






ಬೆಳ್ತಂಗಡಿ: ತಾಲೂಕಿನ ತೆಕ್ಕಾರು ಗ್ರಾಮದ ಬಜಾರು ಬೈಲುಮೇಲು ಹಾಗೂ ಕೋಡಿಬೊಟ್ಟು ಬೈಲುಮೇಲು ಭಾಗದಲ್ಲಿ ನಡೆದ ಜಮೀನು ವಿವಾದ, ಮಸೀದಿ ತೋಟದ ನೀರಿನ ಪೈಪ್‌ಲೈನ್ ಹಾನಿ ಹಾಗೂ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ 5 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ಬಜಾರು ಬೈಲುಮೇಲು ಮನೆಯ ಸುಲೈಮಾನ್ (45) ನೀಡಿದ ದೂರಿನ ಪ್ರಕಾರ, ಆ.25 ರಂದು ಮಂಗಳವಾರ ಮಧ್ಯಾಹ್ನ 3.00 ರಿಂದ 3.05 ರ ಸುಮಾರಿಗೆ ತೆಕ್ಕಾರು ಗ್ರಾಮದ ವಾರ್ಡ್ ನಂ.3 ರ ಬಜಾರು ಬಳಿ ಈ ಘಟನೆ ನಡೆದಿದೆ. ದೂರುದಾರರು ರಾತ್ರಿ ಅಸ್ವಸ್ಥರಾಗಿದ್ದ ಕಾರಣ ಆ.27 ರಂದು ಬೆಳಿಗ್ಗೆ 11.30 ಕ್ಕೆ ತಡವಾಗಿ ಲಿಖಿತ ದೂರುನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.


ಕೋಡಿಬೊಟ್ಟು ಬೈಲುಮೇಲಿನ ಮಸೀದಿಗೆ ಸೇರಿದ ಕೃಷಿ ತೋಟಕ್ಕೆ ನೀರು ಸರಬರಾಜು ಮಾಡುವ ಮುಖ್ಯ ಪೈಪ್‌ಲೈನ್ ಅನ್ನು ಉದ್ದೇಶಪೂರ್ವಕವಾಗಿ ಕಡಿದು ಹಾನಿ ಮಾಡಲಾಗಿದೆ. ಇದರಿಂದ ಬೆಳೆಗಳಿಗೆ ನೀರಿಲ್ಲದೆ ಸಾವಿರಾರು ರೂಪಾಯಿ ನಷ್ಟವಾಗುವ ಸಾಧ್ಯತೆ ಇದೆ ಎಂದು ಮಸೀದಿ ಸಮಿತಿ ಆರೋಪಿಸಿದೆ. ಅದೇ ಸ್ಥಳದ ಸಮೀಪದಲ್ಲಿರುವ 110 KV ಹೈಟೆನ್ಷನ್ ವಿದ್ಯುತ್ ಟವರ್ ಕೆಳಭಾಗದಲ್ಲಿ ಅಕ್ರಮವಾಗಿ JCB ತಂದು ಅಗೆತ ಮಾಡಲಾಗಿದೆ. ಇದು ಸರ್ಕಾರಿ ಆಸ್ತಿ ಮತ್ತು ಮೆಸ್ಕಾಂ ಇಲಾಖೆಯ ಆಸ್ತಿಗೆ ಹಾನಿ ಮಾಡುವ ಹಾಗೂ ಸಾರ್ವಜನಿಕ ಸುರಕ್ಷತೆಗೆ ಮಾರಕವಾಗುವ ಕೃತ್ಯವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರಶ್ನಿಸಲು ಹೋದ ಮಸೀದಿ ಅಧ್ಯಕ್ಷರು ಮತ್ತು ಸಮಿತಿ ಸದಸ್ಯರ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ ಎಂದು ಸುಲೈಮಾನ್ ದೂರಿನಲ್ಲಿ ತಿಳಿಸಿದ್ದಾರೆ.
ದೂರು ಸ್ವೀಕರಿಸಿದಾದ ಉಪ್ಪಿನಂಗಡಿ ಪೊಲೀಸರು ಅಬ್ದುಲ್ ನಝೀರ್, ಅಬ್ದುಲ್ ಗಫಾರ್ ಬೀಫಾತುಮ್ಮ, ಬಿ.ಎಸ್. ಅರಿಸ್ ,ರಯಾನತ್ ವಿರುದ್ಧ ಉಪ್ಪಿನಂಗಡಿ ಠಾಣೆಯಲ್ಲಿ ಅವರ ವಿರುದ್ಧ ಅಪರಾಧ ಕ್ರಮಾಂಕ 112/2026 ರಂತೆ ಬಿ.ಎನ್.ಎಸ್ 352,115(2)118(1),351(2), 190 ರಡಿ ಆ.27 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.









