗಂಟೆಗೆ ನಾವೂರು ಗ್ರಾಮದ ಸಂಪಿಂಜ ‘ಸಂಪಿನಜ ಹೌಸ್’ ನಿವಾಸಿ ಪ್ರಿಯಾ ಲಕ್ಷ್ಮಣ್ ಅವರ ಮನೆಗೆ ಸುರೇಶ್ ಪಿ.ಎನ್. (ನೇಮು ಬಂಗೇರ ಇಂಚರ ಹೌಸ್) ಎಂಬಾತ ಅಕ್ರಮವಾಗಿ ಪ್ರವೇಶಿಸಿ ಮನೆಯವರನ್ನು ಅಸಭ್ಯ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಗಿ ದೂರಿನಲ್ಲಿ ಆರೋಪಿಸಲಾಗಿದೆ.ಅದೇ ದಿನ ಮಧ್ಯಾಹ್ನ ಸುಮಾರು 3.30ರ ವೇಳೆಗೆ ದೂರುದಾರರು ತಮ್ಮ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಆರೋಪಿಯು ಕಾರಿಗೆ ಅಡ್ಡಗಟ್ಟಿ, “ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ” ಎಂದು ಕೊಲೆ ಬೆದರಿಕೆ ಹಾಕಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಈ‌ ಹಿಂದೆ ಜಾಗದ ತಕರಾರಿಗೆ ಸಂಬಂಧಿಸಿದಂತೆ ದೂರು ನೀಡಿರುವುದೇ ಈ‌ ಘಟನೆಗೆ ಕಾರಣ ಎಂದು ಪ್ರಿಯಾ ಲಕ್ಷ್ಮಣ್ ಅವರು ನೀಡಿದ ದೂರಿನ ಆಧಾರದ ಮೇಲೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ (Crime No.94/2026) BNS ಸೆಕ್ಷನ್ 331(1), 352, 126(2) ಹಾಗೂ 351(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮನೆ ಬಳಿ ಗಲಾಟೆ; ಗ್ರಾಮ ಪಂಚಾಯತ್ ಬಳಿ ಜೀವ ಬೆದರಿಕೆ ಆರೋಪ: ಮತ್ತೊಂದು ಪ್ರಕರಣದಲ್ಲಿ, ಆ.28ರಂದು ರಾತ್ರಿ ಸುಮಾರು 11 ಗಂಟೆಗೆ ನಾವೂರು ಗ್ರಾಮದ ‘ಲಕ್ಷ್ಮಿ ಕೃಪಾ’ ನಿವಾಸಿ ತುಳಸಿ ಅವರ ಮನೆ ಬಳಿ ರವಿ ಪೂಜಾರಿ ಎಂಬಾತ ಬಂದಿದ್ದು, ದೂರುದಾರರ ಪತಿಯನ್ನು ನಿಂದಿಸಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.

ಇದಾದ ಬಳಿಕ ಆ.29ರಂದು ಬೆಳಗ್ಗೆ ಸುಮಾರು 10.20ರ ವೇಳೆಗೆ ಗ್ರಾಮ ಪಂಚಾಯತ್ ಬಳಿ ಸುರೇಶ್ ಹಾಗೂ ರವಿ ಪೂಜಾರಿ ಸೇರಿ ದೂರುದಾರರ ಪತಿಯನ್ನು ತಡೆದು ನಿಲ್ಲಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.ಈ ಕುರಿತು ತುಳಸಿ ಅವರು ನೀಡಿದ ದೂರಿನ ಮೇರೆಗೆ ರವಿ ಪೂಜಾರಿ ಅವರನ್ನು A1 ಹಾಗೂ ಸುರೇಶ್ ಅವರನ್ನು A2 ಎಂದು ಹೆಸರಿಸಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ (Crime No.95/2026) BNS ಸೆಕ್ಷನ್ 351(2), 126(2), 352 ಹಾಗೂ 3(5) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ನಾವೂರು ಗ್ರಾಮದಲ್ಲಿ ನಡೆದಿರುವ ಈ ಪ್ರತ್ಯೇಕ ಘಟನೆಗಳಿಗೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಒಂದು ಎನ್.ಸಿ.ಆರ್. ಹಾಗೂ ಎರಡು ಎಫ್.ಐ.ಆರ್.ಗಳು ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ‌

LEAVE A REPLY

Please enter your comment!
Please enter your name here