






ಶಿಶಿಲ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಕಪಿಲಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಶಿಶಿಲದ ದೇವಸ್ಥಾನದ ಸಮೀಪದ ಕಿಂಡಿ ಆಣೆಕಟ್ಟು ಮುಳುಗಡೆಯಾಗಿದೆ. ಇದರಿಂದ ದೇವಸ್ಥಾನಕ್ಕೆ ಆಗಮಿಸುವ ಭಕ್ತರು ಹಾಗೂ ಸ್ಥಳೀಯ ಗ್ರಾಮಸ್ಥರ ಸಂಚಾರಕ್ಕೆ ತೊಂದರೆ ಉಂಟಾಗಿದೆ.
ಕಳೆದ ವರ್ಷದ ಮಳೆಗಾಲದಲ್ಲಿಯೂ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿ, ಆಣೆಕಟ್ಟು ಮುಳುಗಡೆಯಿಂದ ದೇವಸ್ಥಾನದ ತಡೆಗೋಡೆ ಕುಸಿದು ದೇವಸ್ಥಾನದ ಆವರಣದೊಳಗೆ ನೀರು ನುಗ್ಗಿ ಹಾನಿಯಾಗಿತ್ತು. ಈ ಬಾರಿ ಕೂಡ ಅಂತಹ ಪರಿಸ್ಥಿತಿ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ.
ಕಪಿಲಾ ನದಿಯಲ್ಲಿ ಹರಿದು ಬಂದ ಮರದ ದಿಮ್ಮಿಗಳು ಕಿಂಡಿ ಆಣೆಕಟ್ಟಿನಲ್ಲಿ ಸಿಲುಕಿ ನೀರು ಸರಾಗವಾಗಿ ಹರಿಯದಿರುವುದರಿಂದ ಪ್ರತಿ ಮಳೆಗಾಲದಲ್ಲೂ ಈ ಸಮಸ್ಯೆ ಮರುಕಳಿಸುತ್ತಿದೆ. ಇದರಿಂದ ನದಿಯ ನೀರು ಹಿಂದಕ್ಕೆ ನಿಂತು ಆಣೆಕಟ್ಟು ಶೀಘ್ರ ಮುಳುಗಡೆಯಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.



ಈ ಹಿನ್ನೆಲೆಯಲ್ಲಿ ಸ್ಥಳೀಯರ ಸಹಕಾರದೊಂದಿಗೆ ಗ್ರಾಮಸ್ಥ ರಮೇಶ್ ಅವರ ಹಿಟಾಚಿ ಯಂತ್ರದ ಮೂಲಕ ಆಣೆಕಟ್ಟಿನಲ್ಲಿ ಸಿಲುಕಿದ್ದ ಮರದ ದಿಮ್ಮಿಗಳನ್ನು ತೆರವುಗೊಳಿಸುವ ಕಾರ್ಯ ಭರದಿಂದ ನಡೆಯುತ್ತಿದೆ.
“ಪ್ರತಿ ಮಳೆಗಾಲದಲ್ಲೂ ಕಿಂಡಿ ಆಣೆಕಟ್ಟಿನಲ್ಲಿ ಮರದ ದಿಮ್ಮಿಗಳು ಸಿಲುಕಿ ನೀರಿನ ಹರಿವಿಗೆ ಅಡ್ಡಿಯಾಗುವುದರಿಂದ ಮುಳುಗಡೆಯ ಸಮಸ್ಯೆ ಎದುರಾಗುತ್ತಿದೆ. ಸ್ಥಳೀಯರ ಸಹಕಾರದಿಂದ ಮರದ ದಿಮ್ಮಿಗಳನ್ನು ತೆರವುಗೊಳಿಸುವ ಕಾರ್ಯ ಕೈಗೊಳ್ಳಲಾಗಿದೆ,” ಎಂದು ಪಂಚಾಯತ್ ಮಾಜಿ ಅಧ್ಯಕ್ಷ ಸಂದೀಪ್ ಅಮ್ಮುಡಂಗೆ ತಿಳಿಸಿದ್ದಾರೆ.
ಸ್ಥಳೀಯರು, ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಸಂಬಂಧಪಟ್ಟ ಇಲಾಖೆಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.









