







ಪಾದೆಗುತ್ತು ಲಿಂಗಪ್ಪ ಮಾಸ್ತರ್ ಎಜುಕೇಷನಲ್ ಟ್ರಸ್ಟ್ (ರಿ.) ನಿಂದ ನಡೆಸಲ್ಪಡುವ ಎಲ್.ಸಿ.ಆರ್ ವಿದ್ಯಾಸಂಸ್ಥೆಗಳು ಕಕ್ಯಪದವು ಇಲ್ಲಿನ ಪದವಿಪೂರ್ವ ವಿಭಾಗದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕಾರ್ಯಚಟುವಟಿಕೆಗಳ ಉದ್ಘಾಟನಾ ಸಮಾರಂಭವು ಜು 22.ರಂದು ನೆರವೇರಿತು.
ಉದ್ಘಾಟಕರಾಗಿ ಬಿ.ಮೂಡ ಸರಕಾರಿ ಪದವಿಪೂರ್ವ ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸ ಕರು ,ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿಗಳಾದ ದಾಮೋದರ ಇ.ಇವರು ಭಾಗವಹಿಸಿ ಎನ್.ಎಸ್.ಎಸ್.ಕೇವಲ ಒಂದು ಯೋಜನೆಯಲ್ಲ ಅದು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಒಂದು ಉತ್ತಮ ವೇದಿಕೆಯಾಗಿದೆ.
ಈ ಯೋಜನೆಯ ಮೂಲಕ ಸೇವಾ ಚಟುವಟಿಕೆಗಳಿಂದ ನಾಯಕತ್ವ ಗುಣ, ಶಿಸ್ತು, ತಂಡದೊಂದಿಗೆ ಕೆಲಸ ಮಾಡುವ ಸಾಮರ್ಥ್ಯ, ಆತ್ಮವಿಶ್ವಾಸ ಮತ್ತು ಸಮಾಜದ ಬಗ್ಗೆ ಕಾಳಜಿ ಬೆಳೆಯುತ್ತದೆ. ಸಮಾಜಕ್ಕೆ ಸೇವೆ ಸಲ್ಲಿಸುವುದೇ ನಿಜವಾದ ದೇಶಸೇವೆ ಎಂಬ ಸಂದೇಶವನ್ನು ನಮಗೆ ಕಲಿಸುತ್ತದೆ.


ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ಎನ್.ಎಸ್.ಎಸ್ ಚಟುವಟಿಕೆಗಳಲ್ಲಿ ಭಾಗವಹಿಸಿ, ಉತ್ತಮ ನಾಗರಿಕರಾಗಿ ಸಮಾಜದ ಅಭಿವೃದ್ಧಿಗೆ ತಮ್ಮ ಕೊಡುಗೆ ನೀಡಬೇಕು ಎಂದರು.
ಸಂಸ್ಥೆಯ ಪ್ರಾಂಶುಪಾಲ ಜೋಸ್ಟನ್ ಲೋಬೊ ಅಧ್ಯಕ್ಷೀಯ ಮಾತುಗಳಿಂದ ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವದ ಕುರಿತು ಪ್ರೇರಣಾತ್ಮಕ ಮಾತುಗಳ ಜೊತೆಗೆ ವಿದ್ಯಾರ್ಥಿಗಳ ವ್ಯಕ್ತಿತ್ವದ ಬದಲಾವಣೆಯಲ್ಲಿ ಎನ್.ಎಸ್.ಎಸ್ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಸಂಸ್ಥೆಯ ಸಂಚಾಲಕ ಬಬಿತಾ.ಆರ್.ನಾಥ್ ಅಧ್ಯಕ್ಷತೆ ವಹಿಸಿ, ಕಾರ್ಯದರ್ಶಿ ಶಿವಾನಿ ಆರ್.ನಾಥ್, ಟ್ರಸ್ಟಿಗಳಾದ ಶ್ರೀಯುತ ಯಜ್ಞೇಶ್ ರಾಜ್ , ಸಂಯೋಜಕ ಯಶವಂತ್.ಜಿ.ನಾಯಕ್, ಮುಖ್ಯಶಿಕ್ಷಕಿ ವಿಜಯಾ.ಕೆ ಉಪಸ್ಥಿತರಿದ್ದರು.
ರಾಷ್ಟ್ರೀಯ ಯೋಜನಾ ಘಟಕದ ಯೋಜನಾಧಿಕಾರಿ ವಿಂದ್ಯಾಶ್ರೀ ಎ, ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ಪದವಿಪೂರ್ವ ವಿಭಾಗದ ಮುಖ್ಯಸ್ಥರಾದ ಸೌಮ್ಯ ಎನ್ ವಂದಿಸಿ, ಸಹಯೋಜನಾಧಿಕಾರಿ ಜಯಶ್ರೀ. ಕಾರ್ಯಕ್ರಮ ನಿರೂಪಿಸಿದರು.









