






ಕೊಕ್ಕಡ:ಆನೆ ಹಾವಳಿ ಹಾಗೂ ಕಸ್ತೂರಿ ರಂಗನ್ ವರದಿ ಜಾರಿಯಿಂದ ಕೃಷಿಕರಿಗೆ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಲು ಕೊಕ್ಕಡ ವಲಯದ ಬಾಧಿತ ಗ್ರಾಮಗಳ ಕೃಷಿಕರ ಸಮಾಲೋಚನಾ ಸಭೆ ಆ.14ರಂದು ಕೊಕ್ಕಡ ಶ್ರೀರಾಮ ಭಜನಾ ಮಂದಿರದಲ್ಲಿ ನಡೆಯಿತು.
ಸಭೆಯಲ್ಲಿ ಪಶ್ಚಿಮ ಘಟ್ಟ ಪ್ರದೇಶಕ್ಕೆ ಗಡಿಗುರುತು ಮಾಡುವುದು, ಜಿಲ್ಲಾಧಿಕಾರಿ ನೇತೃತ್ವದಲ್ಲಿ ಬಾಧಿತ ಪ್ರದೇಶದ ರೈತರ ಸಭೆ ನಡೆಸುವಂತೆ ಮನವಿ ಮಾಡುವುದು, ಆನೆ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ₹1 ಕೋಟಿ ಪರಿಹಾರ, ಕೃಷಿ ಹಾನಿಗೆ 10 ಪಟ್ಟು ಪರಿಹಾರ ಹಾಗೂ ಆನೆ ಹಾವಳಿ ನಿಯಂತ್ರಣಕ್ಕೆ ಟಾಸ್ಕ್‌ಪೋರ್ಸ್ ರಚಿಸುವಂತೆ ಸರಕಾರಕ್ಕೆ ಮನವಿ ಮಾಡಲು ನಿರ್ಣಯ ಕೈಗೊಳ್ಳಲಾಯಿತು.ಮಲೆನಾಡು ಹಿತರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಮಾತನಾಡಿ, ಪರಿಸರ ಸಂರಕ್ಷಣೆ ಹೆಸರಿನಲ್ಲಿ ಪಶ್ಚಿಮ ಘಟ್ಟ ಪ್ರದೇಶದ ಜನರನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು. ಕಸ್ತೂರಿ ರಂಗನ್ ವರದಿಗೆ ರಾಜ್ಯ ಸರಕಾರ ಆಕ್ಷೇಪಣೆ ಸಲ್ಲಿಸಬೇಕು. ಅಲೆಟ್ಟಿಯಿಂದ ನಾರಾವಿವರೆಗೆ ಪಶ್ಚಿಮ ಘಟ್ಟ ಪ್ರದೇಶಕ್ಕೆ ಗಡಿಗುರುತು ಮಾಡಿದರೆ ಆನೆ ಹಾಗೂ ವನ್ಯಜೀವಿ ಹಾವಳಿ ಸೇರಿದಂತೆ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದರು.
ಬಾಧಿತ ಗ್ರಾಮ ಪಂಚಾಯಿತಿಗಳಿಗೆ ಮನವಿ ನೀಡಿ, ಅಗತ್ಯವಿದ್ದಲ್ಲಿ ಪ್ರತಿಭಟನೆ ಹಾಗೂ ಸಮಾವೇಶ ನಡೆಸಲಾಗುವುದು ಎಂದರು.ಸಭೆಯ ಅಧ್ಯಕ್ಷತೆ ವಹಿಸಿದ್ದ ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ಮಾತನಾಡಿ, ಶಾಸಕರೊಂದಿಗೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಬಾಧಿತ ಪ್ರದೇಶದಲ್ಲಿ ರೈತರ ಸಭೆ ನಡೆಸುವಂತೆ ಮನವಿ ಮಾಡಲಾಗುವುದು. ಈ ಹೋರಾಟಕ್ಕೆ ಎಲ್ಲರೂ ಬೆಂಬಲ ನೀಡಬೇಕು ಎಂದರು.
ಗ್ರಾಮಸ್ಥ ಮಹೇಶ್ ಪಟ್ಲಡ್ಕ ಅವರು ಮಾತನಾಡಿ, ಆನೆ ಹಾವಳಿಯಿಂದ ಆಗುತ್ತಿರುವ ಸಮಸ್ಯೆ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳ ಗಮನಕ್ಕೆ ತಂದರೂ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ಶಾಸಕಿ ಭಾಗೀರಥಿ ಮುರುಳ್ಯ ಅವರ ಗಮನಕ್ಕೆ ತಂದಾಗ, ನಿಮಗೆ ಏನಾದರೂ ಸಮಸ್ಯೆ ಆಗಿದೆಯೇ ? ಎಂದು ನಮ್ಮನ್ನೇ ಪ್ರಶ್ನಿಸುತ್ತಾರೆ. ಪ್ರಾಣ ಹಾನಿ, ಕೃಷಿ ಹಾನಿಯಾಗುತ್ತಿದ್ದರೂ ಯಾರೂ ಕ್ರಮ ಕೈಗೊಂಡಿಲ್ಲ. ಅವರಿಗೆ ಅರಣ್ಯ, ಪ್ರಾಣಿಗಳನ್ನು ಉಳಿಸಬೇಕೆಂಬ ಕಾಳಜಿ ಇದೆ. ಆದರೆ ಮನುಷ್ಯರು ಉಳಿಯಬೇಕೆಂಬ ಕಾಳಜಿ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಆನೆ ಹಾವಳಿಗೆ ತುತ್ತಾಗಿರುವ ಗ್ರಾಮಗಳಲ್ಲಿ ಸಭೆ ನಡೆಸಿ ಬಳಿಕ ಒಂದೇ ಕಡೆ ದೊಡ್ಡ ಸಮಾವೇಶ ನಡೆಸಿ ಸರಕಾರಕ್ಕೆ ಹಕ್ಕೋತ್ತಾಯ ಮಾಡಬೇಕೆಂಬ ಬೇಡಿಕೆಯೂ ಸಭೆಯಲ್ಲಿ ವ್ಯಕ್ತವಾಯಿತು.


