ಬೆಳ್ತಂಗಡಿ: ಮಿತ್ತಬಾಗಿಲು, ಮಲವಂತಿಗೆ, ಕಡಿರುದ್ಯಾವರದಲ್ಲಿ ಪದೇಪದೇ ವಿದ್ಯುತ್ ಕಣ್ಣಾಮುಚ್ಚಾಲೆ – ಗ್ರಾಮಸ್ಥರ ಆಕ್ರೋಶ

0

ಬೆಳ್ತಂಗಡಿ:ತಾಲೂಕಿನ ಪ್ರಮುಖ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳನ್ನು ಹೊಂದಿರುವ ಮಿತ್ತಬಾಗಿಲು, ಮಲವಂತಿಗೆ ಮತ್ತು ಕಡಿರುದ್ಯಾವರ ಗ್ರಾಮಗಳಲ್ಲಿ ಪದೇಪದೇ ವಿದ್ಯುತ್ ವ್ಯತ್ಯಯ ಉಂಟಾಗುತ್ತಿರುವುದು ಗ್ರಾಮಸ್ಥರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಪ್ರಸಿದ್ಧ ಶ್ರೀ ಕ್ಷೇತ್ರ ಕೊಲ್ಲಿ ದುರ್ಗಾಪರಮೇಶ್ವರಿ ದೇವಸ್ಥಾನ ಸೇರಿದಂತೆ ಹಲವು ಧಾರ್ಮಿಕ ಹಾಗೂ ಪ್ರವಾಸಿ ಕೇಂದ್ರಗಳನ್ನು ಹೊಂದಿರುವ ಈ ಭಾಗದಲ್ಲಿ ಸಣ್ಣ ಗಾಳಿ-ಮಳೆ ಬಂದರೂ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತದೆ. ಕೆಲವೊಮ್ಮೆ ಗಂಟೆಗಟ್ಟಲೆ ಮಾತ್ರವಲ್ಲದೆ, ಇಡೀ ದಿನವಿಡೀ ವಿದ್ಯುತ್ ಇಲ್ಲದೆ ಸಾರ್ವಜನಿಕರು ಪರದಾಡುವಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.ನಿರಂತರ ವಿದ್ಯುತ್ ಕಡಿತದಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸ, ವ್ಯಾಪಾರ-ವಹಿವಾಟು ಹಾಗೂ ಜನರ ದೈನಂದಿನ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಮನೆ, ಅಂಗಡಿ ಹಾಗೂ ಸಂಸ್ಥೆಗಳಲ್ಲಿನ ಇನ್ವರ್ಟರ್ ಬ್ಯಾಟರಿಗಳು ಖಾಲಿಯಾಗುತ್ತಿದ್ದು, ಭದ್ರತೆಗಾಗಿ ಅಳವಡಿಸಿರುವ ಸಿಸಿ ಕ್ಯಾಮೆರಾಗಳೂ ಸ್ಥಗಿತಗೊಳ್ಳುತ್ತಿವೆ.

ಇದರಿಂದ ರಾತ್ರಿ ವೇಳೆ ಕಳ್ಳತನದ ಭೀತಿ ಹೆಚ್ಚಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಮೆಸ್ಕಾಂ ವಿರುದ್ಧ ಆಕ್ರೋಶ:ಈ ಮೂರು ಗ್ರಾಮಗಳಲ್ಲಿ ಪದೇಪದೇ ವಿದ್ಯುತ್ ವ್ಯತ್ಯಯಕ್ಕೆ ಕಾರಣವೇನು ಎಂಬುದನ್ನು ಮೆಸ್ಕಾಂ ಅಧಿಕಾರಿಗಳು ಗಂಭೀರವಾಗಿ ಪರಿಶೀಲಿಸಬೇಕು. ವಿದ್ಯುತ್ ಮಾರ್ಗ, ಕಂಬಗಳು, ತಾಂತ್ರಿಕ ವ್ಯವಸ್ಥೆ ಹಾಗೂ ನಿರ್ವಹಣಾ ಕಾರ್ಯಗಳನ್ನು ಸಮಗ್ರವಾಗಿ ಪರಿಶೀಲಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಸಾರ್ವಜನಿಕರ ದೂರಿಗೆ ತ್ವರಿತವಾಗಿ ಸ್ಪಂದಿಸುವ ಸಿಬ್ಬಂದಿಯನ್ನು ಈ ಸೂಕ್ಷ್ಮ ಪ್ರದೇಶಕ್ಕೆ ನಿಯೋಜಿಸಬೇಕು. ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಸಿಬ್ಬಂದಿ ವಿರುದ್ಧ ಹಿರಿಯ ಅಧಿಕಾರಿಗಳು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.”ವಿದ್ಯುತ್ ಸಮಸ್ಯೆ ಇದೇ ರೀತಿ ಮುಂದುವರಿದರೆ, ಗ್ರಾಮಸ್ಥರೆಲ್ಲ ಒಗ್ಗಟ್ಟಾಗಿ ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ. ಅದಕ್ಕೂ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಂಡು ಸಮಸ್ಯೆಗೆ ಪರಿಹಾರ ಒದಗಿಸಬೇಕು” ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಪ್ರಸಿದ್ಧ ಧಾರ್ಮಿಕ ಮತ್ತು ಪ್ರವಾಸಿ ತಾಣಗಳನ್ನು ಹೊಂದಿರುವ ಈ ಗ್ರಾಮಗಳಿಗೆ ನಿರಂತರ ಹಾಗೂ ವಿಶ್ವಾಸಾರ್ಹ ವಿದ್ಯುತ್ ಪೂರೈಕೆ ಅತ್ಯಗತ್ಯವಾಗಿದ್ದು, ಮೆಸ್ಕಾಂ ಹಿರಿಯ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here