ಎಸ್.ಡಿ.ಎಂ ಸ್ವಾಯತ್ತ ಕಾಲೇಜು ಉಜಿರೆ : ಅಂತಾರಾಷ್ಟ್ರೀಯ ಕ್ರೀಡಾಪಟವಿಗೆ ಅಭಿನಂದನಾ ಸಮಾರಂಭ

0

ಭಾರತೀಯ ಕಿರಿಯ ಪುರುಷರ ಹ್ಯಾಂಡ್‌ಬಾಲ್ ತಂಡದಲ್ಲಿ ಭಾಗವಹಿಸಿದ ಎಸ್‌.ಡಿ.ಎಂ ವಿದ್ಯಾರ್ಥಿ ಅಭಿಷೇಕ್ ಎಚ್. – ಭಾರತವನ್ನು ಪ್ರತಿನಿಧಿಸಿದ ಕಾಲೇಜಿನ ವಿದ್ಯಾರ್ಥಿ- ಚೀನಾದಲ್ಲಿ ನಡೆದ 19ನೇ ಏಷ್ಯನ್ ಕಿರಿಯ ಪುರುಷರ ಹ್ಯಾಂಡ್‌ಬಾಲ್ ಪಂದ್ಯಾಟ- ವಿದ್ಯಾರ್ಥಿಯ ಸಾಧನೆಗೆ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಂದ ಮೆಚ್ಚುಗೆ

ಉಜಿರೆ, ದಿ.ಆ.06 : ಜುಲೈ 15ರಿಂದ 26ರವರೆಗೆ ಚೀನಾದ ಚುಝೌ (Chuzhou) ನಗರದಲ್ಲಿ ನಡೆದ 19ನೇ ಏಷ್ಯನ್ ಕಿರಿಯ ಪುರುಷರ ಹ್ಯಾಂಡ್‌ಬಾಲ್ ಪಂದ್ಯಾವಳಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ಮೂಲಕ ಅತ್ಯುತ್ತಮ ಪ್ರದರ್ಶನ ನೀಡಿದ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಎಸ್‌ಡಿಎಂ) ಸ್ವಾಯತ್ತ ಕಾಲೇಜಿನ ವಿದ್ಯಾರ್ಥಿ ಹಾಗು ಎಸ್.ಡಿ.ಎಂ ಕ್ರೀಡಾ ಸಂಘದ ಹ್ಯಾಂಡ್‌ಬಾಲ್ ಆಟಗಾರ ಅಭಿಷೇಕ್ ಎಚ್ ಅವರನ್ನು ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ಹಾಗೂ ಕಾಲೇಜಿನ ವತಿಯಿಂದ ಗೌರವಿಸುವ ಅಭಿನಂದನಾ ಸಮಾರಂಭವು ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ ವಿದ್ಯಾರ್ಥಿಯನ್ನು ಸನ್ಮಾನಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಜಪಾನ್ ದೇಶದ ಕ್ಯೋಟೋ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಇನ್ಫೋರ್ಮೆಟಿಕ್ಸ್ ಪ್ರೋಗ್ರಾಮ್ ಸ್ಪೆಸಿಫಿಕ್ ರಿಸರ್ಚ್ರ್ ಡಾ. ಶಶಾಂಕ ಕುಳಮರ್ವ,ಕಾಲೇಜಿನ ಪ್ರಾಚಾರ್ಯರಾದ ಪ್ರೋ. ವಿಶ್ವನಾಥ್ ಪಿ, ಕ್ರೀಡಾ ಸಂಘದ ಕಾರ್ಯದರ್ಶಿ ರಮೇಶ್, ದೈಹಿಕ ಶಿಕ್ಷಣ ಉಪನ್ಯಾಸಕಿ ಶಾರದಾ , ತರಬೇತುದಾರ ಸುದೀನ್ ಪುಜಾರಿ ಸೇರಿದಂತೆ ಕಾಲೇಜಿನ ವಿದ್ಯಾರ್ಥಿ ಪ್ರತಿನಿಧಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಮೊದಲು ವಿದ್ಯಾರ್ಥಿ ಅಭಿಷೇಕ್ ಅವರನ್ನು ಎಸ್.ಡಿ.ಎಂ ಸಿದ್ದಾವನ ಗುರುಕುಲ ಜೀವನ ಶಿಕ್ಷಣ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳು ಅದ್ದೂರಿಯಾಗಿ ಸ್ವಾಗತಿಸಿ, ಬರಮಾಡಿಕೊಂಡರು.ಹಾಸನ ಮೂಲದ ಚನ್ನರಾಯಪಟ್ಟಣ ತಾಲೂಕಿನ ಹನುಮಂತ ಮತ್ತು ಲಕ್ಷ್ಮೀ ಬಿಜಿ ದಂಪತಿಗಳ ಮಗನಾದ ಅಭಿಷೇಕ್, ಕಳೆದ ಏಪ್ರಿಲ್ 12 ಮತ್ತು 13 ರಂದು ಜಾರ್ಖಂಡ್ ನಲ್ಲಿ ನಡೆದ ಭಾರತೀಯ ಕಿರಿಯ ಪುರುಷರ ಹ್ಯಾಂಡ್‌ಬಾಲ್ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು.