ಚುನಾವಣೆ ಬಹಿಷ್ಕಾರ ಸೇರಿದಂತೆ ವಿವಿಧ ರೀತಿಯಲ್ಲಿ ಹೋರಾಟ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು. ಕೊಕ್ಕಡ ವಲಯದಲ್ಲಿ ಆನೆ ಹಾವಳಿ ಜೊತೆಗೆ ಚಿರತೆ ಹಾವಳಿಯೂ ಆರಂಭಗೊಂಡಿದೆ ಎಂದು ಗ್ರಾಮಸ್ಥರು ಹೇಳಿದರು. ಸೋಲಾರ್ ಬೇಲಿ ರಚನೆ, ಆನೆ ಕಂದಕ ನಿರ್ಮಾಣ, ಪರಿಹಾರದ ಬದಲು ಆನೆಗಳ ಸ್ಥಳಾಂತರ ಸೇರಿದಂತೆ ಗ್ರಾಮಸ್ಥರು ವಿವಿಧ ಅಭಿಪ್ರಾಯ ವ್ಯಕ್ತಪಡಿಸಿದರು.ರಾಘವೇಂದ್ರ ನಾಯಕ್ ಬರ್ಗುಳ, ಕೃಷ್ಣ ಭಟ್ ಹಿತ್ತಿಲು, ಪುದುವೆಟ್ಟು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪೂರ್ಣಾಕ್ಷ, ಅರವಿಂದ್ ಕುಡ್ವ, ಜೋಮೆಟ್ ಮ್ಯಾಥ್ಯು, ಪ್ರಮೋದ್ ನಾಯರ್, ಶ್ರೀಧರ್ ಹತ್ಯಡ್ಕ, ಜೋನ್ಸನ್ ಕೌಕ್ರಾಡಿ ಹಾಗೂ ಸೇಸಪ್ಪ ಅಂತ್ರಳಿಕೆ ಅವರು ಸಭೆಯಲ್ಲಿ ಸಲಹೆ-ಸೂಚನೆ ನೀಡಿದರು.
ಜಯರಾಮ ನೆಲ್ಲಿತ್ತಾಯ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಾಲಕೃಷ್ಣ ನೈಮಿಷ ವಂದಿಸಿದರು.ಶಿಶಿಲ, ಶಿಬಾಜೆ, ಹತ್ಯಡ್ಕ, ರೆಖ್ಯ, ಕೊಕ್ಕಡ, ನಿಡ್ಲೆ, ಉದನೆ, ಶಿರಾಡಿ, ನೆಲ್ಯಾಡಿ, ಪಟ್ರಮೆ, ಕಳೆಂಜ, ಪುದುವೆಟ್ಟು ಹಾಗೂ ಕೌಕ್ರಾಡಿ ಸೇರಿದಂತೆ ವಿವಿಧ ಗ್ರಾಮಗಳ ರೈತರು ಭಾಗವಹಿಸಿದ್ದರು. ಕೊಕ್ಕಡ ಹಾಗೂ ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಹಾಗೂ ಕೊಕ್ಕಡ ಶ್ರೀರಾಮ ಸೇವಾ ಮಂದಿರದ ಸಹಯೋಗದಲ್ಲಿ ಸಭೆ ನಡೆಯಿತು.-
5 ಪ್ರಮುಖ ನಿರ್ಣಯ ಅಂಗೀಕಾರಪಶ್ಚಿಮ ಘಟ್ಟ ಪ್ರದೇಶಕ್ಕೆ ಗಡಿಗುರುತು ಮಾಡಬೇಕು
ಜಿಲ್ಲಾಧಿಕಾರಿ ನೇತೃತ್ವದಲ್ಲಿ ಬಾಧಿತ ಪ್ರದೇಶದ ರೈತರ ಸಭೆ ನಡೆಸಬೇಕು.ಆನೆ ದಾಳಿಯಿಂದ ಮೃತಪಟ್ಟ ಕುಟುಂಬಕ್ಕೆ ₹1 ಕೋಟಿ ಪರಿಹಾರ ನೀಡಬೇಕು.ಆನೆ ಹಾವಳಿ ನಿಯಂತ್ರಣಕ್ಕೆ ಟಾಸ್ಕ್‌ಪೋರ್ಸ್ ರಚಿಸಬೇಕು.ಕೃಷಿ ಹಾನಿಗೆ 10 ಪಟ್ಟು ಪರಿಹಾರ ನೀಡಬೇಕು.









