






ಅಳದಂಗಡಿ: ನಾರಾವಿ ವಲಯದ 17 ವಯೋಮಾನದ ಬಾಲಕ ಬಾಲಕಿಯರ ಖೋ-ಖೋ ಪಂದ್ಯಾಟದಲ್ಲಿ ಅಳದಂಗಡಿ ಸರ್ಕಾರಿ ಪ್ರೌಢಶಾಲೆಯ ಬಾಲಕರ ಹಾಗೂ ಬಾಲಕಿಯರ ತಂಡಗಳು ಉತ್ತಮ ಸಾಧನೆ ಮಾಡಿ ಶಾಲೆಗೆ ಕೀರ್ತಿ ತಂದಿವೆ.ಆಗಸ್ಟ್ 28ರಂದು ಅಳದಂಗಡಿಯ ಸೈಂಟ್ ಪೀಟರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ನಾರಾವಿ ವಲಯ ಮಟ್ಟದ ಖೋ-ಖೋ ಪಂದ್ಯಾಟದಲ್ಲಿ ಅಳದಂಗಡಿ ಸರ್ಕಾರಿ ಪ್ರೌಢಶಾಲೆಯ ಬಾಲಕರ ತಂಡ ಪ್ರಥಮ ಸ್ಥಾನ ಹಾಗೂ ಬಾಲಕಿಯರ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದ್ದು, ಎರಡೂ ತಂಡಗಳು ತಾಲ್ಲೂಕು ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿವೆ.ಪಂದ್ಯಾಟದಲ್ಲಿ ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಾದ ಮನ್ವಿತ್ ಕುಲಾಲ್ ಅವರು ಬೆಸ್ಟ್ ಆಲ್ ರೌಂಡರ್, ಶ್ರವಂತ್ ಅವರು ಬೆಸ್ಟ್ ಚೇಸರ್ ಹಾಗೂ ಅನ್ವಿತಾ ಅವರು ಬೆಸ್ಟ್ ಚೇಸರ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.


ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಶಾಂತಿ ಮರಿಯಾ ಸಲ್ದಾನ, ದೈಹಿಕ ಶಿಕ್ಷಕ ಶೇಖರ್.ಎನ್, ಶಿಕ್ಷಕ ವೃಂದ, ತರಬೇತುದಾರರು ಹಾಗೂ ಶಾಲಾಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರು ಮತ್ತು ಪದಾಧಿಕಾರಿಗಳು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಮತ್ತು ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ತರಬೇತಿ ನೀಡಿದ ದೈಹಿಕ ಶಿಕ್ಷಕರು, ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ, ತರಬೇತುದಾರರು ಹಾಗೂ ಶಾಲಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳಿಗೆ ಶಾಲೆಯ ಪರವಾಗಿ ಕೃತಜ್ಞತೆ ಸಲ್ಲಿಸಲಾಗಿದೆ.ಸೆಪ್ಟೆಂಬರ್ 15ರಂದು ಅಳದಂಗಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲ್ಲೂಕು ಮಟ್ಟದ ಖೋ-ಖೋ ಪಂದ್ಯಾಟ ನಡೆಯಲಿದ್ದು, ಶಾಲೆಯ ಎರಡೂ ತಂಡಗಳು ಉತ್ತಮ ಪ್ರದರ್ಶನ ನೀಡಿ ಮತ್ತಷ್ಟು ಯಶಸ್ಸು ಸಾಧಿಸುವ ನಿರೀಕ್ಷೆ ಮೂಡಿಸಿದೆ.