ಪ್ರಸ್ತುತ ಉಜಿರೆಯ ಎಸ್.ಡಿ.ಎಂ ಕಾಲೇಜಿನ ತೃತೀಯ ವರ್ಷದ ಬಿಬಿಎ ವಿದ್ಯಾಭ್ಯಾಸ ಮಾಡುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ದೇಶದ ಕಿರಿಯ ಪುರುಷರ ಹ್ಯಾಂಡ್‌ಬಾಲ್ ತಂಡವನ್ನು ಪ್ರತಿನಿಧಿಸುತ್ತಿದ್ದರು.

ಇವರ ಈ ಸಾಧನೆಗೆ ಭಾರತೀಯ ಹ್ಯಾಂಡ್‌ಬಾಲ್ ಸಂಸ್ಥೆ, ಕರ್ನಾಟಕ ರಾಜ್ಯ ಹ್ಯಾಂಡ್‌ಬಾಲ್ ಸಂಸ್ಥೆ ಹಾಗೂ ಎಸ್‌.ಡಿ.ಎಂ ಕ್ರೀಡಾ ಸಂಘ ವಿಶೇಷ ಸಹಕಾರ ಮತ್ತು ಪ್ರೊತ್ಸಾಹ ನೀಡಿದ್ದು, ಎಸ್‌.ಡಿ.ಎಂ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕರಾದ ಸುದೀನ ಪೂಜಾರಿ ನಿರಂತರ ತರಬೇತಿ ಹಾಗು ಮಾರ್ಗದರ್ಶನ ನೀಡಿದ್ದಾರೆ. ಅಭಿಷೇಕ್ ಅವರ ಈ ಸಾಧನೆಗೆ ಎಸ್‌.ಡಿ.ಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು.

ಅಭಿಷೇಕ್ ಎಚ್. ಇವರಿಗೆ ಎಸ್‌.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್., ಐಟಿ ಮತ್ತು ಹಾಸ್ಟೆಲ್ ಆಡಳಿತ ವಿಭಾಗದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪೂರನ್ ವರ್ಮ, ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ್ ಪಿ., ಎಸ್‌.ಡಿ.ಎಂ ಕ್ರೀಡಾ ಸಂಘದ ಕಾರ್ಯದರ್ಶಿ ರಮೇಶ್ ಎಚ್., ಉಪನ್ಯಾಸಕರು, ಪೋಷಕರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಅಭಿನಂದನೆಗಳನ್ನು ಸಲ್ಲಿಸಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತ ಹಾಗೂ ಎಸ್‌.ಡಿ.ಎಂ ಶಿಕ್ಷಣ ಸಂಸ್ಥೆಯ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿ ಎಂದು ಎಲ್ಲರೂ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಮುಖ್ಯಸ್ಥರು, ವಿವಿಧ ವಿಭಾಗಗಳ ಉಪನ್ಯಾಸಕರು ಸೇರಿದಂತೆ ಸಾವಿರಾರು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಕವನ ಮತ್ತು ಅನ್ವಿತಾ ನಿರೂಪಿಸಿ, ವಿದ್ಯಾರ್ಥಿನೆವಿಲ್ ನವೀನ್ ಮೋರಸ್ ವಂದಿಸಿದರು.

ಹ್ಯಾಂಡ್‌ಬಾಲ್ ನಲ್ಲಿ ಅಭಿಷೇಕ್ ಹಲವು ಸಾಧನೆ : 19ನೇ ಏಷ್ಯನ್ ಕಿರಿಯ ಪುರುಷರ ಹ್ಯಾಂಡ್‌ಬಾಲ್ ಪಂದ್ಯಾಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸುತ್ತಿರುವ ಉಜಿರೆಯ ಎಸ್.ಡಿ.ಎಂ ಕಾಲೇಜಿನ ವಿದ್ಯಾರ್ಥಿ ಅಭಿಷೇಕ್, ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ನಡೆದ ಜೂನಿಯರ್ ರಾಷ್ಟ್ರೀಯ ಹ್ಯಾಂಡ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಭಾಗವಹಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ನಡೆದ 54ನೇ ಹಿರಿಯರ ರಾಷ್ಟ್ರೀಯ ಹ್ಯಾಂಡ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲೂ ಭಾಗವಹಿಸಿದ್ದಾರೆ. ಈ ಹಿಂದೆ 2025–26ನೇ ಸಾಲಿನಲ್ಲಿ ತಮಿಳುನಾಡಿನ ವೆಲ್ಲೂರಿನ VIT ವಿಶ್ವವಿದ್ಯಾಲಯದಲ್ಲಿ ನಡೆದ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಹ್ಯಾಂಡ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದಾರೆ.2024–25ನೇ ಸಾಲಿನಲ್ಲಿ ತಮಿಳುನಾಡಿನ ಸೇಲಂನ ಪೆರಿಯಾರ್ ವಿಶ್ವವಿದ್ಯಾಲಯದಲ್ಲಿ ನಡೆದ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಹ್ಯಾಂಡ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದಾರೆ.

