ಸ್ಪಂದನ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ

0

ಪಟ್ರಮೆ, ಆಗಸ್ಟ್ 19: ಸ್ಪಂದನ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟ (ರಿ.), ಪಟ್ರಮೆ ಇದರ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಆ. 19 ರಂದು ಪಂಚಾಯಿತಿ ಕಚೇರಿಯಲ್ಲಿ ಒಕ್ಕೂಟದ ಅಧ್ಯಕ್ಷೆ ಶ್ರುತಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಒಕ್ಕೂಟದ ಸಿಬ್ಬಂದಿಗಳಾದ ನಳಿನಿ, ವಿದ್ಯಾ ಹಾಗೂ ಯಶೋಧ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. LCRP ನಳಿನಿ ಅವರು ಸಭೆಗೆ ಆಗಮಿಸಿದ ಎಲ್ಲರನ್ನು ಸ್ವಾಗತಿಸಿದರು. ವಲಯ ಮೇಲ್ವಿಚಾರಕಿ ವೀಣಾಶ್ರೀ ಅವರು NRLM ಯೋಜನೆಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ಬಳಿಕ ಒಕ್ಕೂಟದ ಅಧ್ಯಕ್ಷರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.2025-26ನೇ ಸಾಲಿನ ಒಕ್ಕೂಟದ ವಾರ್ಷಿಕ ವರದಿಯನ್ನು MBK ಜಯಾ ಅವರು ಮಂಡಿಸಿದರು. ವರದಿಯ ಕುರಿತು ಚರ್ಚೆ ನಡೆದ ಬಳಿಕ ಸಭೆಯ ಅನುಮೋದನೆ ಪಡೆಯಲಾಯಿತು. ಇದೇ ಸಾಲಿನ ಲೆಕ್ಕಪರಿಶೋಧನಾ ವರದಿಯನ್ನು ಪಶು ಸಖಿ ಯಶೋಧಾ ಅವರು ಮಂಡಿಸಿ, ಸಭೆಯ ಅನುಮೋದನೆ ಪಡೆದರು.

BRP-PRI ಶ್ರೀಕಲಾ ಅವರು ಸ್ತನ್ಯಪಾನ ಹಾಗೂ ಮಾದಕ ವ್ಯಸನದ ಕುರಿತು ಸಂಕ್ಷಿಪ್ತ ಮಾಹಿತಿಯನ್ನು ನೀಡಿದರು. ನಂತರ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯ ಕುರಿತು ಮಾಹಿತಿ ನೀಡಲಾಯಿತು. ವಲಯ ಮೇಲ್ವಿಚಾರಕಿ ವೀಣಾಶ್ರೀ ಅವರ ನೇತೃತ್ವದಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಿತು. ನೂತನ ಅಧ್ಯಕ್ಷೆಯಾಗಿ ದೇವಕಿ ಹಾಗೂ ಕಾರ್ಯದರ್ಶಿಯಾಗಿ ಅಶ್ವಿನಿ ಅವರನ್ನು ಆಯ್ಕೆ ಮಾಡಲಾಯಿತು.

ಆರ್ಥಿಕ ಸಾಕ್ಷರತಾ ಸಮಾಲೋಚಕಿ ಉಷಾ ಕಾಮತ್ ಅವರು ಬ್ಯಾಂಕುಗಳಲ್ಲಿ ಲಭ್ಯವಿರುವ ವಿವಿಧ ಸೌಲಭ್ಯಗಳು ಹಾಗೂ ಅವುಗಳ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು.ನಿರ್ಗಮಿತ ಅಧ್ಯಕ್ಷೆ ಶ್ರುತಿ, ಕಾರ್ಯದರ್ಶಿ ವಿದ್ಯಾಶ್ರೀ ಹಾಗೂ ನಿರ್ಗಮಿತ ಸದಸ್ಯರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ BRP-PRI ಶ್ರೀಕಲಾ ಅವರು ಮಾದಕ ವ್ಯಸನದ ವಿರುದ್ಧ ಪ್ರತಿಜ್ಞೆ ಮಾಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಶ್ರುತಿ ಅವರು ಮಾತನಾಡಿ, ಒಕ್ಕೂಟದ ಅಧ್ಯಕ್ಷರು ಹಾಗೂ ಸದಸ್ಯರ ಜವಾಬ್ದಾರಿ ಮತ್ತು ಕರ್ತವ್ಯಗಳ ಕುರಿತು ತಿಳಿಸಿದರು. ನೂತನ ಪದಾಧಿಕಾರಿಗಳು ಒಕ್ಕೂಟವನ್ನು ಇನ್ನಷ್ಟು ಉತ್ತಮ ರೀತಿಯಲ್ಲಿ ಮುನ್ನಡೆಸಬೇಕು ಹಾಗೂ ಪ್ರತಿಯೊಬ್ಬ ಸದಸ್ಯರೂ ಅಗತ್ಯ ಸಹಕಾರ ನೀಡಬೇಕು ಎಂದು ಆಶಿಸಿದರು.ಕಾರ್ಯಕ್ರಮದ ವೇದಿಕೆಯಲ್ಲಿ ಒಕ್ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಕೃಷಿ ಸಖಿ ವಿನಂತಿನಿ ಅವರು ಕಾರ್ಯಕ್ರಮ ನಿರೂಪಿಸಿದರು. LCRP ವಿದ್ಯಾ ಅವರು ವಂದನಾರ್ಪಣೆ ಸಲ್ಲಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

LEAVE A REPLY

Please enter your comment!
Please enter your name here