






ಬೆಳ್ತಂಗಡಿ: ಶಿಶಿಲ ಗ್ರಾಮದ ಅಕ್ರಮ-ಸಕ್ರಮ ಯೋಜನೆಯಡಿ ಸಲ್ಲಿಕೆಯಾಗಿರುವ ಅರ್ಹ ಅರ್ಜಿಗಳನ್ನು ಶೀಘ್ರವಾಗಿ ಪರಿಶೀಲಿಸಿ, ಅಕ್ರಮ-ಸಕ್ರಮ ಸಭೆಗೆ ಮಂಡಿಸಿ ಮಂಜೂರಾತಿ ನೀಡುವಂತೆ ಆಗ್ರಹಿಸಿ ಫಲಾನುಭವಿಗಳು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಶಿಶಿಲ ಗ್ರಾಮದಲ್ಲಿ ಹಲವು ವರ್ಷಗಳಿಂದ ಅಕ್ರಮ-ಸಕ್ರಮ ಅರ್ಜಿಗಳ ಮಂಜೂರಾತಿಗಾಗಿ ಅನೇಕ ಅರ್ಜಿದಾರರು ಕಾಯುತ್ತಿದ್ದಾರೆ. ಸುಮಾರು ಒಂದೂವರೆ ತಿಂಗಳ ಹಿಂದೆ ನಡೆದ ಶಿಶಿಲ ಗ್ರಾಮಸಭೆಯಲ್ಲಿ, ಕಾನೂನುಬದ್ಧವಾಗಿ ಸರಿಯಾಗಿರುವ ಕಡತಗಳನ್ನು ಮೂರು ತಿಂಗಳೊಳಗೆ ಅಕ್ರಮ-ಸಕ್ರಮ ಸಭೆಗೆ ಮಂಡಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸಂಬಂಧಪಟ್ಟ ಅಧಿಕಾರಿಗಳು ಭರವಸೆ ನೀಡಿದ್ದರು.


ಆದರೆ ಇದೀಗ ಸಂಬಂಧಪಟ್ಟ ಅಧಿಕಾರಿಗಳು ಬೇರೆಡೆಗೆ ವರ್ಗಾವಣೆಯಾಗಿರುವ ಹಿನ್ನೆಲೆಯಲ್ಲಿ ಅರ್ಜಿಗಳ ಪ್ರಗತಿ ಸ್ಥಗಿತಗೊಳ್ಳುವ ಆತಂಕ ಫಲಾನುಭವಿಗಳಲ್ಲಿ ಮೂಡಿದೆ. ಹಲವು ವರ್ಷಗಳಿಂದ ತಮ್ಮ ಜಮೀನು ಹಕ್ಕುಪತ್ರದ ನಿರೀಕ್ಷೆಯಲ್ಲಿರುವ ಅರ್ಜಿದಾರರಿಗೆ ಮತ್ತಷ್ಟು ವಿಳಂಬವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಶಿಶಿಲ ಗ್ರಾಮದ ಕಾನೂನುಬದ್ಧವಾಗಿ ಅರ್ಹವಾಗಿರುವ ಎಲ್ಲಾ ಅಕ್ರಮ-ಸಕ್ರಮ ಅರ್ಜಿಗಳನ್ನು ತ್ವರಿತವಾಗಿ ಪರಿಶೀಲಿಸಿ, ಅಕ್ರಮ-ಸಕ್ರಮ ಸಭೆಗೆ ಮಂಡಿಸಿ ಮಂಜೂರಾತಿ ನೀಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಒಂದು ವೇಳೆ ನಮ್ಮ ಬೇಡಿಕೆ ಈಡೇರದಿದ್ದಲ್ಲಿ ಬೆಳ್ತಂಗಡಿ ತಾಲೂಕು ಕಛೇರಿಗೆ ಕಾಲ್ನಡಿಗೆ ಜಾತಾ ಮೂಲಕ ಮುತ್ತಿಗೆ ಹಾಕುವುದಾಗಿ ಮನವಿಯಲ್ಲಿ ಗ್ರಾಮಸ್ಥರು ತಿಳಿಸಿದ್ದಾರೆ.