, ” ಬಾಲ್ಯದಿಂದಲೇ ಹ್ಯಾಂಡ್‌ಬಾಲ್ ಕ್ರೀಡೆಯಲ್ಲಿ ಅಭಿಷೇಕ್ ಅಪಾರ ಆಸಕ್ತಿ ಹೊಂದಿದ್ದ. ಆತನ ಪ್ರತಿಭೆ ಮತ್ತು ಪರಿಶ್ರಮಕ್ಕೆ ಹಲವು ಅವಕಾಶಗಳನ್ನು ಕಲ್ಪಿಸಿಕೊಟ್ಟಿದ್ದು, ಉಜಿರೆಯ ಎಸ್.ಡಿ.ಎಂ ಶಿಕ್ಷಣ ಸಂಸ್ಥೆ. ಇಲ್ಲಿ ಪಡೆದ ಉತ್ತಮ ತರಬೇತಿ, ಕ್ರೀಡಾ ಸೌಲಭ್ಯ ಹಾಗೂ ಸಂಸ್ಥೆಯಿಂದ ದೊರೆತ ನಿರಂತರ ಮಾರ್ಗದರ್ಶನದಿಂದ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಹ್ಯಾಂಡ್‌ಬಾಲ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದು ಸಂತಸ ತಂದಿದೆ. ಆತನಿಗೆ ಶುಭಾಶಯಗಳನ್ನು ಕೋರುತ್ತಾ, ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ಸೇರಿದಂತೆ ಪ್ರೊತ್ಸಾಹಿಸಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.”

– ಲಕ್ಷ್ಮಿ (ಅಭಿಷೇಕ್ ಎಚ್. ರವರ ತಾಯಿ)

“ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಸಾಗುತ್ತಿರುವ ಎಲ್ಲಾ ಶಿಕ್ಷಣ ಸಂಸ್ಥೆಗಳು ಶಿಸ್ತು, ಸಂಸ್ಕಾರ, ಮೌಲ್ಯಯುತ ಮತ್ತು ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಕ್ರೀಡೆಗೂ ವಿಶೇಷ ಪ್ರೋತ್ಸಾಹ ಮತ್ತು ಸಹಕಾರವನ್ನು ನೀಡುತ್ತಿದೆ. ಈಗಾಗಲೇ ಹಲವು ಜನ ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಈ ನಡುವೆ ಇಂದು ಉಜಿರೆಯ ಎಸ್.ಡಿ.ಎಂ ಪದವಿ ಕಾಲೇಜಿನ ಹಾಗು ಎಸ್.ಡಿ.ಎಂ ಕ್ರೀಡಾ ಸಂಘದ ವಿದ್ಯಾರ್ಥಿ ಅಭಿಷೇಕ್ ಎಚ್.ಚೀನಾದ ಚುಝೌ (Chuzhou) ನಗರದಲ್ಲಿ ನಡೆದ 19ನೇ ಏಷ್ಯನ್ ಕಿರಿಯ ಪುರುಷರ ಹ್ಯಾಂಡ್‌ಬಾಲ್ ಪಂದ್ಯದಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಮೂಲಕ ವಿಶೇಷ ಸಾಧನೆ ಮೆರೆದಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ ಎಸ್.ಡಿ.ಎಂ ಸಂಸ್ಥೆಯ ಸಾಧನೆಯ ಗರಿಮೆಯನ್ನು ಮತ್ತಷ್ಟು ಹೆಚ್ಚಿಸಿದೆ. ಮುಂದಿನ ಕ್ರೀಡಾ ಬದುಕು ಯಶಸ್ವಿಯಾಗಲಿ ಎಂದು ಎಸ್.ಡಿ.ಎಂ ಸಂಸ್ಥೆಯ ಸಿಬ್ಬಂದಿಗಳು ಶುಭ ಹಾರೈಸುತ್ತೇವೆ.”

– ಡಾ. ಸತೀಶ್ಚಂದ್ರ ಎಸ್, ಕಾರ್ಯದರ್ಶಿಗಳು ಎಸ್.ಡಿ.ಎಂ ಶಿಕ್ಷಣ ಸಂಸ್ಥೆ

LEAVE A REPLY

Please enter your comment!
Please enter your name here